ಅಪ್ಪಿ ತಪ್ಪಿಯೂ ಈ ಹೂವನ್ನು ಬಾಯಲ್ಲಿ ಇಡಬೇಡಿ – ಕಣಗಿಲೆ ಹೂ ತಿಂದ್ರೆ ಜೀವಕ್ಕೇ ಆಪತ್ತು!

ಅಪ್ಪಿ ತಪ್ಪಿಯೂ ಈ ಹೂವನ್ನು ಬಾಯಲ್ಲಿ ಇಡಬೇಡಿ – ಕಣಗಿಲೆ ಹೂ ತಿಂದ್ರೆ ಜೀವಕ್ಕೇ ಆಪತ್ತು!

ಪ್ರಕೃತಿಯಲ್ಲಿ ನಮಗೆ ಇಂದಿಗೂ ಅರ್ಥವಾಗದ ಹಾಗೇ ವಿಜ್ಞಾನಲೋಕವನ್ನೂ ಬೆರಗುಗೊಳಿಸೋ ಸಾಕಷ್ಟು ಅಚ್ಚರಿಯ ವಿಚಾರಗಳಿವೆ. ಕೆಲವೊಮ್ಮೆ ನಮ್ಮ ಸುತ್ತ ಮುತ್ತ ಇರುವ ಪ್ರಾಣಿ, ಪಕ್ಷಿಗಳು, ಮರ, ಗಿಡ, ಹೂ, ತರಕಾರಿಗಳ ಗುಣಲಕ್ಷಣಗಳ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ. ಅದರಲ್ಲೂ ಕಣಗಿಲೆ ಹೂವಿನ ಬಗ್ಗೆ ತಿಳಿದರೆ ನಿಜಕ್ಕೂ ನೀವು ಆಶ್ಚರ್ಯಗೊಳ್ಳುತ್ತೀರಾ. ಅಪ್ಪಿ ತಪ್ಪಿ ನೀವು ಈ ಹೂವನ್ನು ತಿಂದರೆ ಜೀವರೇ ಹೋಗುತ್ತದೆ. ಅಷ್ಟೊಂದು ಅಪಾಯಕಾರಿ ಈ ಹೂ.

ಇದನ್ನೂ ಓದಿ :  ನ್ಯೂಜಿಲೆಂಡ್ ವಿರುದ್ಧ ದಾಖಲೆಗಳ ಸರಮಾಲೆ – ಅಜೇಯವಾಗಿ ವಿಶ್ವಕಪ್ ಗೆ ಕಾಲಿಟ್ಟ ಭಾರತ!

