ವಿಶ್ವಕಪ್ ನಲ್ಲೂ ಬಾಲ ಬಿಚ್ಚಿದ PAK – ಭಾರತದ ವಿರುದ್ಧದ ಪಂದ್ಯ ಬಾಯ್ಕಾಟ್?
ಸೋಲಿನ ನಡುಕದಲ್ಲೇ ಹೊಸ ನಾಟಕ

ವಿಶ್ವಕಪ್ ನಲ್ಲೂ ಬಾಲ ಬಿಚ್ಚಿದ PAK – ಭಾರತದ ವಿರುದ್ಧದ ಪಂದ್ಯ ಬಾಯ್ಕಾಟ್?ಸೋಲಿನ ನಡುಕದಲ್ಲೇ ಹೊಸ ನಾಟಕ

ಟಿ-20 ವಿಶ್ವಕಪ್​ನಲ್ಲಿ ಎಲ್ಲಾ ತಂಡಗಳು ಟ್ರೋಫಿ ಮೇಲೆ ಕಣ್ಣಿಟ್ಟು ಟೀಂ ಅನೌನ್ಸ್ ಮಾಡಿ ಗೇಮ್ ಪ್ಲ್ಯಾನ್​ಗಳನ್ನ ರೆಡಿ ಮಾಡ್ತಿದ್ರೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಮಾತ್ರ ಭಾರತದ್ದೇ ಚಿಂತೆ. ಒಂದಿಲ್ಲೊಂದು ನೆಪ ತೆಗೆದು ಕಾಲು ಕೆರ್ಕೊಂಡು ಜಗಳ ಮಾಡ್ತಿದ್ದಾರೆ. ಐಸಿಸಿ ಮುಂದೆ ಇಲ್ಲಸಲ್ಲದ ತಗಾದೆ ತೆಗೀತಿದ್ದಾರೆ. ಫುಲ್ ಬಿಲ್ಡಪ್ ಕೊಡ್ತಿದ್ದ ಬಾಂಗ್ಲಾ ಕೊನೆಗೆ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದೆ. ಈಗ ಪಾಕಿಸ್ತಾನ ಹೊಸ ವರಸೆ ಶುರು ಮಾಡಿದೆ. ನಾವು ಟಿ-20 ವಿಶ್ವಕಪ್ ಆಡ್ತೀವಿ ಆದ್ರೆ ಭಾರತದ ವಿರುದ್ಧ ಪಂದ್ಯಗಳನ್ನ ಆಡಲ್ಲ ಬಾಯ್ಕಾಟ್ ಮಾಡ್ತೀವಿ ಅಂತಾ ಕಿರಿಕ್ ತೆಗೆದಿದೆ.

ಇದನ್ನೂ ಓದಿ : ಅಂಡರ್-19 ವಿಶ್ವಕಪ್​ನಲ್ಲಿ ವೈಭವ್ ಆರ್ಭಟ – 308 ಸ್ಟ್ರೈಕ್ ರೇಟ್.. 24 ಎಸೆತಗಳಲ್ಲಿ ಅರ್ಧಶತಕ

