ರಾಜ್ಯದಲ್ಲಿ ಮತ್ತೊಂದು ಬಸ್‌ ದುರಂತ – 40 ಪ್ರಯಾಣಿಕರಿದ್ದ ಖಾಸಗಿ ಬಸ್‌ ಬೆಂಕಿಗಾಹುತಿ!  

ರಾಜ್ಯದಲ್ಲಿ ಮತ್ತೊಂದು ಬಸ್‌ ದುರಂತ – 40 ಪ್ರಯಾಣಿಕರಿದ್ದ ಖಾಸಗಿ ಬಸ್‌ ಬೆಂಕಿಗಾಹುತಿ!  

ರಾಜ್ಯದಲ್ಲಿ ದಿನೇ ದಿನೇ ಬಸ್‌ ಬೆಂಕಿ ದುರಂತ ಹೆಚ್ಚಾಗುತ್ತಿದೆ. ಚಿತ್ರದುರ್ಗ ಸಮೀಪ ನಡೆದ ಖಾಸಗಿ ಬಸ್‌ ಬೆಂಕಿ ದುರಂತ  ನೆನಪಿನಿಂದ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಬಸ್‌ ಬೆಂಕಿಗೆ ಆಹುತಿಯಾಗಿದೆ. ನೆಲಮಂಗಲದಲ್ಲಿ ಖಾಸಗಿ ಬಸ್ ಸಂಪೂರ್ಣ ಹೊತ್ತಿ ಉರಿದಿದೆ.

ಇದನ್ನೂ ಓದಿ: ಡೆಲ್ಲಿಗೆ ಮಣ್ಣು ಮುಕ್ಕಿಸಿ 2ನೇ ಸಲ ಕಪ್‌ ಎತ್ತಿ ಹಿಡಿದ ಆರ್‌ಸಿಬಿ

ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಂಜನಾ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ಹೊತ್ತಿ ಉರಿದಿದೆ. ಬಸ್‌ನಲ್ಲಿ 40 ಪ್ರಯಾಣಿಕರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹನುಮಂತಪುರ ಗೇಟ್ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹನುಮಂತಪುರ ಗೇಟ್ ಬಳಿ ಹೆದ್ದಾರಿ ಕಾಮಗಾರಿ ಹಿನ್ನೆಲೆ ಬಸ್ ನಿಧಾನವಾಗಿ ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ವಿಷಯ ತಿಳಿದು ನೆಲಮಂಗಲ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Shwetha M