ಹೂವುಗಳಂದ್ರೆನೆ ಹಾಗೆ. ಅವುಗಳನ್ನ ನೋಡುವುದು, ಮುಟ್ಟುವುದು ಹಾಗೇ ಅವುಗಳ ಮಕರಂದ ಹೀರುವುದೇ ಚೆಂದ. ಇನ್ನೂ ಕೆಲವರಿಗೆ ಗುಲಾಬಿ, ಮಲ್ಲಿಗೆ ಸೇರಿದಂತೆ ಹೂ ಕಂಡಾಕ್ಷಣ ಮೂಗಿನ ಬಳಿ ಹಿಡಿದ ಮೂಸಿದರೇನೇ ಸಮಾಧಾನ. ಆದರೆ ಕೆಲವೊಮ್ಮೆ ಈ ರೀತಿಯ ಅಭ್ಯಾಸಗಳೇ ನಮ್ಮ ಜೀವ ತೆಗೆದು ಬಿಡುತ್ತದೆ. ಹೀಗೆ ಅಪಾಯಕಾರಿ ಲಿಸ್ಟ್ ಗೆ ಸೇರಿದ ಹೂ ಕಣಗಿಲೆ ಹೂ. ನೆರಿಯಮ್ ಒಲಿಯಾಂಡರ್ ಅಂತಾ ಕರೆಯುವ ಈ ಹೂ ಸಾಮಾನ್ಯವಾಗಿ ಒಲಿಯಾಂಡರ್ ಅಥವಾ ರೋಸ್ಬೇ ಎಂದೂ ಕರೆಯಲಾಗುತ್ತದೆ, ಇದು ಉಷ್ಣವಲಯದ, ಉಪೋಷ್ಣವಲಯದ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಪ್ರಪಂಚದಾದ್ಯಂತ ಬೆಳೆಯಬಹುದಾದ ಸಸ್ಯವಾಗಿದೆ. ಇದನ್ನು ಹೆಚ್ಚಾಗಿ ಅಲಂಕಾರಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕೇರಳದಲ್ಲಿ, ಈ ಸಸ್ಯವನ್ನು ಅರಳಿ ಮತ್ತು ಕಣವೀರಂ ಎಂಬ ಹೆಸರಿನಿಂದ ಕರೆಯಲಾಗುತ್ತದೆ, ಕರ್ನಾಟಕದಲ್ಲಿ ಕಣಗಿಲೆ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಇದನ್ನು ಹೆದ್ದಾರಿಗಳು ಮತ್ತು ಕಡಲತೀರಗಳಲ್ಲಿ ನೈಸರ್ಗಿಕ ಹಸಿರು ಬೇಲಿಯಾಗಿ ಬೆಳೆಯಲಾಗುತ್ತದೆ. ಹಾಗೇ ಮನೆಯಂಗಳದಲ್ಲೂ ಬೆಳೆಸುತ್ತಾರೆ.

ಕಣಗಿಲೆಯಲ್ಲಿ ವಿವಿಧ ಪ್ರಭೇದಗಳಿವೆ, ಪ್ರತಿಯೊಂದೂ ವಿಭಿನ್ನ ಬಣ್ಣದ ಹೂವುಗಳನ್ನು ಹೊಂದಿರುತ್ತದೆ. ಕಣಗಿಲೆಯ ಬೇರಿನ ತೊಗಟೆಯಿಂದ ತಯಾರಾದ ತೈಲವನ್ನು ಚರ್ಮ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು. ಸಸ್ಯವನ್ನು  ಬೃಹತ್ರಯಿ, ನಿಘಂಟಸ್ ಮತ್ತು ಇತರ ಶಾಸ್ತ್ರೀಯ ಆಯುರ್ವೇದ ಪಠ್ಯಗಳಲ್ಲಿ ವಿವರಿಸಲಾಗಿದೆ. ಚರಕ ಸಂಹಿತೆಯಲ್ಲೂ ಕುಷ್ಠರೋಗ ಸೇರಿದಂತೆ ಗಂಭೀರ ಸ್ವಭಾವದ ದೀರ್ಘಕಾಲದ ಮತ್ತು ಮೊಂಡುತನದ ಚರ್ಮ ರೋಗಗಳಿಗೆ ಬಾಹ್ಯವಾಗಿ ತುರಿಕೆಯಲ್ಲೂ ಬಳಸಲಾಗುವುದು. ಕಣಗಿಲೆಯನ್ನು ಕೆಲವು ಆಯುರ್ವೇದ ಸೂತ್ರೀಕರಣಗಳಲ್ಲಿ ಸೂಚಿಸಲಾಗಿದ್ದರೂ ಸಹ, ಇದರ ವಿಷತ್ವವು ಪ್ರಪಂಚದಾದ್ಯಂತ ಬಹಳ ಹಿಂದಿನಿಂದಲೂ ಗುರುತಿಸಲ್ಪಟ್ಟಿದೆ. ಈ ಸಸ್ಯವನ್ನು “ಪ್ರಾಚೀನ ಕಾಲದಿಂದಲೂ ಚಿಕಿತ್ಸೆಗಾಗಿ ಮತ್ತು ಆತ್ಮಹತ್ಯೆಯ ಸಾಧನವಾಗಿ ಬಳಸಿಕೊಳ್ಳಲಾಗಿದೆ ಎಂದು ಕೆಲವೊಂದು ಸಂಶೋಧನೆಗಳು ತಿಳಿಸಿವೆ. ಕಣಗಿಲೆ ಗಿಡವನ್ನು ಸುಡುವುದರಿಂದ ಹೊಗೆಯನ್ನು ಸೇವಿಸುವುದು ಸಹ ಅಮಲೇರಿಸಬಹುದು. ಕಣಗಿಲೆಯ ವಿಷದ ಪರಿಣಾಮಗಳು ತಕ್ಷಣಕ್ಕೆ ಗೋಚರಿಸದಿದ್ದರೂ ಕ್ರಮೇಣ ಕಾಣಿಸಲಾರಂಭಿಸುತ್ತದೆ. ಕಣಗಿಲೆಯ ವಿಷ ಸೇವನೆಯಿಂದ ವಾಕರಿಕೆ, ಅತಿಸಾರ, ವಾಂತಿ, ದದ್ದುಗಳು, ಗೊಂದಲ, ತಲೆತಿರುಗುವಿಕೆ, ಅನಿಯಮಿತ ಹೃದಯ ಬಡಿತ, ನಿಧಾನ ಹೃದಯ ಬಡಿತ ಮತ್ತು ವಿಪರೀತ ಸಂದರ್ಭಗಳಲ್ಲಿ ಸಾವು ಸಂಭವಿಸುತ್ತದೆ. ರೋಗಲಕ್ಷಣಗಳು 1 ರಿಂದ 3 ದಿನಗಳವರೆಗೆ ಇರುತ್ತದೆ ಮತ್ತು ಆಸ್ಪತ್ರೆಯಲ್ಲಿ ಉಳಿಯುವ ಅಗತ್ಯವಿರಬಹುದು. ಈ ಕಣಗಿಲೆ ಹೂ ಎಷ್ಟು ಡೇಂಜರಸ್ ಅಂದ್ರೆ 2024ರಲ್ಲಿ ಕೇರಳದ ಯುವತಿಯೊಬ್ಬಳು ಆಕಸ್ಮಿಕವಾಗಿ ಈ ಹೂವನ್ನ ತಿಂದು ಸಾವನ್ನಪ್ಪಿದ್ದಳು.

