ಶ್ರೀಮಂತರೇ ಈಕೆಯ ಟಾರ್ಗೆಟ್! – ದುಡ್ಡಿಗಾಗಿ ಪ್ರೀತಿ, ಮದುವೆ.. ಮೂವರು ಗಂಡಂದಿರಿಗೆ ಲಕ್ಷ ಲಕ್ಷ ಪಂಗನಾಮ!

ದುಡ್ಡಿರುವವರೇ ಈಕೆಯ ಟಾರ್ಗೆಟ್.. ಪ್ರೀತಿ, ಮದುವೆ ಅನ್ನೋ ಹೆಸರಿನಲ್ಲಿ ಯುವಕರಿಗೆ ಪಂಗನಾಮ ಹಾಕೋದೇ ಈಕೆಯ ಕೆಲಸ. ಮದುವೆಯಾಗಿ ಹಣ ಕೈಗೆ ಬರ್ತಿದ್ದಂತೆ ಒಂದೊಂದು ಕಾರಣ ಕೊಟ್ಟು ಎಸ್ಕೇಪ್ ಆಗಿದ್ದಾಳೆ. ಇದೀಗ ಈ ಅಸಲಿ ಮುಖ ಬಯಲಾಗಿದೆ. ಮೊದಲ ಹಾಗೂ ಎರಡನೇ ಪತಿ ಈ ಕಿರಾತಕಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಪಿ.ಟಿ. ಉಷಾ ಪತಿ ವಿ. ಶ್ರೀನಿವಾಸನ್ ನಿಧನ – ಪ್ರಧಾನಿ ಮೋದಿ ಸಂತಾಪ
ಈ ಘಟನೆ ನಡೆದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದಲ್ಲಿ. ಅಣಬೆ ಗ್ರಾಮದ ಸುಧಾರಾಣಿ ಎಂಬಾಕೆ ಪ್ರೀತಿ, ಮದುವೆ ಎಂಬ ನಾಟಕವಾಡಿ ಪುರುಷರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ದೋಚುತ್ತಿದ್ದಾಳೆ ಅನ್ನೋ ಆರೋಪ ಕೇಳಿಬಂದಿದೆ. ಇದೀಗ ಆಕೆ ವಿರುದ್ಧ ಮೊದಲ ಹಾಗೂ ಎರಡನೇ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸುಧಾರಾಣಿ ಹಣವಿರುವವರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಳು ಎನ್ನಲಾಗಿದೆ.
ಅಷ್ಟಕ್ಕೂ ಆಗಿದ್ದೇನು?
ಬುಲೆಟ್ ಓಡಿಸಲು ಬರಲ್ಲ ಎಂದು ಮೊದಲ ಪತಿಗೆ ಕೈಕೊಟ್ಟಿದ್ಲು!
ಸುಧಾರಾಣಿ ಮೊದಲು ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳೂ ಜನಿಸಿದ್ದರು. ಆದರೆ, ದಾಂಪತ್ಯ ಜೀವನದ ನಡುವೆಯೇ ಪತಿಗೆ ‘ಕಾರು ಮತ್ತು ಬುಲೆಟ್ ಓಡಿಸಲು ಬರಲ್ಲ’ ಎಂಬ ಕ್ಷುಲ್ಲಕ ಕಾರಣ ನೀಡಿ, ಮಕ್ಕಳನ್ನು ಹಾಗೂ ವೀರೆಗೌಡರನ್ನು ತೊರೆದು ಹೋಗಿದ್ದಳು.
ಎರಡನೇ ಪತಿಗೆ 20 ಲಕ್ಷ ರೂ. ಪಂಗನಾಮ!
ಮೊದಲ ಪತಿಯಿಂದ ದೂರಾದ ಸುಧಾರಾಣಿ, ನಂತರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅನಂತಮೂರ್ತಿ ಎಂಬುವವರನ್ನು ಸಂಪರ್ಕಿಸಿದ್ದಳು. ಗಂಡ ತೀರಿಹೋಗಿದ್ದಾರೆ ಎಂದು ಸುಳ್ಳು ಹೇಳಿ ಆತನನ್ನು ನಂಬಿಸಿ, ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದಳು. ಸುಮಾರು ಒಂದೂಕಾಲು ವರ್ಷಗಳ ಕಾಲ ಅನಂತಮೂರ್ತಿ ಜೊತೆ ಸಂಸಾರ ಮಾಡಿದ್ದಳು. ಈ ಅವಧಿಯಲ್ಲಿ ವಿವಿಧ ಕಾರಣಗಳನ್ನು ನೀಡಿ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಳು ಎಂದು ಆರೋಪಿಸಲಾಗಿದೆ.
ಅನಂತಮೂರ್ತಿಗೆ ಪಂಗನಾಮ ಹಾಕಿದ ನಂತರ 3ನೇ ಮದುವೆ!
ಅನಂತಮೂರ್ತಿಯಿಂದ ಹಣ ಪಡೆದ ನಂತರ ಆತನನ್ನೂ ತೊರೆದಿರುವ ಸುಧಾರಾಣಿ, ಇದೀಗ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮೊದಲ ಪತಿ ವೀರೆಗೌಡ ಮತ್ತು ಎರಡನೇ ಪತಿ ಅನಂತಮೂರ್ತಿ ಒಟ್ಟಾಗಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಈಕೆ ಕೇವಲ ಹಣಕ್ಕಾಗಿ ಶ್ರೀಮಂತರನ್ನು ಮತ್ತು ಅಮಾಯಕರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾಳೆ. ಇಂತಹ ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಪತಿಯರು ಒತ್ತಾಯಿಸಿದ್ದಾರೆ. ಸದ್ಯ ದೊಡ್ಡಬಳ್ಳಾಪುರ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

ನೋಡಿರಿ

