ವಿಶ್ವಕಪ್ ಹೀರೋ ವಿಲನ್ ಆಗಿದ್ರಾ? – ಗೌರವ ಸಿಗದೇ ಕ್ರಿಕೆಟ್ ಗೇ ಗುಡ್ ಬೈ
ನಿವೃತ್ತಿ ನೋವು ಬಿಚ್ಚಿಟ್ಟ ಯುವಿ

ವಿಶ್ವಕಪ್ ಹೀರೋ ವಿಲನ್ ಆಗಿದ್ರಾ? – ಗೌರವ ಸಿಗದೇ ಕ್ರಿಕೆಟ್ ಗೇ ಗುಡ್ ಬೈನಿವೃತ್ತಿ ನೋವು ಬಿಚ್ಚಿಟ್ಟ ಯುವಿ

ಸದ್ಯ ಟಿ-20ಐ ಫಾರ್ಮೆಟ್​ನಲ್ಲಿ ಅಭಿಷೇಕ್ ಶರ್ಮಾ ಪವರ್ ಹಿಟ್ಟರ್ ಬ್ಯಾಟರ್. ಅವ್ರ ಅಗ್ರೆಸ್ಸಿವ್ ಬ್ಯಾಟಿಂಗ್ ಸ್ಟೈಲ್.. ಸ್ಟ್ರೈಕ್ ರೇಟ್, ಕಾನ್ಫಿಡೆನ್ಸ್, ಪವರ್ ಹಿಟ್ಟಿಂಗ್ ಬ್ಯಾಟಿಂಗ್​ ನೋಡಿದಾಗ್ಲೆಲ್ಲಾ ಅವ್ರ ಗುರು ಯುವರಾಜ್ ಸಿಂಗ್ ಕೂಡ ಸದ್ದು ಮಾಡ್ತಾರೆ. ಅಭಿಯಂಥ ಡೈನಮೇಟ್ ಬ್ಯಾಟರ್ ತಯಾರಾಗಿದ್ದೇ ಯುವಿ ಗರಡಿಯಲ್ಲಿ. ಜಗತ್ತಿನ ಶ್ರೇಷ್ಠ ಆಲ್​ರೌಂಡರ್​ಗಳಲ್ಲಿ ಒಬ್ಬರಾಗಿದ್ದ ಯುವಿ ಭಾರತದ ವಿಶ್ವಕಪ್ ಹೀರೋ ಕೂಡ. ಆದ್ರೆ ಅವ್ರ ನಿವೃತ್ತಿಯ ದಿನಗಳು ಅಂದುಕೊಂಡಂತೆ ಇರಲಿಲ್ಲ ಅನ್ನೋದು ಈಗ ರಿವೀಲ್ ಆಗಿದೆ.

ಇದನ್ನೂ ಓದಿ : ಫೈನಲ್ ಬೆಲ್ ಬಾರಿಸಿದ RCB – ಫೆಬ್ರವರಿ 5ಕ್ಕೆ 2ನೇ ಕಪ್ ನಮ್ದೇ?

ಯುವರಾಜ್ ಸಿಂಗ್ ಅಂದ್ರೆ ಈಗ್ಲೂ ಅದೆಷ್ಟೋ ಕ್ರಿಕೆಟಿಗರಿಗೆ ಸ್ಪೂರ್ತಿ. 2007ರ ಟಿ-20 ವಿಶ್ವಕಪ್. 2011ರ ಏಕದಿನ ವಿಶ್ವಕಪ್ ಗೆಲುವಿನ ಹೀರೋ. ಭಾರತ ಎರಡು ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಲೆಜೆಂಡರಿ ಬ್ಯಾಟರ್ 2019ರ ಜೂನ್ 10ರಂದು ನಿವೃತ್ತಿ ಘೋಷಿಸಿದ್ರು. ಅಂದಿನ ಟೈಮಲ್ಲಿ ಯುವಿ ದಿಢೀರ್ ನಿವೃತ್ತಿ ಕೋಟ್ಯಂತರ ಭಾರತೀಯರ ಹೃದಯ ಛಿದ್ರ ಮಾಡಿತ್ತು. ಆದ್ರೆ ಅಂದಿನ ನಿರ್ಧಾರದ ಬಗ್ಗೆ ಯುವಿ ಈಗ ಮೌನ ಮುರಿದಿದ್ದಾರೆ. ಅಚ್ಚರಿಯ ವಿಚಾರಗಳನ್ನೂ ರಿವೀಲ್ ಮಾಡಿದ್ದಾರೆ.  7 ವರ್ಷಗಳ ಬಳಿಕ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ  ಜೊತೆಗಿನ ಪಾಡ್​ಕ್ಯಾಸ್ಟ್​ನಲ್ಲಿ ಮನದಾಳ ಬಿಚ್ಚಿಟ್ಟಿದ್ದಾರೆ.

