ಯುಪಿ ವಾರಿಯರ್ಸ್ ವಿರುದ್ಧ RCBಗೆ ಭರ್ಜರಿ ಜಯ – ಫೈನಲ್‌ಗೆ ಲಗ್ಗೆ ಇಟ್ಟ ಸ್ಮೃತಿ ಪಡೆ

ನಡಿನ್ ಡಿ ಕ್ಲರ್ಕ್ ಮಾರಕ ಬೌಲಿಂಗ್ ಹಾಗೂ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂಧಾನಾ ಅವರ ಅರ್ಧಶತಕಗಳ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCBW) ತಂಡ, ಯುಪಿ ವಾರಿಯರ್ಸ್ (UPW) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (WPL 2026) ಸ್ಮೃತಿ ಮಂಧಾನಾ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡ, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಖಚಿತಪಡಿಸಿಕೊಂಡು ಫೈನಲ್‌ಗೆ ಅಧಿಕೃತವಾಗಿ ಲಗ್ಗೆ ಇಟ್ಟಿತು. ಇನ್ನು ಸೋಲು ಅನುಭವಿಸಿದ ಮೆಗ್ ಲ್ಯಾನಿಂಗ್ ನಾಯಕತ್ವದ ಯುಪಿ ವಾರಿಯರ್ಸ್ ತಂಡದ ನಾಕೌಟ್ ಹಾದಿ ಕಠಿಣವಾಗಿದೆ.
ಇದನ್ನೂ ಓದಿ: ಪಾಕ್ ಷರತ್ತಿಗೆ ಬೆಲೆ ಇದ್ಯಾ? – ICC ಮುಂದೆ ಹುಚ್ಚು ಡಿಮ್ಯಾಂಡ್
ಗುರುವಾರ ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ನೀಡಿದ್ದ 144 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ಮಹಿಳಾ ತಂಡ, ಗ್ರೇಸ್ ಹ್ಯಾರಿಸ್ ಹಾಗೂ ಸ್ಮೃತಿ ಮಂಧಾನಾ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ13.1 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಎಂಟು ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಕೊನೆಯ ಎರಡು ಪಂದ್ಯಗಳನ್ನು ಸತತವಾಗಿ ಸೋತಿದ್ದ ಬೆಂಗಳೂರು ತಂಡ, ಇದೀಗ ಗೆಲುವಿನ ಲಯಕ್ಕೆ ಮರಳಿದೆ. ಆ ಮೂಲಕ ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 12 ಅಂಕಗಳೊಂದಿಗೆ ಫೈನಲ್‌ಗೆ ಪ್ರವೇಶ ಮಾಡಿದೆ. ಫೆಬ್ರವರಿ 5 ರಂದು ಇದೇ ಅಂಗಣದಲ್ಲಿ ಆರ್‌ಸಿಬಿ, ಫೈನಲ್ ಪಂದ್ಯವನ್ನು ಆಡಲಿದೆ.
144 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇನಿಂಗ್ಸ್ ಆರಂಭಿಸಿದ ಗ್ರೇಸ್ ಹ್ಯಾರಿಸ್ ಹಾಗೂ ನಾಯಕಿ ಸ್ಮೃತಿ ಮಂಧಾನಾ ಅವರು ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಯುಪಿ ಬೌಲರ್‌ಗಳ ಎದುರು ಅಬ್ಬರಿಸಿದ ಈ ಜೋಡಿ ಮೊದಲನೇ ವಿಕೆಟ್‌ಗೆ 108 ರನ್‌ಗಳನ್ನು ಕಲೆ ಹಾಕಿತು. ಸ್ಪೋಟಕ ಬ್ಯಾಟ್ ಮಾಡಿದ ಗ್ರೇಸ್ ಹ್ಯಾರಿಸ್, ಕೇವಲ 37 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 75 ರನ್‌ಗಳನ್ನು ಸಿಡಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಕೊನೆಯವರೆಗೂ ಅಜೇಯರಾಗಿ ಕ್ರೀಸ್‌ನಲ್ಲಿ ಉಳಿದ ನಾಯಕಿ ಸ್ಮೃತಿ ಮಂಧಾನಾ, 27 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಎಂಟು ಬೌಂಡರಿಗಳೊಂದಿಗೆ ಅಜೇಯ 54 ರನ್‌ಗಳನ್ನು ಬಾರಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಯುಪಿ ವಾರಿಯರ್ಸ್ ತಂಡ, ಭರ್ಜರಿ ಆರಂಭ ಪಡೆದ ಹೊರತಾಗಿಯೂ, ನಡಿನ್ ಡಿ ಕ್ಲರ್ಕ್ ಬೌಲಿಂಗ್ ದಾಳಿಗೆ ನಲುಗಿತು. ಆ ಮೂಲಕ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 143 ರನ್‌ಗಳಿಗೆ ಶಕ್ತವಾಯಿತು. ಆ ಮೂಲಕ ಎದುರಾಳಿ ಆರ್‌ಸಿಬಿ ವನಿತೆಯರಿಗೆ 144 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು. ಯುಪಿ ಪರ ಆರಂಭಿಕ ಬ್ಯಾಟರ್‌ಗಳಾದ ದೀಪ್ತಿ ಶರ್ಮಾ ಹಾಗೂ ಮೆಗ್ ಲ್ಯಾನಿಂಗ್ ಕ್ರಮವಾಗಿ 55 ರನ್ ಹಾಗೂ 41 ರನ್‌ಗಳನ್ನು ಗಳಿಸಿದ್ದು ಬಿಟ್ಟರೆ ಇನ್ನುಳಿದ ಆಟಗಾರ್ತಿಯರು ವಿಫಲರಾದರು.

ನೋಡಿರಿ