ಫೆಬ್ರವರಿ 7 ರಿಂದ ಟಿ-20 ವಿಶ್ವಕಪ್ ಆರಂಭವಾಗಲಿದ್ದು 20 ತಂಡಗಳ ನಡುವೆ ಹೈವೋಲ್ಟೇಜ್ ಫೈಟ್ ನಡೆಯಲಿದೆ. ಬಾಂಗ್ಲಾ ಟೂರ್ನಿಯಿಂದಲೇ ಹೊರ ಬಿದ್ದಿರೋದ್ರಿಂದ ಅವ್ರ ಪ್ಲೇಸಲ್ಲಿ ಸ್ಕಾಟ್ಲೆಂಡ್ ಅವಕಾಶ ಗಿಟ್ಟಿಸಿಕೊಂಡಿದೆ. ಇಂಟ್ರೆಸ್ಟಿಂಗ್ ಅಂದ್ರೆ ಬಾಂಗ್ಲಾದಂತೆಯೇ ಪಾಕಿಸ್ತಾನ ಕೂಡ ಆರಂಭದಲ್ಲಿ ಪಂದ್ಯಗಳನ್ನ ಆಡಿಲ್ಲ ಎಂದಿದ್ದಾದ್ರೂ ಐಸಿಸಿ ವಾರ್ನಿಂಗ್ ಬೆನ್ನಲ್ಲೇ ಸೈಲೆಂಟಾಗಿ ಟೀಂ ಘೋಷಣೆ ಮಾಡಿದೆ. ಆದ್ರೆ ವಿಶ್ವಕಪ್​ಗೆ ಟೀಂ ಅನೌನ್ಸ್ ಮಾಡಿದ್ರೂ ಪಂದ್ಯಗಳನ್ನ ಆಡ್ತಾರಾ ಇಲ್ವಾ ಅನ್ನೋ ಅನುಮಾನ ಶುರುವಾಗಿದೆ.

ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸುತ್ತಾ ಪಾಕ್?

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಅಂದ್ರೇನೆ ಹಾಗೆ. ಜಗತ್ತಿನ ಯಾವುದೇ ಪಂದ್ಯ​ಗಳಿಗೂ ಇರದಷ್ಟು ಫ್ಯಾನ್ಸ್ ಕ್ರೇಜ್ ಹಾಗೇ ಹೀಟಪ್ ಇರುತ್ತೆ. ಐಸಿಸಿ ಟೂರ್ನಿಗಳು ಅಂತಾ ಬಂದಾಗ ಸೋಲು ಗೆಲುವಿನ ಲೆಕ್ಕಾಚಾರ ಕೇವಲ ಆಟದ ಮೈದಾನಗಳಿಗಷ್ಟೇ ಸೀಮಿತವಾಗದೆ ಎರಡೂ ರಾಷ್ಟ್ರಗಳ ಪ್ರತಿಷ್ಠೆಯ ಪ್ರಶ್ನೆಯೂ ಆಗಿರುತ್ತೆ. ಈ ಬಾರಿಯ ಟಿ-20 ವಿಶ್ವಕಪ್​ನಲ್ಲಿ ಫೆಬ್ರವರಿ 15 ರಂದು ಭಾರತ ಮತ್ತು ಪಾಕ್ ಪಂದ್ಯಕ್ಕೆ ಶೆಡ್ಯೂಲ್ ಫಿಕ್ಸ್ ಆಗಿದೆ. ಇಡೀ ಟೂರ್ನಿಯಲ್ಲಿ ಈ ಪಂದ್ಯವೇ ಹೈವೋಲ್ಟೇಜ್ ಮ್ಯಾಚ್. ಆದ್ರೆ ಪಾಕಿಸ್ತಾನ ಈಗ ಭಾರತ ವಿರುದ್ಧದ ಪಂದ್ಯವನ್ನೇ ಬಾಯ್ಕಾಟ್ ಮಾಡೋ ಚಿಂತನೆಯಲ್ಲಿದೆ. 2025ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಎದುರು ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದ ಪಾಕಿಸ್ತಾನ ಈಗ ಐಸಿಸಿ ಟೂರ್ನಿಯಲ್ಲಿ ಪಂದ್ಯವನ್ನೇ ಆಡದೆ ಇರೋಕೆ ನಿರ್ಧಾರ ಮಾಡಿದೆ.

ವಿಶ್ವಕಪ್ ಗಷ್ಟೇ ತಂಡ ಘೋಷಣೆ.. ಸರ್ಕಾರದ್ದೇ ಅಂತಿಮ ನಿರ್ಧಾರ!

