ಪೈಲಟ್ ಆಗಿದ್ದ ಗಂಡ ವಿಮಾನ ದುರಂತಕ್ಕೆ ಬಲಿಯಾಗಿದ್ದ – ಈಗ ಪತ್ನಿಯದ್ದೂ ಅದೇ ದುರಂತ ಸಾವು..!
ನೇಪಾಳ ವಿಮಾನ ದುರಂತದಲ್ಲಿ ಬಲಿಯಾದವರದ್ದು ಒಬ್ಬೊಬ್ಬರದ್ದು ಒಂದೊಂದು ಕಥೆ ವ್ಯಥೆ. ಇನ್ನೇನು ತಮ್ಮ ಪಯಣ ಮುಗಿಯುತ್ತಾ ಬಂತು ಅನ್ನೋವಾಗಲೇ ಅವರ ಜೀವನದ ಪಯಣವೂ ಅಂತ್ಯವಾಗಿತ್ತು. ಆದರೆ, ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಮಹಿಳಾ ಪೈಲಟ್ ಅಂಜು ಖಾತಿವಾಡ ಕೂಡಾ ಒಬ್ಬರು. ಇವರ ಜೀವನ ಕಥೆ ನಿಜಕ್ಕೂ ಮನಕಲಕುವಂತದ್ದು. ಮನಸಾರೆ ಇಷ್ಟಪಟ್ಟು ಮದುವೆಯಾಗಿದ್ದ ಪತಿಯನ್ನು ಕಳೆದುಕೊಂಡ ಹಾಗೆಯೇ ಈಕೆ ಕೂಡಾ ದುರಂತ ಸಾವನ್ನಪ್ಪಿರುವ ರೀತಿ ನೋಡಿದರೆ ವಿಧಿ ಬರಹ ಇಷ್ಟೂ ಕ್ರೂರವಾಗಿರುತ್ತೆ ಅಂತಾ ಅನ್ನಿಸದೇ ಇರಲ್ಲ.
ಇದನ್ನೂ ಓದಿ: ದುರಂತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಕರ ಕೊನೇ ಮಾತು – ಹೃದಯ ಹಿಂಡುವಂತಿದೆ ಆ ಉದ್ಘಾರ..!
ಅಂಜು ಖಾತಿವಾಡ ಅವರ ಗಂಡ ದೀಪಕ್ ಪೋಖ್ರೆಲ್ ಪೈಲಟ್ ಆಗಿದ್ದರು. 2006ರಲ್ಲಿ ದೇಶೀಯ ಸಣ್ಣ ಪ್ರಯಾಣಿಕರ ವಿಮಾನವೊಂದು ಲ್ಯಾಂಡ್ ಆಗುವ ಕೆಲ ನಿಮಿಷಗಳ ಮೊದಲು ಅಪಘಾತಕ್ಕೀಡಾಗಿತ್ತು. ಇದರಲ್ಲಿ ಅಂಜು ಖಾತಿವಾಡ ತನ್ನ ಗಂಡನನ್ನು ಕಳೆದುಕೊಳ್ಳುತ್ತಾರೆ. 2006 ರಲ್ಲಿ ಜುಮ್ಲಾದಲ್ಲಿ ಯೇತಿ ಏರ್‌ಲೈನ್ಸ್ ನ ಟ್ವಿನ್ ಆಟರ್ ವಿಮಾನದ ಅಪಘಾತದಲ್ಲಿ ದೀಪಕ್ ಪೋಖ್ರೆಲ್ ಸಾವಿಗೀಡಾಗುತ್ತಾರೆ. ತನ್ನ ಗಂಡನ ಸಾವಿನಿಂದ ಕಂಗೆಟ್ಟರೂ, ತಾನೂ ಕೂಡಾ ಪೈಲಟ್ ಆಗಬೇಕೆಂದು ಹಠ ತೊಟ್ಟ ಅಂಜು, ಪತಿಯ ಮರಣದ ನಂತರ ವಿಮೆಯಿಂದ ಪಡೆದ ಹಣದಿಂದ ಪೈಲಟ್ ತರಬೇತಿ ಪಡೆಯುತ್ತಾರೆ. 2010ರಲ್ಲಿ ಅಂಜು ಖಾತಿವಾಡಾ ನೇಪಾಳದ ಯೇತಿ ಏರ್‌ಲೈನ್ಸ್ ವಿಮಾನದಲ್ಲಿ ಸಹ ಪೈಲಟ್ ಹುದ್ದೆಗೆ ಸೇರಿಕೊಳ್ಳುತ್ತಾರೆ. ಸುಮಾರು 6,400 ಗಂಟೆ ವಿಮಾನ ಚಾಲನೆಯಲ್ಲಿ ಅನುಭವ ಇರುವ ಅಂಜು, ರಾಜಧಾನಿ ಕಠ್ಮಂಡುವಿನಿಂದ ದೇಶದ ಎರಡನೇ ಅತಿ ದೊಡ್ಡ ನಗರ ಹಾಗೂ ಪ್ರಸಿದ್ಧ ಪ್ರವಾಸಿ ತಾಣವಾದ ಪೋಖರಾಗೆ ಹಿಂದೆಯೂ ವಿಮಾನ ಚಲಾಯಿಸಿದ್ದರು. ಭಾನುವಾರದಂದು ಅವರು ವಿಮಾನ ಸಂಸ್ಥೆಯ ನಿಯಮಾವಳಿಯ ಪ್ರಕ್ರಿಯೆಯಂತೆ ಸೂಚನಾ ಪೈಲಟ್ ಜತೆ ವಿಮಾನ ಚಲಾಯಿಸುತ್ತಿದ್ದರು. ಆದರೆ, ಪತಿಯ ಸಾವಿನ ರೀತಿಯೇ ಅಂಜು ಕೂಡಾ ತನ್ನ ಜೀವನವನ್ನು ಕೊನೆಗೊಳಿಸುತ್ತಾರೆ ಎಂದು ಯಾರು ಬಲ್ಲವರು. ಅಂಜು ತಾನು ಪೈಲಟ್ ಆಗಿ ತನ್ನ ಜೀವನದ ಗುರಿಯನ್ನು ಮುಟ್ಟಿದರೂ ಕೂಡಾ ಗಂಡನಂತೆ ತಾನೂ ಕೂಡಾ ದುರಂತ ಅಂತ್ಯ ಕಂಡಿದ್ದಾರೆ.