ಚಿನ್ನದ ನಿಧಿ ಸರ್ಕಾರಕ್ಕೆ ಒಪ್ಪಿಸಿದ ಕುಟುಂಬಕ್ಕೆ ಬಂಪರ್ – ಗಣರಾಜ್ಯೋತ್ಸವ ದಿನವೇ ಒಲಿಯಿತು ಅದೃಷ್ಟ!

ಚಿನ್ನದ ನಿಧಿ ಸರ್ಕಾರಕ್ಕೆ ಒಪ್ಪಿಸಿದ ಕುಟುಂಬಕ್ಕೆ ಬಂಪರ್ – ಗಣರಾಜ್ಯೋತ್ಸವ ದಿನವೇ ಒಲಿಯಿತು ಅದೃಷ್ಟ!

ಲಕ್ಕುಂಡಿ. ಕಳೆದ ಎರಡು ವಾರಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಊರಿನ ಹೆಸರು.   ಗದಗ ಜಿಲ್ಲೆಯ ಈ ಗ್ರಾಮದಲ್ಲಿ ಮನೆ ಪಾಯ ಅಗೆಯುವ ವೇಳೆ ಚಿನ್ನದ ನಿಧಿ ಸಿಕ್ಕಿದ್ದು ಆ ಬಳಿಕ ಸಾಕಷ್ಟು ಸದ್ದು ಮಾಡಿತ್ತು. ಹಾಗೇ ಸರ್ಕಾರ ಇದೇ ಗ್ರಾಮದಲ್ಲಿ ಉತ್ಖನನ ಕೂಡ ಮಾಡ್ತಿದೆ. ಆದರೆ ತಮ್ಮ ಜಾಗದಲ್ಲಿ ಸಿಕ್ಕ ನಿಧಿಯನ್ನ ಆ ಮನೆ ಮಾಲೀಕರು ಸರ್ಕಾರಕ್ಕೆ ಒಪ್ಪಿಸಿದ್ದಕ್ಕೆ ಸಾಕಷ್ಟು ಜನ ಟೀಕೆ ಮಾಡಿದ್ರು. ಸರ್ಕಾರಕ್ಕೆ ಕೊಟ್ಟಿದ್ದೀರಿ, ನಿಮಗೇನು ಲಾಭ ಇಲ್ಲ, ನೀವೇ ಇಟ್ಟುಕೊಳ್ಳಬೇಕಿತ್ತು ಅಂತಾ ಬೈದಿದ್ರು. ಆದ್ರೆ ಸರ್ಕಾರ ಕೊನೆಗೂ ಆ ಕುಟುಂಬದ ನೆರವಿಗೆ ನಿಂತಿದೆ.

ಇದನ್ನೂ ಓದಿ : ಅಭಿಷೇಕ್  ಹಾಗೂ ಸೂರ್ಯಕುಮಾರ್ ಆರ್ಭಟ – ನ್ಯೂಜಿಲ್ಯಾಂಡ್ ವಿರುದ್ಧ ಟಿ20I ಸರಣಿ ಗೆದ್ದ ಟೀಂ IND

ತಮ್ಮದೇ ಜಾಗದಲ್ಲಿ ಸಿಕ್ಕ ನಿಧಿಯನ್ನ ಸರ್ಕಾರಕ್ಕೆ ಒಪ್ಪಿಸಿ ಖಾಲಿ ಕೈಯಲ್ಲಿದ್ದ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸರ್ಕಾರ ನೆರವಿಗೆ ಬಂದಿದೆ. ಪ್ರಾಮಾಣಿಕತೆ ಮೆರೆದ ಕುಟುಂಬಕ್ಕೆ ಭರ್ಜರಿ ಬಹುಮಾನ ಘೋಷಣೆ ಮಾಡಿದ್ದಾರೆ. ಅದೂ ಕೂಡ ಗಣರಾಜ್ಯೋತ್ಸವ ದಿನವೇ. ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆ ವೇಳೆ ಸಚವ ಹೆಚ್‌‌.ಕೆ ಪಾಟೀಲ್‌ ಲಕ್ಕುಂಡಿಯಲ್ಲಿ ಚಿನ್ನ ನಿಧಿ ಸಿಕ್ಕ ಕುಟುಂಬಕ್ಕೆ ಭರ್ಜರಿ ಗಿಫ್ಟ್‌ ಘೋಷಣೆ ಮಾಡಿದ್ದಾರೆ. ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 30:40 ಅಳತೆಯ ನಿವೇಶನ, ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ನಗದು ಸಹಾಯ ಹಾಗೂ ಪ್ರಜ್ವಲ್ ಅವರ ತಾಯಿ ಕಸ್ತೂರೆವ್ವ ರಿತ್ತಿಗೆ ಹೊರಗುತ್ತಿಗೆ ಆಧಾರದ ಸರ್ಕಾರಿ ಕೆಲಸ ನೀಡಲಾಗುತ್ತದೆ ಎಂದು ಸಚಿವರು ಘೋಷಣೆ ಮಾಡಿದರು. ಈ ವೇಳೆ ಬಾಲಕ ಪ್ರಜ್ವಲ್ ರಿತ್ತಿ ಮತ್ತು ಅವರ ತಾಯಿ ಕಸ್ತೂರೆವ್ವ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ. ಸಚಿವ ಪಾಟೀಲ್ ಅವರು ಕುಟುಂಬಕ್ಕೆ ನಿವೇಶನ ಪ್ರಮಾಣ ಪತ್ರ ಹಾಗೂ ಕಸ್ತೂರೆವ್ವ ಅವರಿಗೆ ಉದ್ಯೋಗದ ಆದೇಶ ಪತ್ರವನ್ನು ವಿತರಿಸಿದ್ದಾರೆ. ಸರ್ಕಾರದ ಈ ನಡೆ ಪ್ರಾಮಾಣಿಕತೆಗೆ ಸಿಕ್ಕ ಗೌರವ ಎಂದು ಸ್ಥಳೀಯರು ಪ್ರಶಂಸಿಸಿದ್ದಾರೆ.

