ಸರ್ಕಾರಿ ನೌಕರರಿಗೆ ಟಫ್ ರೂಲ್ಸ್ – ಇನ್ಮುಂದೆ ಖಾದಿ ಉಡುಪು ಕಡ್ಡಾಯ

ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಲ್ಲಿ ಸ್ವದೇಶಿ ಪ್ರೇಮ ಹಾಗೂ ಖಾದಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಪ್ರತಿ ತಿಂಗಳ ಮೊದಲ ಶನಿವಾರದಂದು ಎಲ್ಲಾ ಸರ್ಕಾರಿ ನೌಕರರು ಕಡ್ಡಾಯವಾಗಿ ಖಾದಿ ಉಡುಪು ಧರಿಸುವಂತೆ ಸೂಚನೆ ನೀಡಲಾಗಿದೆ. ಈ ನಿಯಮವು ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ ಮತ್ತು ಅನುದಾನಿತ ಸಂಸ್ಥೆಗಳಿಗೂ ಅನ್ವಯಿಸಲಿದೆ.
ನೌಕರರು ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಳಿಗೆಗಳಲ್ಲಿಯೇ ಬಟ್ಟೆಗಳನ್ನು ಖರೀದಿಸಬೇಕು ಎಂದು ತಿಳಿಸಲಾಗಿದೆ. ನೌಕರರನ್ನು ಪ್ರೋತ್ಸಾಹಿಸಲು ಖಾದಿ ಗ್ರಾಮೋದ್ಯೋಗ ಮಂಡಳಿಯು ಪ್ರಸ್ತುತ ನೀಡುತ್ತಿರುವ ರಿಯಾಯಿತಿಯ ಜೊತೆಗೆ ಹೆಚ್ಚುವರಿಯಾಗಿ ಶೇ. 5% ವಿಶೇಷ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ ನೌಕರರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಖಾದಿ ಬಟ್ಟೆಗಳು ಸಿಗಲಿವೆ.
ಇದನ್ನೂ ಓದಿ: ಹಣಕ್ಕಾಗಿ ಗರ್ಭಿಣಿ ಪತ್ನಿಯನ್ನೇ ಕೊಂದು ಬಿಟ್ಟ ಪಾಪಿ ಪತಿ! – ದೆಹಲಿ ಸ್ವಾಟ್ ಕಮಾಂಡೊ ದುರಂತ ಅಂತ್ಯ!
ಸಭೆಯಲ್ಲಿ ಉಡುಪಿನ ವಿನ್ಯಾಸದ ಬಗ್ಗೆಯೂ ಸ್ಪಷ್ಟನೆ ನೀಡಲಾಗಿದೆ. ಪುರುಷ ನೌಕರರು ಖಾದಿ ಶರ್ಟ್-ಪ್ಯಾಂಟ್ ಅಥವಾ ಓವರ್ ಕೋಟ್ ಧರಿಸಬೇಕು. ಮಹಿಳಾ ನೌಕರರಿಗೆ ಖಾದಿ ಅಥವಾ ಖಾದಿ ಸಿಲ್ಕ್ ಸೀರೆ ಅಥವಾ ಚೂಡಿದಾರ್ ಧರಿಸಲು ಸೂಚಿಸಲಾಗಿದೆ. ಶಿಸ್ತಿನ ಹಾಗೂ ಸಾಂಪ್ರದಾಯಿಕ ಉಡುಗೆಯ ಮೂಲಕ ಕಚೇರಿಗಳಲ್ಲಿ ಹೊಸ ಸಂಚಲನ ಮೂಡಿಸಲು ಸರ್ಕಾರ ಮುಂದಾಗಿದೆ.
ಈ ನೂತನ ಯೋಜನೆಯನ್ನು 2026ರ ಏಪ್ರಿಲ್ 21ರಂದು ಅಂದರೆ ‘ಸರ್ಕಾರಿ ನೌಕರರ ದಿನಾಚರಣೆ’ಯಂದು ಅಧಿಕೃತವಾಗಿ ಚಾಲನೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಸುತ್ತೋಲೆ ಹೊರಬೀಳಲಿದ್ದು, ಅಂದಿನಿಂದಲೇ ರಾಜ್ಯಾದ್ಯಂತ ಎಲ್ಲಾ ಕಚೇರಿಗಳಲ್ಲಿ ಖಾದಿ ಕಳೆ ಕಟ್ಟುವುದು ಖಚಿತವಾಗಿದೆ.

ನೋಡಿರಿ