ಟಿ-20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಪಂದ್ಯಗಳನ್ನ ಆಡ್ಬೇಕಾ ಬೇಡ್ವಾ ಅಥವಾ ಭಾರತದ ವಿರುದ್ಧ ಮಾತ್ರ ಬಾಯ್ಕಾಟ್ ಮಾಡ್ಬೇಕಾ ಅನ್ನೋ ಬಗ್ಗೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಡುವೆ ಮಹತ್ವದ ಸಭೆ ನಡೆಯಲಿದೆ. ಬಾಂಗ್ಲಾದೇಶ ತಂಡ ವಿಶ್ವಕಪ್‌ನಿಂದ ಹೊರಬಿದ್ದಿರೋದ್ರಿಂದ ನಾವೂ ಕೂಡ ಹಿಂದೆ ಸರಿಯೋಣ ಅನ್ನೋದ್ರ ಬಗ್ಗೆಯೂ ಚರ್ಚೆ ನಡೆಸ್ತಾರೆ. ಇನ್ನು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರರನ್ನು ಮೀಟ್ ಮಾಡಿ ಟಿ20 ವಿಶ್ವಕಪ್‌ಗೆ ತಂಡ ಮಾತ್ರ ಘೋಷಿಸಲಾಗಿದೆ. ಆದ್ರೆ ಪಂದ್ಯಗಳನ್ನ ಆಡ್ಬೇಕಾ ಬೇಡ್ವಾ ಅನ್ನೋ ಪಾಕಿಸ್ತಾನ ಸರ್ಕಾರ ಡಿಸೈಡ್ ಮಾಡುತ್ತೆ. ಒಂದು ವೇಳೆ ಟೂರ್ನಿ ಆಡಿದ್ರೂ ಕೂಡ ಭಾರತದ ವಿರುದ್ಧದ ಪಂದ್ಯವನ್ನ ಆಡದೇ ಇರೋ ಬಗ್ಗೆ ನಿರ್ಧಾರವನ್ನ ತೆಗೆದುಕೊಳ್ಳೋ ಚಾನ್ಸಸ್ ಇದೆ ಅಂತಾ ಆಟಗಾರರಿಗೆ ಪಿಸಿಬಿ ನಿರ್ಧಾರವನ್ನ ಹೇಳಿದ್ದಾರೆ. ಪಿಸಿಬಿ ಅಧ್ಯಕ್ಷರ ಈ ಮಾತಿಗೆ ಆಟಗಾರರು ಫುಲ್ ಸಪೋರ್ಟ್ ಮಾಡಿದ್ದಾರೆ. ಪಿಸಿಬಿ ಯಾವುದೇ ನಿರ್ಧಾರ ತಗೊಂಡ್ರೂ ನಾವು ನಿಮ್ಮ ಜೊತೆಗಿದ್ದೇವೆ ಅಂದಿದ್ದಾರೆ. ಅಷ್ಟಕ್ಕೂ ಇಲ್ಲಿ ಪಾಕಿಸ್ತಾನ ಇಂಥಾದ್ದೊಂದು ಭಂಡ ಧೈರ್ಯ ಮಾಡೋಕೆ ಕಾರಣ ಏಷ್ಯಾಕಪ್​ನಲ್ಲಾದ ಅವಮಾನ.

ಕೈ ಕುಲುಕದ ಭಾರತ.. ಹೆಜ್ಜೆ ಹೆಜ್ಜೆಗೂ ಪಾಕ್ ಗೆ ಅವಮಾನ!

