WPLನಲ್ಲಿ ಮುಂಬೈಗೆ ಮಣ್ಣು ಮುಕ್ಕಿಸಿ ಪ್ಲೇಆಫ್ಗೇರಿದ ಗುಜರಾತ್ ಜೈಂಟ್ಸ್

ಮಹಿಳಾ ಪ್ರೀಮಿಯರ್ ಲೀಗ್‌ನ 19ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು 11 ರನ್‌ಗಳಿಂದ ಸೋಲಿಸಿ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಇದು WPL ಇತಿಹಾಸದಲ್ಲಿ ಗುಜರಾತ್‌ಗೆ ಮುಂಬೈ ವಿರುದ್ಧದ ಮೊದಲ ಗೆಲುವು. ಈ ಸೋಲಿನ ಹೊರತಾಗಿಯೂ, ಮುಂಬೈ ಪ್ಲೇಆಫ್‌ಗೇರುವ ಅವಕಾಶವಿದೆ. ಇಂದು ನಡೆಯಲಿರುವ ದೆಹಲಿ ಪಂದ್ಯದ ಫಲಿತಾಂಶದ ಮೇಲೆ ಮುಂಬೈನ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ: ಇಂದು ಬನ್ನೇರುಘಟ್ಟದಲ್ಲಿ ಡಾ. ಸಿ.ಜೆ. ರಾಯ್ ಅಂತ್ಯಕ್ರಿಯೆ! – ವೈಟ್ ಹೌಸ್‌ನಲ್ಲಿ ಅಂತಿಮ ದರ್ಶನ
ಪ್ರೀಮಿಯರ್ ಲೀಗ್‌ನ 19ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ವಡೋದರಾದಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ಪ್ಲೇಆಫ್‌ಗೇರಿದೆ. ಇದು ಮಾತ್ರವಲ್ಲದೆ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಂಬೈ ತಂಡವನ್ನು ಮಣಿಸಿದ ದಾಖಲೆಗೆ ಗುಜರಾತ್ ಕೊರಳೊಡ್ಡಿದೆ. ಇನ್ನು ಈ ಪಂದ್ಯದಲ್ಲಿ ಸೋತರೂ ಮುಂಬೈ ತಂಡಕ್ಕೆ ಪ್ಲೇಆಫ್‌ಗೇರುವ ಅವಕಾಶವಿದೆ. ಆದರೆ ನಾಳೆ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ತಂಡ ಸೋತರಷ್ಟೇ ಮುಂಬೈ ಪ್ಲೇಆಫ್‌ಗೇರಲಿದೆ. ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 167 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ 156 ರನ್ ಕಲೆಹಾಕಲಷ್ಟೇ ಶಕ್ತವಾಗಿ 11 ರನ್‌ಗಳಿಂದ ಸೋಲಿಗೆ ಶರಣಾಯಿತು.
ಟಾಸ್ ಗೆದ್ದ ಗುಜರಾತ್ ನಾಯಕಿ ಆಶ್ಲೇ ಗಾರ್ಡ್ನರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 167 ರನ್ ಗಳಿಸಿತು. ತಂಡದ ಪರ ಆಶ್ಲೇ ಗಾರ್ಡ್ನರ್ 46 ರನ್ ಗಳಿಸಿ ಗರಿಷ್ಠ ಸ್ಕೋರ್ ಎನಿಸಿಕೊಂಡರೆ, ಜಾರ್ಜಿಯಾ ವೇರ್‌ಹ್ಯಾಮ್ ಅಜೇಯ 44 ರನ್ ಬಾರಿಸಿದರು. ಸೋಫಿ ಡಿವೈನ್ 25 ರನ್ ಗಳಿಸಿದರೆ, ಅನುಷ್ಕಾ ಶರ್ಮಾ 33 ರನ್ ಗಳಿಸಿದರು. ಮುಂಬೈ ಪರ ಅಮೆಲಿಯಾ ಕೆರ್ ಎರಡು ವಿಕೆಟ್ ಪಡೆದರೆ, ಶಬ್ನಿಮ್ ಇಸ್ಮಾಯಿಲ್ ಮತ್ತು ನ್ಯಾಟ್ ಸಿವರ್-ಬ್ರಂಟ್ ತಲಾ ಒಂದು ವಿಕೆಟ್ ಪಡೆದರು.
168 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕಳಪೆ ಆರಂಭ ಪಡೆದುಕೊಂಡಿತು. ಪ್ರಮುಖ ಬ್ಯಾಟರ್ಗಳು ಬೇಗನೇ ವಿಕೆಟ್ ಒಪ್ಪಿಸಿದ ಪರಿಣಾಮ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 156 ರನ್‌ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ, ತಂಡವು 11.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 82 ರನ್‌ಗಳನ್ನು ಗಳಿಸಿತ್ತು. ಆ ನಂತರ ಹರ್ಮನ್‌ಪ್ರೀತ್ ಕೌರ್ ಬಿರುಸಿನ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಹರ್ಮನ್‌ಪ್ರೀತ್ ಕೌರ್ 48 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಅಜೇಯ 82 ರನ್ ಗಳಿಸಿದರು. ಆದಾಗ್ಯೂ, ಇತರ ಬ್ಯಾಟರ್ಗಳು ಹೆಚ್ಚಿನ ಕೊಡುಗೆ ನೀಡಲಿಲ್ಲ. ಗುಜರಾತ್ ಪರ ಸೋಫಿ ಡಿವೈನ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ತಲಾ 2 ವಿಕೆಟ್‌ಗಳನ್ನು ಪಡೆದರು.

ನೋಡಿರಿ