24 ವರ್ಷ ವಯಸ್ಸಿನ ನರ್ಸ್ ಸೂರ್ಯ ಸುರೇಂದ್ರನ್ ಅವರು 2024ರ ಏಪ್ರಿಲ್ 30 ರಂದು ಆಕಸ್ಮಿಕವಾಗಿ ಕಣಗಿಲೆ ಹೂವಿನ ವಿಷದಿಂದ ಜೀವವನ್ನೇ ಕಳೆದುಕೊಂಡರು. ಆಲಪ್ಪುಳದ ಪಲ್ಲಿಪಾಡ್‌ನಲ್ಲಿ ನೆಲೆಸಿದ್ದ ಯುವತಿ ಫೋನ್ ನಲ್ಲಿ ಮಾತನಾಡುತ್ತಾ ತನ್ನ ಮನೆಯ ಹೊರಗೆ ಬೆಳೆದ ಕಣಗಿಲೆ ಸಸ್ಯದ ಕೆಲವು ಹೂವುಗಳನ್ನು ಚೀಪಿದ್ದಳು. ಆಕೆಯ ಶವ ಪರೀಕ್ಷೆಯಲ್ಲಿ ಕಣಗಿಲೆ ಹೂವಿನ ವಿಷ ಸೇವಿಸಿರುವು ಪತ್ತೆಯಾಗಿತ್ತು. ಹೀಗಾಗಿ ಕಣಗಿಲೆ ಹೂವನ್ನು ಮೂಸುವಾಗ ಅಥವಾ ಬಾಯಲ್ಲಿ ಇಡುವಾಗ ಎಚ್ಚರಿಕೆಯಿಂದ ಇರಿ.

Shantha Kumari