ಪೆಹಲ್ಗಾಮ್ ಅಟ್ಯಾಕ್ ಬಳಿಕ ಭಾರತ ಪಾಕಿಸ್ತಾನದ ಆಟಗಾರರ ಜೊತೆ ಹ್ಯಾಂಡ್​ಶೇಕ್ ಮಾಡೋದನ್ನ ನಿಲ್ಲಿಸಿತ್ತು. ಏಷ್ಯಾಕಪ್​ನಲ್ಲಿ ಮೊದಲ ಪಂದ್ಯದಿಂದ ಹಿಡಿದು ಫೈನಲ್​ವರೆಗೂ ಒಟ್ಟು ಮೂರು ಸಲ ಮುಖಾಮುಖಿಯಾಗಿದ್ರು. ಈ ವೇಳೆ ಭಾರತ ಪಾಕ್​ ಆಟಗಾರರ ಕೈಕುಲಿಕಿರಲಿಲ್ಲ. ಹಾಗೇ ಸತತ ಮೂರು ಪಂದ್ಯಗಳನ್ನೂ ಭಾರತವೇ ಗೆದ್ದಿತ್ತು. ಆನ್​ಫೀಲ್ಡ್​ನಲ್ಲೂ ಸಾಕಷ್ಟು ಮುಖಭಂಗ ಅನುಭವಿಸಿದ್ರು. ಇನ್ನು ಫೈನಲ್​ನಲ್ಲಿ ಗೆದ್ದಿದ್ರೂ ಕೂಡ ಭಾರತ ಪಿಸಿಬಿ ಅಧ್ಯಕ್ಷನೂ ಆಗಿದ್ದ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ಪಡೆಯದೇ ಇದ್ದದ್ದೂ ಕೂಡ ಅವಮಾನವಾಗಿತ್ತು. ಅಲ್ಲಿಂದ ಈಚೆಗೆ ಭಾರತ ಮತ್ತು ಪಾಕ್ ನಡುವೆ ಯಾವುದೇ ಮಾದರಿ ಪಂದ್ಯಗಳಿದ್ರೂ ನೋ ಶೇಕ್ ಹ್ಯಾಂಡ್ ಪಾಲಿಸಿ ಹಾಗೇ ಮುಂದುವರಿದಿದೆ. ಇಷ್ಟೆಲ್ಲಾ ಬೆಳವಣಿಗೆ ಆದ್ಮೇಲೆ ಭಾರತದ ವಿರುದ್ಧ ಪಂದ್ಯವನ್ನೇ ಆಡಲ್ಲ ಅಂತಾ ಪಾಕಿಸ್ತಾನ ಹೊಸ ಕ್ಯಾತೆ ತೆಗೆದಿದೆ. ಆದ್ರೆ ಇದು ಅಷ್ಟು ಸುಲಭವೂ ಇಲ್ಲ.

ಬಾಯ್ಕಾಟ್ ಬೆದರಿಕೆ ಹಾಕಿದ್ರೆ ಪಾಕ್ ಗೆ ಬೀಳುತ್ತೆ ಬರೆ!

ಅಷ್ಟಕ್ಕೂ ಇಲ್ಲಿ ಪಾಕಿಸ್ತಾನ ಬಾಯ್ಕಾಟ್ ಬೆದರಿಕೆ ಹಾಕ್ತಿದೆ ನಿಜ. ಹಾಗಂತ ಅಷ್ಟು ಈಸಿಯಾಗಿ ಪಂದ್ಯವನ್ನ ಆಡದೆಯೂ ಇರೋಕೆ ಆಗಲ್ಲ. ಯಾಕಂದ್ರೆ ಪಾಕಿಸ್ತಾನವು ಟಿ20 ವಿಶ್ವಕಪ್ ಅಥವಾ ಭಾರತದ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸಿದರೆ ಐಸಿಸಿ ಭಾರಿ ದಂಡ ವಿಧಿಸಬಹುದು.. ಅಥವಾ ವಿಶ್ವಕಪ್‌ನಿಂದ ಪಾಯಿಂಟ್ಸ್ ಕಟ್ ಮಾಡಬಹುದು. ಅಷ್ಟೇ ಯಾಕೆ ಭವಿಷ್ಯದಲ್ಲಿ ಐಸಿಸಿ ಪಂದ್ಯಾವಳಿಗಳಿಂದ  ನಿಷೇಧವನ್ನೂ ಎದುರಿಸಬೇಕಾಗುತ್ತದೆ. ಯಾಕಂದ್ರೆ ಆಲ್ರೆಡಿ ಪಾಕಿಸ್ತಾನದ ಬೇಡಿಕೆಯಂತೆ 2026ರ ಟಿ20 ವಿಶ್ವಕಪ್‌ನಲ್ಲಿ ಅದರ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಡಿಯಲ್ಲಿ ಆಡಿಸಲಾಗ್ತಿದೆ. ಪಾಕಿಸ್ತಾನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಗುತ್ತೆ. ಹೀಗಿದ್ರೂ ಪಂದ್ಯ ಆಡಲ್ಲ ಅಂದ್ರೆ ಬಾಂಗ್ಲಾದಂತೆಯೇ ಫ್ಯೂಚರ್ ನಲ್ಲಿ ದೊಡ್ಡ ಹೊಡೆತ ತಿನ್ಬೇಕಾಗುತ್ತೆ.

