ಮಂಗಳೂರಿನಲ್ಲಿ ಸ್ಕೂಟರ್‌ಗೆ ಖಾಸಗಿ ಬಸ್‌ ಡಿಕ್ಕಿ! – ಮದುವೆ ನಿಶ್ಚಯವಾಗಿದ್ದ ಯುವತಿ ದುರಂತ ಅಂತ್ಯ!

ಮಂಗಳೂರಿನಲ್ಲಿ ಸ್ಕೂಟರ್‌ಗೆ ಖಾಸಗಿ ಬಸ್‌ ಡಿಕ್ಕಿ! – ಮದುವೆ ನಿಶ್ಚಯವಾಗಿದ್ದ ಯುವತಿ ದುರಂತ ಅಂತ್ಯ!

ಖಾಸಗಿ ಬಸ್ಸುಗಳ ಅತಿವೇಗದ ಚಾಲನೆಗೆ ಮಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದೆ. ಮಂಗಳೂರಿನ ನಂತೂರು ಬಳಿ ಸ್ಕೂಟರ್‌ಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದಿದ್ದು, ಯುವತಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಪ್ರೀತಿ ಮಾಡುವಂತೆ ಶಿಕ್ಷಕಿ ಹಿಂದೆ ಬಿದ್ದ ವಿದ್ಯಾರ್ಥಿ!  – ಒಪ್ಪದಿದ್ದಕ್ಕೆ ತುಟಿಯನ್ನೇ ಕಚ್ಚಿದ ಬಾಲಕ!  

ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ (26) ಮೃತಪಟ್ಟ ಯುವತಿ. ತನ್ನ ಭಾವಿ ಪತಿಯೊಂದಿಗೆ ಶಿವಭಾಗ್ ಕಡೆಯಿಂದ ವಾಮಂಜೂರಿಗೆ ಜನ್ಮದಿನದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅಷ್ಟಕ್ಕೂ ಆಗಿದ್ದೇನು?

ಕದ್ರಿ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಸಾಗುತ್ತಿದ್ದ 22 ನಂಬರಿನ ಖಾಸಗಿ ಬಸ್, ದೀಪ್ತಿ ಅವರು ಸಾಗುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್‌ನಿಂದ ಕೆಳಗೆ ಬಿದ್ದ ದೀಪ್ತಿ ಅವರ ಹೊಟ್ಟೆಯ ಮೇಲೆ ಬಸ್ಸಿನ ಚಕ್ರ ಹರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಅದೃಷ್ಟವಶಾತ್ ಸ್ಕೂಟರ್ ಚಲಾಯಿಸುತ್ತಿದ್ದ ಭಾವಿ ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ನಂತರ ಮಂಗಳೂರಿನಲ್ಲಿ ಖಾಸಗಿ ಬಸ್ ಚಾಲಕರ ಬೇಜವಾಬ್ದಾರಿ ಚಾಲನೆ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಮೃತ ಯುವತಿಯ ಸಂಬಂಧಿಕರು ಹಾಗೂ ನೂರಾರು ಗ್ರಾಮಸ್ಥರು ಮಂಗಳೂರಿನ ಕದ್ರಿ ಸಂಚಾರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಖಾಸಗಿ ಬಸ್ಸುಗಳ ಮೇಲೆ ನಿಯಂತ್ರಣ ಹೇರುವಂತೆ ಮತ್ತು ಮೃತ ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

ಬಸ್ ಚಾಲಕನ ನಿರ್ಲಕ್ಷ್ಯವೇ ಈ ಸಾವಿಗೆ ನೇರ ಕಾರಣ ಎಂದು ಆರೋಪಿಸಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಸದ್ಯ ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಮತ್ತು ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪ್ರಕ್ರಿಯೆ ಆರಂಭವಾಗಿದೆ.

Shwetha M