ಅಬ್ಬಬ್ಬಾ.. ಆಟಿಕೆಯನ್ನು ನುಂಗಿದ ಪುಟ್ಟ ಕಂದಮ್ಮ! – ಆಮೇಲೆ ಏನಾಯ್ತು ಗೊತ್ತಾ?

ಅಬ್ಬಬ್ಬಾ.. ಆಟಿಕೆಯನ್ನು ನುಂಗಿದ ಪುಟ್ಟ ಕಂದಮ್ಮ! – ಆಮೇಲೆ ಏನಾಯ್ತು ಗೊತ್ತಾ?

ಪುಟ್ಟ ಮಕ್ಕಳನ್ನು ಮೈಯೆಲ್ಲಾ ಕಣ್ಣಾಗಿಟ್ಟುಕೊಂಡು ನೋಡಬೇಕು. ಸ್ವಲ್ಪ ಎಚ್ಚರ ತಪ್ಪಿದ್ರೂ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಇದೀಗ ಇಲ್ಲೊಂದು ಮಗು ಆಟಿಕೆಯನ್ನು ನುಂಗಿದ್ದು, ಪೋಷಕರಿಗೆ ಜೀವ ಬಾಯಿಗೆ ಬರುವಂತೆ ಮಾಡಿದೆ.

ಇದನ್ನೂ ಓದಿ: ಮಧ್ಯಾಹ್ನ ಮಲಗಿ ಸಂಜೆ ಎದ್ದ ಬಾಲಕ! – ಬೆಳಗ್ಗೆ ಆಯ್ತು ಅಂದುಕೊಂಡು ಸ್ಕೂಲ್‌ಗೆ ಹೊರಟೇಬಿಟ್ಟ!

ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲೊಂದು ಪುಟ್ಟ ಮಗು ಪೋಷಕರು ನೀಡಿದ ಆಟದ ಸಾಮಾನನ್ನೇ ನುಂಗಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ವೈದ್ಯರ ಸಮಯ ಪ್ರಜ್ಞೆಯಿಂದಾಗಿ ಮಗು ಬದುಕುಳಿದಿದೆ.

ಆಟವಾಡುತ್ತಿದ್ದ ಮಗು ವಂಶ್ ತನ್ನ ಬಳಿ ಇದ್ದ ಪುಟ್ಟ ಆಟದ ಸಾಮಾನನ್ನು ನುಂಗಿದೆ. ಶೀಘ್ರದಲ್ಲೇ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ವಾಂತಿ ಮಾಡುವುದಕ್ಕೆ ಆರಂಭಿಸಿದೆ. ಇತ್ತ ಮಗುವಿನ ಬಳಿ ಇದ್ದ ಆಟಿಕೆ ಕಾಣೆಯಾಗಿರುವುದನ್ನು ಗಮನಿಸಿದ ತಾಯಿ ಅದರ ಬಗ್ಗೆ ಕೇಳಿದಾಗ ಮಗು ತಾನು ನುಂಗಿರುವುದಾಗಿ ಹೇಳಿದೆ. ಕೂಡಲೇ ಮಗುವನ್ನು ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಅಹ್ಮದಾಬಾದ್‌ನ ಸಿವಿಲ್ ಆಸ್ಪತ್ರೆಯ ವೈದ್ಯರು ಪ್ರಕರಣದ ಗಂಭೀರತೆಯನ್ನು ಅರಿತು ಕೂಡಲೇ ಮಗುವಿಗೆ ಸ್ಕ್ಯಾನಿಂಗ್ ಮಾಡಿದಾಗ, ಹೊಟ್ಟೆಯೊಳಗಡೆ ಪ್ಲಾಸ್ಟಿಕ್ ಆಟಿಕೆ ಕಾಣಿಸಿದೆ. ಅದು ಮುರಿದ ಆಟಿಕೆ ಆಗಿರಲಿಲ್ಲ ಬದಲಾಗಿ ಅವೆಂಜರ್ಸ್ ಪಾತ್ರದ ಹಲ್ಕ್‌ನ ಆಕಾರದಲ್ಲಿರುವ ಸಂಪೂರ್ಣ ಆಟಿಕೆಯಾಗಿತ್ತು, ಅದರ ತಲೆ, ಕೈಗಳು ಮತ್ತು ಕಾಲುಗಳು ಹಾಗೇ ಇದ್ದವು.