ಗೌರವ ಸಿಗದೇ ಇದ್ದಾಗ ಕ್ರಿಕೆಟ್ ಯಾಕೆ ಎಂದು ನಿವೃತ್ತಿ ಘೋಷಣೆ!

ಕ್ರಿಕೆಟ್​ನಲ್ಲಿ ಆಟಗಾರರ ಫಾರ್ಮ್ ಮತ್ತು ಫೇಲ್ಯೂರ್ ಎಷ್ಟು ಡೈವರ್ಟ್ ಮಾಡುತ್ತೆ ಅನ್ನೋದನ್ನ ಯುವಿ ಹೇಳಿಕೊಂಡಿದ್ದಾರೆ. ಒಬ್ಬ ಕ್ರೀಡಾಪಟುವಿನ ಪರ್ಫಾಮೆನ್ಸ್ ವೀಕ್ ಆದಾಗ ಅವ್ರ ಸುತ್ತಮುತ್ತ ಇರುವವರಿಂದ ಗೌರವ ಸಿಗದೇ ಇದ್ದಾಗ ತಮ್ಮನ್ನು ಕಂಡುಕೊಳ್ಳುವತ್ತ ಹೋಗಬೇಕು. ಕ್ರಿಕೆಟ್ ಆಡುವಾಗ ನನಗೆ ಇಷ್ಟವಿಲ್ಲದಿದ್ದಾಗ ನಾನು ಏಕೆ ಆಡುತ್ತಿದ್ದೇನೆ ಎಂಬ ಭಾವನೆ ನನ್ನಲ್ಲಿತ್ತು? ನನಗೆ ಬೆಂಬಲ ಸಿಗುತ್ತಿರಲಿಲ್ಲ. ನನಗೆ ಗೌರವ ಸಿಗುತ್ತಿರಲಿಲ್ಲ ಮತ್ತು ನನಗೆ ಅನಿಸುತ್ತಿತ್ತು. ನನ್ನ ಆ ಸಂತಸ ಇಲ್ಲಿ ಇಲ್ಲದಿದ್ದಾಗ ನಾನು ಇದನ್ನು ಏಕೆ ಮಾಡಬೇಕು? ನನಗೆ ಇಷ್ಟವಿಲ್ಲದಿದ್ದಾಗ ನಾನು ಏಕೆ ಕಾಲಹರಣ ಮಾಡುತ್ತಿದ್ದೇನೆ? ಏನನ್ನು ಸಾಬೀತುಪಡಿಸಲು? ನಾನು ಮಾನಸಿಕವಾಗಿ ಅಥವಾ ದೈಹಿಕವಾಗಿ ಇದಕ್ಕಿಂತ ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ ಎಂದು ಅಂದಿಗೆ ಅನಿಸಿತ್ತು. ನಾನು ಆಟ ನಿಲ್ಲಿಸಿದ ದಿನ ನಾನು ಮತ್ತೆ ನಾನೇ ಆಗಿದ್ದೆ ಎಂದಿದ್ದಾರೆ. ಈ ಮೂಲಕ ತಂಡದಲ್ಲಿ ಗೌರವ ಸಿಗದೇ ಇದ್ದದ್ದಕ್ಕೇ ವಿದಾಯದ ದಾರಿ ಹಿಡಿದಿದ್ದಾರೆ ಹೇಳಿಕೊಂಡಿದ್ದಾರೆ. ನಿವೃತ್ತಿ ದಿನಗಳು ಅಂದುಕೊಂಡಂತೆ ಇರದೇ ಇದ್ರೂ ಕೂಡ ಭಾರತಕ್ಕೆ ಯುವಿ ಬೆಲೆ ಕಟ್ಟಲಾಗದ ಆಸ್ತಿಯಾಗಿದ್ರು.

ತಂಡದಲ್ಲಿ ಅವಕಾಶ ಸಿಗದೆ ನಿವೃತ್ತಿಯ ನಿರ್ಧಾರ!