ಪಾಕಿಸ್ತಾನ ಪಂದ್ಯ ಬಹಿಷ್ಕರಿಸಿದ್ರೆ ಭಾರತಕ್ಕೇ ಲಾಭ!

ಪಾಕ್ ಬೆದರಿಕೆಯಿಂದ ಐಸಿಸಿಗಾಗ್ಲೇ ಭಾರತಕ್ಕಾಗ್ಲಿ ಯಾವುದೇ ನಷ್ಟ ಇಲ್ಲ. ಹಾಗ್ ನೋಡಿದ್ರೆ ಭಾರತಕ್ಕೆ ಒಂಥರಾ ಲಾಭವೇ ಆಗುತ್ತೆ. ಸುಲಭವಾಗಿ 2 ಅಂಕಗಳನ್ನ ಪಡೆಯಲಿದೆ. ಮ್ಯಾಚ್ ಆಡಿದ್ರೂ ಭಾರತವೇ ಗೆಲ್ಲುತ್ತೆ ಅದು ಬೇರೆ ಪ್ರಶ್ನೆ. ಬಟ್ ಮ್ಯಾಚ್ ಆಡದೆಯೇ 2 ಪಾಯಿಂಟ್ಸ್ ಪಡೆಯಬಹುದು. ಆ ನಂತ್ರ ಪಾಕಿಸ್ತಾನ ಗ್ರೂಪ್​ ಸ್ಟೇಟ್​ನಲ್ಲಿ ಎಲ್ಲಾ ಪಂದ್ಯಗಳನ್ನೂ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕುತ್ತೆ. ಭಾರತ-ಪಾಕ್ ಪಂದ್ಯ ನಡೆಯದಿದ್ದರೆ, ಬ್ರಾಡ್‌ಕಾಸ್ಟರ್‌ಗಳಿಗೆ ಕೋಟ್ಯಂತರ ರೂಪಾಯಿ ಲಾಸ್ ಆಗುತ್ತೆ. ಐಸಿಸಿ ಕೂಡ ಪಿಸಿಬಿ ಮೇಲೆ ಹಲವು ನಿರ್ಬಂಧ ಏರಬಹುದು. ವಾರ್ಷಿಕವಾಗಿ ನೀಡುವ ಲಾಭ ಹಂಚಿಕೆಯಲ್ಲಿ ಪಾಕಿಸ್ತಾನಕ್ಕೆ ಕಡಿತಗೊಳಿಸುವ ಸಾಧ್ಯತೆ ಇದೆ. ಹೀಗಾಗಿ ಬಾಂಗ್ಲಾದೇಶದಂತೆ ಬಿಲ್ಡಪ್ ಕೊಡೋದನ್ನ ಬಿಟ್ಟು ಸೈಲೆಂಟಾಗಿ ಪಂದ್ಯಗಳನ್ನ ಆಡಿದ್ರಷ್ಟೇ ಪಾಕಿಸ್ತಾನಕ್ಕೆ ಒಳ್ಳೇದು.

Shantha Kumari