ಆಹಾರ ಕೊಳವೆ ಮತ್ತು ಹೊಟ್ಟೆಯ ನಡುವಿನ ನೈಸರ್ಗಿಕ ಕವಾಟದ ಮೂಲಕ ಇಷ್ಟು ದೊಡ್ಡ ವಸ್ತುವನ್ನು ಹೊರತೆಗೆಯುವುದು ದೊಡ್ಡ ಸವಾಲಾಗಿತ್ತು ಎಂದು ಚಿಕಿತ್ಸಾ ವೈದ್ಯಕೀಯ ತಂಡದ ಭಾಗವಾಗಿರುವ ಡಾ. ರಾಕೇಶ್ ಜೋಶಿ ವಿವರಿಸಿದರು. ವೈದ್ಯರು ಎಂಡೋಸ್ಕೋಪ್‌ನಂತಹ ಸೂಕ್ಷ್ಮ ಉಪಕರಣವನ್ನು ಬಳಸಿ ಆಟಿಕೆಯನ್ನು ಹಿಡಿದಿಡಲು ಪ್ರಯತ್ನಿಸಿದಾಗ ಹೊಟ್ಟೆಯಲ್ಲಿ ಗಾಳಿಯಿರುವುದರಿಂದ ಆಟಿಕೆ ಪದೇ ಪದೇ ಜಾರುತಿತ್ತು, ಆಟಿಕೆಯನ್ನು ಅದರ ಕೈಗಳಿಂದ ಅಥವಾ ಕಾಲುಗಳಿಂದ ಎಳೆದರೆ ಅದು ಕವಾಟದಲ್ಲಿ ಸಿಲುಕಿಕೊಳ್ಳಬಹುದು ಮತ್ತು ಶಾಶ್ವತ ಹಾನಿಗೆ ಕಾರಣವಾಗಬಹುದು ಎಂದು ಡಾ. ಜೋಶಿ ವಿವರಿಸಿದರು. ನಂತರ ಬಹಳ ತಾಳ್ಮೆ ಮತ್ತು ನಿಖರತೆಯ ನಂತರ ವೈದ್ಯರು ಆಟಿಕೆಯ ತುದಿಯನ್ನು ದೃಢವಾಗಿ ಹಿಡಿದು, ಗಾಯವಾಗದಂತೆ ಎಚ್ಚರಿಕೆಯಿಂದ ಕವಾಟದ ಆಚೆಗೆ ಎಳೆಯುವಲ್ಲಿ ಯಶಸ್ವಿಯಾದರು ಎಂದು ವೈದ್ಯರು ಹೇಳಿದ್ದು, ಈ ಆಪರೇಷನ್‌ನ ವೀಡಿಯೋವನ್ನು ಕೂಡ ಅವರು ಹಂಚಿಕೊಂಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಒಂದು ವೇಳೆ ಈ ಆಟಿಕೆ ಕರುಳಿನೊಳಗೆ ಮತ್ತಷ್ಟು ಹೋಗಿದ್ದರೆ, ಕರುಳು ಛಿದ್ರವಾಗುವ ಗಂಭೀರ ಅಪಾಯವಿತ್ತು, ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು ಅದೃಷ್ಟವಶಾತ್, ಅಂತಹ ಯಾವುದೇ ತೊಡಕುಗಳು ಉಂಟಾಗುವುದಕ್ಕಿಂತ ಮೊದಲೇ ವೈದ್ಯಕೀಯ ತಂಡವು ಆಟಿಕೆಯನ್ನು ಯಶಸ್ವಿಯಾಗಿ ತೆಗೆದುಹಾಕಲು ಸಾಧ್ಯವಾಯಿತು ಎಂದು ಅವರು ಹೇಳಿದರು. ಬಾಲಕ ವಂಶ್ ಈಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದ ವೈದ್ಯರು, ಪೋಷಕರು ಮಕ್ಕಳಿಗೆ ಈ ರೀತಿ ಆಟದ ಸಾಮಾನು ನೀಡಬಾರದು ಎಂದು ಹೇಳಿದ್ದಾರೆ.

Shwetha M