ಚುನಾವಣೆಯಲ್ಲಿ ಸ್ಪರ್ಧಿಸಲು ಮಗಳನ್ನೇ ಕೊಂದ! – ಪಾಪಿ ತಂದೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?

ತಂದೆಗೆ ಹೆಣ್ಣು ಮಕ್ಕಳು ಅಂದ್ರೆ ಹೆಚ್ಚು ಪ್ರೀತಿ. ಮಗಳು ಕೇಳಿದ್ದನ್ನೆಲ್ಲಾ ಅಪ್ಪ ಕೊಡಿಸುತ್ತಾರೆ. ಪ್ರೀತಿಯಿಂದ ಸಾಕುತ್ತಾರೆ. ಆದ್ರೀಗ ಇಲ್ಲೊಬ್ಬ ಪಾಪಿ ತನ್ನ ಮಗಳನ್ನೇ ಕೊಂದಿದ್ದಾನೆ. ಅದೂ ಕೂಡ ಎಲೆಕ್ಷನ್‌ಗೋಸ್ಕರ.
ಇದನ್ನೂ ಓದಿ: ಆ ನೋವು ಮನಸ್ಸಿನಲ್ಲಿ ಉಳಿದಿದೆ! – ಬಿಗ್‌ಬಾಸ್ ಮನೆಯ ಆ ಕ್ಷಣ ನೆನೆದು ರಕ್ಷಿತಾ ಶೆಟ್ಟಿ ಭಾವುಕ!
ಈ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ಎಂಬಲ್ಲಿ ನಡೆದಿದೆ. ಕೊಲೆಯಾದ ಬಾಲಕಿಯನ್ನು ಪ್ರಾಚಿ (6), ಹತ್ಯೆಗೈದ ಆರೋಪಿಯನ್ನು ಪಾಂಡುರಂಗ ಕೊಂಡ್ಮಂಗಳೆ (28) ಎಂದು ಗುರುತಿಸಲಾಗಿದೆ. ನಿಜಾಮಾಬಾದ್ ಪೊಲೀಸರು ಪ್ರಕರಣದ ಆರೋಪಿ ಪಾಂಡುರಂಗ ಮತ್ತು ಗ್ರಾಮದ ಸರಪಂಚ್ ಗಣೇಶ್ ರಾಮಚಂದ್ರ ಶಿಂಧೆಯನ್ನು ಬಂಧಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಪಾಂಡುರಂಗ ಕೊಂಡ್ಮಂಗಳೆ ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರ್ ಗ್ರಾಮದ ನಿವಾಸಿಯಾಗಿದ್ದಾನೆ. ಆರೋಪಿ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ ಯೆಡಪಲ್ಲಿಯ ನಿಜಾಮ ಸಾಗರ್ ಕಾಲುವೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಪೊಲೀಸರು ಆಕೆಯ ತಂದೆಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಆಕೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ತನಿಖಾಧಿಕಾರಿ ವಿಚಾರಣೆ ನಡೆಸಿದಾಗ, ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಗ್ರಾಮದಲ್ಲಿ ಸೆಲೂನ್ ನಡೆಸುತ್ತಿದ್ದ ಪಾಂಡುರಂಗ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿದ್ದ. ಅವನಿಗೆ ಮೂರು ವರ್ಷದ ಗಂಡು ಮಗು ಮತ್ತು ಆರು ವರ್ಷದ ಅವಳಿ ಹೆಣ್ಣು ಮಕ್ಕಳಿದ್ದರು. ಇದರಿಂದ ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎರಡು ಮಕ್ಕಳ ನಿಯಮ ಇರುವುದರಿಂದ ಸ್ಪರ್ಧಿಸಲು ಅನರ್ಹನಾಗಿದ್ದ. ಈ ವಿಚಾರವನ್ನು ಸ್ನೇಹಿತ ಮತ್ತು ಗ್ರಾಮದ ಪ್ರಸ್ತುತ ಸರಪಂಚ್ ಗಣೇಶ್ ಶಿಂಧೆ ಜೊತೆ ಚರ್ಚಿಸಿ ಅವಳಿ ಮಕ್ಕಳಲ್ಲಿ ಹಿರಿಯಳಾದ ಪ್ರಾಚಿಯನ್ನು ಎಲ್ಲಾದರೂ ಬಿಟ್ಟು ಬರಲು ಯೋಚಿಸಿದ್ದ. ಬಳಿಕ ಅವಳು ವಾಪಸ್ ಬಂದರೆ ತೊಂದರೆ ಆಗುತ್ತದೆ ಎಂದು ಕಾಲುವೆಗೆ ತಳ್ಳಿ ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದ.
ಅಲ್ಲಿಯೇ ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ನೀರಿಗೆ ಏನೋ ಬಿದ್ದ ಶಬ್ಧ ಕೇಳಿ, ಬಂದು ನೋಡಿದಾಗ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ಫೋಟೋ ವೈರಲ್ ಆಗಿತ್ತು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.

ನೋಡಿರಿ