ಲಕ್ಕುಂಡಿ ಗದಗ ಜಿಲ್ಲೆಯ ಐತಿಹಾಸಿಕ ಗ್ರಾಮವಾಗಿದ್ದು, ಚಾಲುಕ್ಯರ ಕಾಲದ ದೇವಾಲಯಗಳು, ಕೆರೆಗಳು ಹಾಗೂ ಪುರಾತತ್ವ ಮಹತ್ವದ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಹಿಂದೆಯೂ ಅನೇಕ ಬಾರಿ ಪುರಾತನ ವಸ್ತುಗಳು ಮತ್ತು ಅವಶೇಷಗಳು ಪತ್ತೆಯಾಗಿರುವ ದಾಖಲೆಗಳಿವೆ. ಜನವರಿ 10ರಂದು ಲಕ್ಕುಂಡಿಯಲ್ಲಿ ಪ್ರಜ್ವಲ್ ರಿತ್ತಿ ಕುಟುಂಬ ಮನೆ ನಿರ್ಮಾಣಕ್ಕಾಗಿ ಪಾಯ ಅಗೆಯುವ ವೇಳೆ 466 ಗ್ರಾಂ ತೂಕದ ಪುರಾತನ ಚಿನ್ನದ ಆಭರಣಗಳ ತಂಬಿಗೆ ಪತ್ತೆಯಾಗಿತ್ತು. ಚಿನ್ನ ನಿಧಿ ರೂಪದಲ್ಲಿ ಸಿಕ್ಕಿದ್ದರೂ ಯಾವುದೇ ಆಸೆಗೆ ಒಳಗಾಗದೆ ಕುಟುಂಬವು ಅದನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದು ರಾಜ್ಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು. ಪುರಾತತ್ವ ತಜ್ಞರ ಪ್ರಕಾರ, ಲಕ್ಕುಂಡಿ ಮಧ್ಯಯುಗೀನ ಕಾಲದಲ್ಲಿ ಪ್ರಮುಖ ವಾಣಿಜ್ಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದ್ದ ಕಾರಣ ಇಲ್ಲಿ ಚಿನ್ನ, ನಾಣ್ಯಗಳು ಮತ್ತು ಆಭರಣಗಳನ್ನು ನೆಲದಲ್ಲಿ ಸಂಗ್ರಹಿಸುವ ಪದ್ಧತಿ ಇದ್ದಿರಬಹುದೆಂದು ಅಂದಾಜಿಸಲಾಗಿದೆ. ಪ್ರಜ್ವಲ್ ರಿತ್ತಿ ಕುಟುಂಬ ಪತ್ತೆಹಚ್ಚಿದ ಚಿನ್ನದ ನಿಧಿಯೂ ಈ ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿಯಾಗಿದೆ. ಹೀಗಾಗಿ ಸರ್ಕಾರದ ವತಿಯಿಂದ ಗ್ರಾಮದಲ್ಲಿ ಉತ್ಖನನ ಕಾರ್ಯ ನಡೀತಿದ್ದು ಹಲವು ಐತಿಹಾಸಿಕ ವಸ್ತುಗಳೂ ಪತ್ತೆಯಾಗುತ್ತಿವೆ.

Shantha Kumari