ನಿರ್ಮಲಾ ಸೀತಾರಾಮನ್‌ರಿಂದ ಇಂದು ಕೇಂದ್ರ ಬಜೆಟ್‌ ಮಂಡನೆ – ಫೆಬ್ರವರಿ 1ಕ್ಕೆ ಯಾಕೆ ಗೊತ್ತಾ?

ನಿರ್ಮಲಾ ಸೀತಾರಾಮನ್‌ರಿಂದ ಇಂದು ಕೇಂದ್ರ ಬಜೆಟ್‌ ಮಂಡನೆ – ಫೆಬ್ರವರಿ 1ಕ್ಕೆ ಯಾಕೆ ಗೊತ್ತಾ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌   ಇಂದು 11 ಗಂಟೆಗೆ 9ನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ಸತತವಾಗಿ ಅತ್ಯಂತ ಹೆಚ್ಚಿನ ಅವಧಿಗೆ ಕೇಂದ್ರದ ಹಣಕಾಸು ಸಚಿವರ ಹುದ್ದೆ ನಿರ್ವಹಿಸಿದ ಹೆಗ್ಗಳಿಕೆ ನಿರ್ಮಲಾರಿಗೆ ಸಲ್ಲುತ್ತದೆ. ನಿರ್ಮಲಾ ಅವರು 2019ರ ಮೇ 31ರಂದು ಕೇಂದ್ರ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದರು.  ದೇಶವು ಅವರ ಅವಧಿಯಲ್ಲಿ ವಿಶ್ವದಲ್ಲಿ ಅತ್ಯಂತ ವೇಗದ ಬೆಳವಣಿಗೆ ಕಾಣುತ್ತಿರುವ ಪ್ರಮುಖ ಅರ್ಥ ವ್ಯವಸ್ಥೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: 5ನೇ ಪಂದ್ಯ ಗೆಲ್ಲೋಕಾ.. ಪ್ರಯೋಗಕ್ಕಾ? – ಮ್ಯೂಸಿಕಲ್ ಚೇರ್ ಆಡಿದ್ರೆ ಪಲ್ಟಿ

ನಿರ್ಮಲಾ ಅವರು ಹಣಕಾಸು ಸಚಿವೆಯಾಗಿ  ನಿನ್ನೆಗೆ   6 ವರ್ಷ 8 ತಿಂಗಳು ಕಳೆದಿವೆ. ಇದೀಗ ಇಂದು  9ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ಸೃಷ್ಟಿಸಲಿದ್ದಾರೆ. ಪ್ರತಿವರ್ಷ ಹಣಕಾಸು ಸಚಿವರು ಫೆಬ್ರವರಿ 1ರಂದು ಬಜೆಟ್ ಮಂಡಿಸುತ್ತಾರೆ. ಆದರೆ ಅದು ಯಾವಾಗಲೂ ಈ ರೀತಿ ಇರಲಿಲ್ಲ. ಇದಕ್ಕೂ ಮೊದಲು ಫೆಬ್ರವರಿ ಅಂತ್ಯದಲ್ಲಿ ಬಜೆಟ್ ಮಂಡಿಸಲಾಗುತ್ತಿತ್ತು.

2016ರವರೆಗೆ ಭಾರತವು ಫೆಬ್ರವರಿ ಕೊನೆಯ ಕೆಲಸದ ದಿನದಂದು ಬಜೆಟ್ ಮಂಡಿಸುವ ಬ್ರಿಟಿಷ್ ಯುಗದ ಪದ್ಧತಿಯನ್ನ ಅನುಸರಿಸಿತ್ತು. ಸಮಸ್ಯೆಯೆಂದರೆ ಹಣಕಾಸು ವರ್ಷವು ಏಪ್ರಿಲ್ 1ರಂದು ಪ್ರಾರಂಭವಾಗುತ್ತದೆ.. ಅಂದರೆ ಸಚಿವಾಲಯಗಳು, ವ್ಯವಹಾರಗಳು, ತೆರಿಗೆದಾರರ ಹೊಸ ನೀತಿಗಳು ಮತ್ತು ತೆರಿಗೆ ನಿಯಮಗಳ ಮೇಲೆ ಕಾರ್ಯನಿರ್ವಹಿಸಲು ಬಹಳ ಕಡಿಮೆ ಸಮಯವಿರುತ್ತಿತ್ತು.

ಬಜೆಟ್ ಅನುಮೋದಿಸಿ ಜಾರಿಗೆ ತರುವ ಹೊತ್ತಿಗೆ ಹೊಸ ಹಣಕಾಸು ವರ್ಷ ಪ್ರಾರಂಭವಾಗಿತ್ತು. ಪರಿಣಾಮ ಅನೇಕ ಸರ್ಕಾರಿ ಯೋಜನೆಗಳು ಮತ್ತು ನೀತಿಗಳು ಸಮಯಕ್ಕೆ ಸರಿಯಾಗಿ ಪ್ರಾರಂಭವಾಗದೆ ವಿಳಂಬವಾಗುತ್ತಿದ್ದವು. 2017ರಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿಯವರು ಫೆಬ್ರವರಿ 1ರಂದು ಮೊದಲ ಬಾರಿಗೆ ಬಜೆಟ್ ಮಂಡಿಸಿದರು. ಅಂದಿನಿಂದ ಸರ್ಕಾರವು ಆರಂಭಿಕ ದಿನಾಂಕವನ್ನೇ ಕಾಯ್ದುಕೊಂಡು ಬರುತ್ತಿದೆ. ಹೊಸ ಹಣಕಾಸು ವರ್ಷ ಪ್ರಾರಂಭವಾಗುವ ಮೊದಲು ಎಲ್ಲರಿಗೂ ಯೋಜಿಸಲು ಹೆಚ್ಚಿನ ಸಮಯ ನೀಡುವುದೇ ಇದರ ಪ್ರಮುಖ ಉದ್ದೇಶ.

Kishor KV