ಲಲಿತ್ ಮೋದಿ ಸಾಮ್ರಾಜ್ಯಕ್ಕಿನ್ನು ಮಗನೇ ಅಧಿಪತಿ – ಐಪಿಎಲ್ ಸಂಸ್ಥಾಪಕನ ಸ್ಥಿತಿ ಹೇಗಿದೆ?
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸಂಸ್ಥಾಪಕ ಹಾಗೂ ಮಾಜಿ ಅಧ್ಯಕ್ಷ ಲಲಿತ್ ಮೋದಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೊವಿಡ್ನಿಂದ ಬಳಲುತ್ತಿರೋ ಲಲಿತ್ ಕೃತಕ ಉಸಿರಾಟ ಪಡೆಯುತ್ತಿದ್ದು, ಈ ನಡುವೆ ತಮ್ಮ ಸಾಮ್ರಾಜ್ಯದ ಸಂಪೂರ್ಣ ಹೊಣೆಯನ್ನ ತಮ್ಮ ಪುತ್ರನಿಗೆ ಹಸ್ತಾಂತರ ಮಾಡಿದ್ದಾರೆ.
ಇದನ್ನೂ ಓದಿ: ಜೋಡೋ ಯಾತ್ರೆ ವೇಳೆ ಓಡಿ ಬಂದು ರಾಹುಲ್ರನ್ನ ತಬ್ಬಿಕೊಂಡ ಯುವಕ – ಭದ್ರತಾ ವೈಫಲ್ಯ ಆಗಿದ್ದೇಗೆ..?
ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಆರೋಗ್ಯ ತೀವ್ರ ಹದಗೆಟ್ಟಿದೆ. ಕಳೆದ 2 ವಾರಗಳಲ್ಲಿ 2 ಬಾರಿ ಕೊವಿಡ್ಗೆ ತುತ್ತಾಗಿದ್ದು, ಸದ್ಯ ಆಕ್ಸಿಜನ್ ಸಹಾಯದಿಂದ ಉಸಿರಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಲಲಿತ್ ಮೋದಿ ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಕಲಹಗಳು ನಡೆಯುತ್ತಲೇ ಇದೆ. ಈ ಮಧ್ಯೆ ಲಲಿತ್ ಮೋದಿ ತಮ್ಮ ಸಂಪೂರ್ಣ ಆಸ್ತಿಗೆ ಮಗನನ್ನ ಉತ್ತರಾಧಿಕಾರಿಯನ್ನಾಗಿ ಮಾಡಿ ಘೋಷಣೆ ಮಾಡಿದ್ದಾರೆ. ಲಂಡನ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಲಲಿತ್ ಮೋದಿ ತಮ್ಮ ಕುಟುಂಬದ ಕೆಕೆ ಮೋದಿ ಟ್ರಸ್ಟ್ಗೆ ಸಂಪೂರ್ಣವಾಗಿ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಕೆಕೆ ಮೋದಿ ಫ್ಯಾಮಿಲಿ ಟ್ರಸ್ಟ್ನ ಅಧಿಕಾರವನ್ನ ತಮ್ಮ ಮಗ ರುಚಿರ್ ಮೋದಿಯವರಿಗೆ ಹಸ್ತಾಂತರ ಮಾಡಿರುವ ವಿಚಾರವನ್ನ ಟ್ವೀಟ್ ಮೂಲಕವೇ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನ ಪೋಸ್ಟ್ ಮಾಡಿದ್ದು, ನನ್ನ ಮಕ್ಕಳಿಬ್ಬರೂ ಈ ವಿಷಯದಲ್ಲಿ ಸಮಾನ ಫಲಾನುಭವಿಗಳು. ಆದರೆ ಲೀಡರ್ ಒಬ್ಬನೇ ಆಗಿರಬೇಕು. ಮಗಳ ಜೊತೆ ಚರ್ಚಿಸಿಯೇ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಉಲ್ಲೇಖ ಮಾಡಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಲಲಿತ್ ಮೋದಿ ಹಾಗೂ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ನಡುವಿನ ಸಂಬಂಧದ ಗುಟ್ಟು ರಟ್ಟಾಗಿಟ್ಟು. ಸ್ವತಃ ಲಲಿತ್ ಮೋದಿಯವರೇ ಸುಶ್ಮಿತಾ ಜೊತೆಗಿನ ಫೋಟೋಗಳನ್ನ ಶೇರ್ ಮಾಡಿದ್ದರು. ಇನ್ಸ್ಟಾಗ್ರಾಂನಲ್ಲಿ ತಮ್ಮ ಹೆಸರಿನ ಪಕ್ಕ ಸುಶ್ಮಿತಾ ಹೆಸರು ಸೇರಿಸಿದ್ದರು. ಈ ನಡುವೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಲಲಿತ್ ಮೋದಿ ಕೂಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಸುಶ್ಮಿತಾ ಹೆಸರನ್ನ ತೆಗೆದುಹಾಕಿದ್ದರು. ಲಲಿತ್ ಮೋದಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅನೇಕರು ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಕೂಡ ಬೇಗ ಗುಣಮುಖರಾಗಿ ಎಂದು ಲಲಿತ್ಗೆ ವಿಶ್ ಮಾಡಿದ್ದಾರೆ. ಆದ್ರೆ ಸುಶ್ಮಿತಾ ಮಾತ್ರ ಯಾವುದೇ ಫೋಸ್ಟ್ ಶೇರ್ ಮಾಡಿಲ್ಲ.