ಕೌಟುಂಬಿಕ ಕಲಹಕ್ಕೆ ತವರು ಸೇರಿದ ಸೊಸೆ – ಗರ್ಭಿಣಿ ಸೊಸೆಯನ್ನೇ ಕತ್ತು ಸೀಳಿ ಕೊ*ದ ಮಾವ

ಕೌಟುಂಬಿಕ ಕಲಹಕ್ಕೆ ತವರು ಸೇರಿದ ಸೊಸೆ – ಗರ್ಭಿಣಿ ಸೊಸೆಯನ್ನೇ ಕತ್ತು ಸೀಳಿ ಕೊ*ದ  ಮಾವ

ಕೌಟುಂಬಿಕ ಕಲಹದ ಹಿನ್ನೆಲೆ ಮಾವನೇ ಗರ್ಭಿಣಿ ಸೊಸೆಯನ್ನು ಕತ್ತು ಸೀಳಿ ಹತ್ಯೆ ಮಾಡಿರುವ ದುರ್ಘಟನೆ ರಾಯಚೂರು ಜಿಲ್ಲೆಯ ಚಿಕ್ಕಹಣಗಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಸಿರವಾರ ತಾಲೂಕಿನ ಚಿಕ್ಕಹಣಗಿ ಗ್ರಾಮದ ರೇಖಾ(26) ಕೊಲೆಯಾದ ಸೊಸೆ . 50 ವರ್ಷದ ಸಿದ್ದಪ್ಪನನ್ನ ಪೊಲೀಸರು  ಬಂಧಿಸಿದ್ದಾರೆ.

ಮೂರು ವರ್ಷಗಳ ಹಿಂದೆ ರೇಖಾ ಹಾಗೂ ನಾಗರಾಜ್ ಮದುವೆಯಾಗಿತ್ತು. ಆರಂಭದ ದಿನಗಳಲ್ಲಿ ರೇಖಾಳನ್ನು ಪತಿಯ ಮನೆಯಲ್ಲಿ ಚೆನ್ನಾಗಿ ನೋಡಿಕೊಂಡಿದ್ದರು. ಆದರೆ ಆರು ತಿಂಗಳ ನಂತರ ಅತ್ತೆ- ಮಾವ ಸಿದ್ದಪ್ಪ ಹೊಲದ ಕೆಲಸಕ್ಕೆ ಹಚ್ಚಿದ್ದರು. ಈ ಹೊಲದ ಕೆಲಸದ ವಿಚಾರಕ್ಕೆ ಮನೆಯಲ್ಲಿ ಆಗಾಗ್ಗೆ ಜಗಳವಾಗುತ್ತಿತ್ತು. ಅಪ್ಪ ಅಮ್ಮನನ್ನು ಬಿಟ್ಟು ಮಗ ನಾಗರಾಜನ ಪತ್ನಿ ರೇಖಾ ಜೊತೆಗೆ ಹಿರೇಹಣಗಿಯಲ್ಲಿ ಬೇರೆ ಮನೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ಇಬ್ಬರ ಸಾವಿಗೆ ಕಾರಣವಾದವಳು ಕೊನೆಗೂ ಅರೆಸ್ಟ್! – ಬೇರೊಬ್ಬನೊಂದಿಗೆ ಓಡಿಹೋಗಿದ್ದ ಮಹಿಳೆ ಸಿಕ್ಕಿಬಿದ್ದಿದ್ದು ಹೇಗೆ?

ಸೊಸೆ ರೇಖಾ ಗರ್ಭಿಣಿ ಎಂದು ತಿಳಿದು ಮನೆಗೆ ಬಂದಿದ್ದ ಅತ್ತೆ- ಮಾವ, ಬೇರೆ ಮನೆ ಏಕೆ ಮಾಡುತ್ತೀರಿ, ನಮ್ಮ ಮನೆಗೆ ಬನ್ನಿ ಎಂದು ಕರೆದುಕೊಂಡು ಹೋಗಿದ್ದರು. ಬುಧವಾರ ಸಹ ಚಿಕ್ಕಪುಟ್ಟ ವಿಚಾರಕ್ಕೆ ಸೊಸೆ – ಮಾವನ ನಡುವೆ ಜಗಳ ಶುರುವಾಗಿತ್ತು. ಆಗ ರೇಖಾ ತನ್ನ ತವರು ಮನೆಗೆ ಬಂದು ನೆಲೆಸಿದ್ದಳು. ಇದರಿಂದ ಕುಪಿತನಾದ ಆರೋಪಿ ಸಿದ್ದಪ್ಪ ಮನೆಗೆ ಆಗಮಿಸಿ ನಾಲ್ಕು ತಿಂಗಳ ಗರ್ಭಿಣಿ ಎನ್ನುವುದನ್ನೂ ಸಹ ನೋಡದೆ ಚಾಕುವಿನಿಂದ ಸೊಸೆಯ ಕುತ್ತಿಗೆ ಕೊಯ್ದು, ಮುಖಕ್ಕೆ ಚುಚ್ಚಿ ಪರಾರಿಯಾಗಿದ್ದಾನೆ. ಗಾಯಗೊಂಡ ಸೊಸೆ ನರಳುತ್ತಾ ಹೊರಗೆ ಬಂದು ಕಟ್ಟೆ ಮೇಲೆ ಬಿದ್ದು ಸಾವ್ನಪ್ಪಿದ್ದಾಳೆ. ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಾವ ಸಿದ್ದಪ್ಪ, ಗಂಡ ನಾಗರಾಜ್ ಹಾಗೂ ಅತ್ತೆ ಬಸಮ್ಮ ವಿರುದ್ಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕವಿತಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಖುದ್ದು ಭೇಟಿ ನೀಡಿ ತಪಾಸಣೆ ನಡೆಸಿದರು. ಹೊಲಕ್ಕೆ ಕೆಲಸಕ್ಕೆ ಹೋಗುವ ವಿಚಾರಕ್ಕೆ ಮಾವನ ಮನೆಯಲ್ಲಿ ಜಗಳವಾಗಿದೆ. ರೇಖಾ ತವರು ಮನೆಯಲ್ಲಿದ್ದಾಗ ಅಲ್ಲಿಯೇ ಹೋಗಿ ಮಾವ ಸಿದ್ದಪ್ಪ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಕವಿತಾಳ ಪೊಲೀಸರು ಮಾಹಿತಿ ನೀಡಿದ್ದಾರೆ‌.

Kishor KV