ಮುಂಬೈ ದಾಳಿ ರೂವಾರಿ ಜಾಗತಿಕ ಉಗ್ರನೆಂದು ಘೋಷಣೆ – ಭಾರತಕ್ಕೆ ದೊಡ್ಡ ಯಶಸ್ಸು, ಚೀನಾಗೆ ತೀವ್ರ ಮುಖಭಂಗ
ವಾಷಿಂಗ್ಟನ್: ಮುಂಬೈ ದಾಳಿಯ ರೂವಾರಿಗಳಲ್ಲಿ ಒಬ್ಬನಾಗಿದ್ದ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಉಗ್ರ ಎಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಘೋಷಿಸಿದೆ. ಇದರೊಂದಿಗೆ ಮಕ್ಕಿಯನ್ನು ಜಾಗತಿಕ ಉಗ್ರನೆಂದು ಘೋಷಿಸುವ ಭಾರತದ ಪ್ರಯತ್ನಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ.
ಲಷ್ಕರ್ ಎ ತೊಯ್ಬಾ ಸಂಘಟನೆಯ ನಾಯಕನಾಗಿದ್ದ ಮಕ್ಕಿ, ಪಾಕಿಸ್ತಾನ ಮೂಲದ ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಇದೇ ಕಾರಣಕ್ಕೆ ಭಾರತ 2020 ರಲ್ಲಿ, ಮಕ್ಕಿಯನ್ನು ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಬೇಕೆಂದು ಪ್ರಸ್ತಾಪ ಮಾಡಿತ್ತು. ಇದಕ್ಕೆ ಚೀನಾ ಇದಕ್ಕೆ ಅಡ್ಡಗಾಲು ಹಾಕಿತ್ತು. 2022 ರ ಜೂನ್ ನಲ್ಲಿ ಈ ಸಂಬಂಧ ಚೀನಾವನ್ನು ಭಾರತ ತರಾಟೆಗೆ ತೆಗೆದುಕೊಂಡಿತ್ತು. ಇದೇ ವಿಚಾರವನ್ನು ಇಟ್ಟುಕೊಂಡು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಮಕ್ಕಿಯನ್ನು ʼಜಾಗತಿಕ ಭಯೋತ್ಪಾದಕʼ ಪಟ್ಟಿಗೆ ಸೇರಿಸಿದೆ.
ಇದನ್ನೂ ಓದಿ: “ಮೋದಿ ಭಾರತದಲ್ಲಿ ಪ್ರತಿದಿನ 115 ಮಂದಿ ಕಾರ್ಮಿಕರು ಆತ್ಮಹತ್ಯೆ” – ಮಲ್ಲಿಕಾರ್ಜುನ ಖರ್ಗೆ ಕಿಡಿ
16 ಜನವರಿ 2023 ರಂದು, ಭದ್ರತಾ ಮಂಡಳಿಯ ಸಮಿತಿಯು 1267 (1999), 1989 (2011) ಮತ್ತು 2253 (2015) ISIL (ದಯೆಶ್), ಅಲ್-ಖೈದಾ ಮತ್ತು ಸಂಬಂಧಿತ ವ್ಯಕ್ತಿಗಳು, ಗುಂಪುಗಳು, ಉದ್ಯಮಗಳು ಮತ್ತು ಘಟಕಗಳಿಗೆ ಸಂಬಂಧಿಸಿದಂತೆ ನಿರ್ಣಯಗಳನ್ನು ಅನುಮೋದಿಸಿತು. ಈ ನಿರ್ಣಯದಲ್ಲಿ ವ್ಯಕ್ತಿಯ ಸ್ವತ್ತುಗಳ ಮುಟ್ಟಗೋಲು, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಸೂಚಿಸಲಾಗಿದೆ ಎಂದು ಭದ್ರತಾ ಮಂಡಳಿ ಹೇಳಿದೆ.
ಅಬ್ದುಲ್ ರೆಹಮಾನ್ ಮಕ್ಕಿ ಮೋಸ್ಟ್ ವಾಂಟೆಡ್ ಉಗ್ರ. ಈತ ಹಿಂಸಾಚಾರಕ್ಕೆ ಮುಸ್ಲಿಂ ಯುವಕರನ್ನ ಪ್ರೇರೇಪಿಸುವುದು, ಹಣ ಸಹಾಯ ಮಾಡುವುದು, ಜಮ್ಮು- ಕಾಶ್ಮೀರದಲ್ಲಿ ಉಗ್ರ ದಾಳಿಗಳನ್ನು ಸಂಘಟಿಸುವುದರಲ್ಲಿ ನಿರತನಾಗಿದ್ದಾನೆ. ಲಷ್ಕರ್ ಎ ತೊಯ್ಬಾ ಸಂಘಟನೆಯಲ್ಲೂ ಹಲವು ಸ್ಥಾನಗಳನ್ನ ನಿಭಾಯಿಸಿದ್ದಾನೆ.
ಅಮೆರಿಕ ಭದ್ರತಾ ಇಲಾಖೆ ಪ್ರಕಾರ, 2020ರಲ್ಲಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ವಿಶೇಷ ನ್ಯಾಯಾಲಯ ಈತನಿಗೆ ಶಿಕ್ಷೆ ವಿಧಿಸಿದ್ದು, ಜೈಲಿನಲ್ಲಿದ್ದಾನೆ. ಮಕ್ಕಿ, ತನ್ನ ಭಾವ ಹಫೀಜ್ ಸಯೀದ್ ಜತೆ ಸೇರಿಕೊಂಡು ಮುಂಬಯಿ ಮೇಲಿನ ದಾಳಿ (26/11)ಗಳನ್ನು ಈತ ರೂಪಿಸಿದ್ದ.