ನೂರಾರು ಜೇನುನೊಣ ಕಚ್ಚಿದ್ರೂ 20 ಮಕ್ಕಳನ್ನು ರಕ್ಷಿಸಿದ ಮಹಿಳೆ! – ಬದುಕುಳಿಯಲೇ ಇಲ್ಲ ಮಹಾತಾಯಿ!

ತಾಯಿ ಎಂದ ತಕ್ಷಣ ನಮ್ಮನ್ನು ಹೆತ್ತವಳು ಎಂದಷ್ಟೇ ತಿಳಿಯಬೇಕಿಲ್ಲ. ತಾಯಿ ಹೃದಯ ಹೊಂದಿದವರೆಲ್ಲಾ ತಾಯಿ ಸಮಾನರು. ಇದೀಗ ಇಲ್ಲೊಬ್ಬಳು ಮಹಾತಾಯಿ ಅಂಗನವಾಡಿ ಮಕ್ಕಳಿಗಾಗಿ ತನ್ನ ಪ್ರಾಣವನ್ನೇ ಬಲಿಕೊಟ್ಟಿದ್ದಾಳೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್! – ಟಿಕೆಟ್ ದರ ಏರಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟ BMRCL
ಈ ಮನ ಮಿಡಿಯುವ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಜಾವಾದ್ ತಹಸಿಲ್ನ ರಣಪುರ ಗ್ರಾಮದಲ್ಲಿ ನಡೆದಿದೆ. ಅಂಗನವಾಡಿ ಕಾರ್ಯಕರ್ತೆಯೊಬ್ಬರು ಜೇನು ನೊಣಗಳಿಂದ ಮಕ್ಕಳನ್ನು ಕಾಪಾಡಲು ತನ್ನ ಪ್ರಾಣವನ್ನೇ ಬಲಿಕೊಟ್ಟಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಮಡವಾಡ ಪಂಚಾಯತ್ ಬಳಿ ಅಂಗನವಾಡಿ ಆವರಣದಲ್ಲಿ ಮಕ್ಕಳು ಆಡ್ತಿದ್ದರು. ಜೇನುನೊಣಗಳ ಹಿಂಡು ಇದ್ದಕ್ಕಿದ್ದಂತೆ ಮಕ್ಕಳ ಮೇಲೆ ದಾಳಿ ಮಾಡಿದೆ. ಜೇನುನೊಣದ ದಾಳಿಯಿಂದ ಮಕ್ಕಳು ಭಯಗೊಂಡಿದ್ದರು. ಅಂಗನವಾಡಿಯಲ್ಲಿ ಅಡುಗೆ ಮಾಡ್ತಿದ್ದ ಕಾಂಚನ್ ಬಾಯಿ ಮೇಘವಾಲ್ ಇದನ್ನ ನೋಡಿ ಅಲ್ಲಿಗೆ ಬಂದಿದ್ದಾರೆ. ಕೂಡಲೇ ಕಾಂಚನ್ ಬಾಯಿ, ತಮ್ಮ ಪ್ರಾಣವನ್ನು ಲೆಕ್ಕಿಸದೆ, ಮಕ್ಕಳನ್ನು ಕಾಪಾಡಲು ಹೊರಟಿದ್ದಾರೆ. ಅಲ್ಲೇ ಇದ್ದ ಟಾರ್ಪಾಲ್ ಮತ್ತು ಚಾಪೆಯಿಂದ ಮುಚ್ಚಿ ಒಬ್ಬೊಬ್ಬರಾಗಿ ಸುಮಾರು 20 ಮಕ್ಕಳನ್ನು ಸುರಕ್ಷಿತವಾಗಿ ಕೋಣೆಗೆ ಕರೆದೊಯ್ದರು. ಈ ಸಮಯದಲ್ಲಿ, ನೂರಾರು ಜೇನುನೊಣಗಳ ಹಿಂಡು ಕಾಂಚನ್ ಬಾಯಿ ಮೇಲೆ ದಾಳಿ ಮಾಡಿದೆ. ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿದ್ದ ಕಾಂಚನ್ ಬಾಯಿಗೆ ಇದರ ಪರಿವೆ ಇರಲಿಲ್ಲ. ಅಷ್ಟರಲ್ಲಾಗಲೇ ಕಾಂಚನ್‌ಗೆ ನೂರಾರು ಜೇನು ನೊಣಗಳು ಕಚ್ಚಿವೆ. ಇದ್ರಿಂದಾಗಿ ಆಕೆಯ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಚಿಕಿತ್ಸೆಗೂ ಮುನ್ನವೇ ಕಾಂಚನಾ ಬಾಯಿ ಸಾವನ್ನಪ್ಪಿದ್ದಾರೆ.
ಜೈ ಮಾತಾ ದಿ ಸ್ವ-ಸಹಾಯ ಗುಂಪಿನ ಅಧ್ಯಕ್ಷೆಯಾಗಿ ಕಾಂಚನ್ ಬಾಯಿ ಗ್ರಾಮದಲ್ಲಿ ಸಕ್ರಿಯ ಮತ್ತು ಗೌರವಾನ್ವಿತ ಮಹಿಳೆಯಾಗಿದ್ದರು. ಅವರ ಸಾವು ಕುಟುಂಬ ಮಾತ್ರವಲ್ಲ ಇಡೀ ಗ್ರಾಮವನ್ನು ದುಃಖದಲ್ಲಿ ಮುಳುಗಿಸಿದೆ. ಅವರ ಪತಿ ಶಿವಲಾಲ್ ಈಗಾಗಲೇ ಗಂಭೀರ ಕಾಯಿಲೆ, ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದಾರೆ. ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು ತಾಯಿಯ ಪ್ರೀತಿಯನ್ನು ಕಳೆದುಕೊಂಡಿದ್ದಾರೆ.
ಘಟನೆಯ ನಂತರ ಇಡೀ ರಣಪುರ ಗ್ರಾಮದಲ್ಲಿ ಶೋಕ ಮತ್ತು ಭೀತಿಯ ವಾತಾವರಣ ಆವರಿಸಿದೆ. ಅಂಗನವಾಡಿಯ ಬಳಿಯ ಮರದ ಮೇಲೆ ಜೇನು ಗೂಡುಕಟ್ಟಿತ್ತು. ಆಡಳಿತ ಜೇನುಗೂಡುಗಳನ್ನು ತೆಗೆದು ಪ್ರದೇಶವನ್ನು ಸುರಕ್ಷಿತಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಮಂಗಳವಾರ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಕಾಂಚನ್ ಬಾಯಿ ಅವರ ಮೃತದೇಹ ಗ್ರಾಮಕ್ಕೆ ಬಂದ ತಕ್ಷಣ, ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನೋಡಿರಿ

