ಮಹಾರಾಷ್ಟ್ರ ಡಿಸಿಎಂ ಪ್ರಯಾಣಿಸುತ್ತಿದ್ದ ವಿಮಾನ ಪತನ – ರಾಜಕೀಯ ಬದುಕು ಕೊಟ್ಟ ಕ್ಷೇತ್ರದಲ್ಲೇ ಅಜಿತ್ ಪವಾರ್ ದುರ್ಮರಣ

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡಿದೆ. ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ದುರ್ಮರಣಕ್ಕೀಡಾಗಿದ್ದಾರೆ.
ಅಜಿತ್ ಪವಾರ್ ಪಯಣಿಸುತ್ತಿದ್ದ ವಿಮಾನವು ಮಹಾರಾಷ್ಟ್ರದ ಬಾರಾಮತಿಯಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದೆ. ಇವತ್ತು ಬೆಳಗ್ಗೆ (ಬುಧವಾರ) ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಲ್ಯಾಂಡಿಂಗ್ ಮಾಡುವ ವೇಳೆ ಪತನಗೊಂಡಿದ್ದು, ಅಪಘಾತದಲ್ಲಿ 66 ವರ್ಷದ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ.
ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಸೇರಿ ಆರು ಮಂದಿಯನ್ನು ವಿಮಾನ ಪತನವಾದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತು. ಆದರೆ, ಅಜಿತ್ ಪವಾರ್ ಸೇರಿ 6 ಜನರು ಕೂಡ ದುರ್ಮರಣ ಹೊಂದಿದ್ದಾರೆ. ಘಟನಾ ಸ್ಥಳದ ದೃಶ್ಯಗಳು ಕೂಡಾ ಘೋರವಾಗಿದೆ. ವಿಮಾನದ ಅವಶೇಷಗಳು ಪ್ರದೇಶದಾದ್ಯಂತ ಹರಡಿಕೊಂಡಿದೆ. ಬೆಂಕಿಯ ಜ್ವಾಲೆಗಳು ಮತ್ತು ದಟ್ಟವಾದ ಹೊಗೆ ಇಡೀ ಪ್ರದೇಶದಲ್ಲಿ ಆವರಿಸಿಕೊಂಡಿದೆ.
ಬಾರಾಮತಿ ವಿಮಾನ ನಿಲ್ದಾಣದ ಬಳಿ ಅಪಘಾತ ಸಂಭವಿಸಿದಾಗ ಆ ವಿಮಾನದಲ್ಲಿ ಅಜಿತ್ ಪವಾರ್ ಅವರ ಅಂಗರಕ್ಷಕರು ಸಹ ಇದ್ದರು ಎಂದು ವರದಿಯಾಗಿದೆ. ಅಜಿತ್ ಪವಾರ್ ದುರ್ಮರಣ ಹೊಂದಿದ ಸುದ್ದಿ ತಿಳಿದ ಬೆನ್ನಲ್ಲೇ ಸುಪ್ರಿಯಾ ಸುಳೆ, ಸುನೇತ್ರಾ ಪವಾರ್ ಮತ್ತು ಪಾರ್ಥ್ ಪವಾರ್ ದೆಹಲಿಯಿಂದ ಬಾರಾಮತಿಗೆ ತೆರಳಿದ್ದಾರೆ. ವಿಪರ್ಯಾಸವೆಂದರೆ, ಅಜಿತ್ ಪವಾರ್ ಅವರಿಗೆ ಬಾರಾಮತಿ ಕ್ಷೇತ್ರ ರಾಜಕೀಯ ಬದುಕು ನೀಡಿದ ಸ್ಥಳ. ಇದೀಗ ಇದೇ ಕ್ಷೇತ್ರದಲ್ಲಿ ಅಜಿತ್ ಪವಾರ್ ಅವರು ದುರ್ಮರಣಕ್ಕೀಡಾಗಿದ್ದು ವಿಧಿ ವಿಪರ್ಯಾಸವೇ ಸರಿ.

ನೋಡಿರಿ