2011ರಲ್ಲಿ ದೋನಿ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಗೆಲ್ಲೋಕೆ ಮುಖ್ಯ ಕಾರಣವೇ ಯುವರಾಜ್ ಸಿಂಗ್.   ಸೀಮಿತ ಓವರ್​ಗಳ ಕ್ರಿಕೆಟ್‌ನಲ್ಲಿ ದೇಶ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದ ಯುವಿ ಟ್ರೋಫಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿತ್ತು. 4 ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಜೊತೆ ಸರಣಿ ಶ್ರೇಷ್ಠ ಆಟಗಾರನಾಗಿ ಮೆರೆದಿದ್ರು. ಆ ಟೈಮಲ್ಲಿ ಯುವರಾಜನೇ ಹೀರೋ. ಆತನ ಹಿಂದೆ ಮುಂದೆಲ್ಲಾ ಜನ. ಆದ್ರೆ ಅದೇ ಟೈಮಲ್ಲಿ ಕ್ಯಾನ್ಸರ್​ಗೆ ತುತ್ತಾಗಿದ್ದ ಯುವಿ ಅಮೆರಿಕದಲ್ಲಿ ತಿಂಗಳುಗಟ್ಟಲೆ ನರಕ ಅನುಭವಿಸಿ ಸಾವನ್ನೇ ಗೆದ್ದು ಬಂದಿದ್ರು. ತಂಡಕ್ಕೆ ಕಂ ಬ್ಯಾಕ್ ಮಾಡಿದ್ರು.  ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಶತಕವನ್ನೂ ಬಾರಿಸಿದ್ದರು. ಆದರೆ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನದ ಬಳಿಕ ಅವ್ರನ್ನ ತಂಡದಿಂದಲೇ ಕೈಬಿಡಲಾಗಿತ್ತು. ನಂತ್ರ ಅವರನ್ನು ತಂಡದಿಂದ ಕೈಬಿಡಲಾಯಿತು. ಕ್ರಿಕೆಟ್ ವೃತ್ತಿ ಜೀವನದ ಕೊನೇ ದಿನಗಳಲ್ಲಿ ಅಂದುಕೊಂಡಂತ 2019ರಲ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.

2007ರಲ್ಲಿ ಒಂದೇ ಓವರ್ ನಲ್ಲಿ 6 ಸಿಕ್ಸರ್ ಬಾರಿಸಿದ್ದ ಯುವಿ!

2007ರಲ್ಲಿ ಸ್ಟುವರ್ಟ್ ಬ್ರಾಡ್ ಅವರು ಎಸೆದ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ  ಯುವಿ ವಿಶ್ವದಾಖಲೆ ಬರೆದರು. ಅಲ್ಲದೇ 2011ರ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನಕ್ಕಾಗಿ ಮ್ಯಾನ್​ ಆಫ್​ ದಿ ಸಿರಿಸ್​ ಪ್ರಶಸ್ತಿ ಸಹ ಪಡೆದಿದ್ರು. ಇನ್ನು ಯುವಿ ಕರಿಯರ್ ಬಗ್ಗೆ ನೋಡೋದಾದ್ರೆ 40 ಟೆಸ್ಟ್ ಪಂದ್ಯಗಳನ್ನು ಆಡಿ 1,900 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 3 ಶತಕ ಮತ್ತು 11 ಅರ್ಧಶತಕ ಸಿಡಿಸಿದ್ದಾರೆ. 304 ಏಕದಿನ ಪಂದ್ಯಗಳಲ್ಲಿ 8,701 ರನ್ ಗಳಿಸಿದ್ದಾರೆ. 14 ಶತಕಗಳು ಮತ್ತು 52 ಅರ್ಧಶತಕಗಳನ್ನು ಗಳಿಸಿದ್ದಾರೆ. 58 ಟಿ20ಐಗಳಲ್ಲಿ 1,177 ರನ್ ಕಲೆಹಾಕಿದ್ದು ಈ ಸ್ವರೂಪದಲ್ಲಿ 8 ಅರ್ಧಶತಕ ಗಳಿಸಿದ್ದಾರೆ. ಅವರು 132 ಐಪಿಎಲ್ ಪಂದ್ಯಗಳಲ್ಲಿ 2,750 ರನ್ ಗಳಿಸಿದ್ದಾರೆ. ಅವರು 13 ಅರ್ಧಶತಕಗಳನ್ನು ಗಳಿಸಿದ್ದಾರೆ. ಒಟ್ಟಾರೆ ಅಂತರರಾಷ್ಟ್ರೀಯ ಮಟ್ಟದಲ್ಲಿ 11,778 ರನ್ ಗಳಿಸಿದ್ದಾರೆ ಮತ್ತು 148 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಒಟ್ನಲ್ಲಿ ಕ್ರಿಕೆಟ್ ಅಂತಾ ಬಂದಾಗ ಈಗ್ಲೂ ಅದೆಷ್ಟೂ ಕ್ರಿಕೆಟಿಗರು ಅವಕಾಶ ವಂಚಿತರಾಗಿಯೇ ವಿದಾಯದ ಹಾದಿ ಹಿಡಿತಿದ್ದಾರೆ. ಇದಕ್ಕೆ ಯುವಿ ಕೂಡ ಹೊರತಾಗಿರಲಿಲ್ಲ ಅಷ್ಟೇ.

Shantha Kumari