ಕೇರಳ ಆಯ್ತು.. ಈಗ ಕರ್ನಾಟಕದಲ್ಲೂ ವೈರಲ್‌ ವಿಡಿಯೋಗೆ ವ್ಯಕ್ತಿ ಬಲಿ! – ಅಂಕೋಲದ ವೈದ್ಯ ದುರಂತ ಅಂತ್ಯ!

ಕೇರಳ ಆಯ್ತು.. ಈಗ ಕರ್ನಾಟಕದಲ್ಲೂ ವೈರಲ್‌ ವಿಡಿಯೋಗೆ ವ್ಯಕ್ತಿ ಬಲಿ! – ಅಂಕೋಲದ ವೈದ್ಯ ದುರಂತ ಅಂತ್ಯ!

ಇದು ಸೋಶಿಯಲ್‌ ಮೀಡಿಯಾದ ಯುಗ. ವೀವ್ಸ್‌, ಲೈಕ್ಸ್‌ಗಾಗಿ ಕಂಡಿದ್ದು, ನೋಡಿದ್ದನ್ನೆಲ್ಲಾ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡ್ತಾರೆ. ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಒಂದು ವಿಡಿಯೋದಿಂದ ಕೇರಳದಲ್ಲಿ ಒಬ್ಬ ವ್ಯಕ್ತಿ ಮನನೊಂದು ನೇಣಿಗೆ ಶರಣಾಗಿದ್ದರು. ಮಹಿಳೆಯೊಬ್ಬರು ಬಸ್‌ನಲ್ಲಿ ಮಾಡಿದ್ದ ಒಂದು ವಿಡಿಯೋದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಕರ್ನಾಟಕದಲ್ಲೂ ಅಂತಹದ್ದೇ ಒಂದು ದುರಂತ ನಡೆದಿದೆ. ಇದೀಗ ವೈರಲ್‌ ವಿಡಿಯೋದಿಂದ ವೈದ್ಯರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:  KSRTC ಬಸ್‌ ಪ್ರಯಾಣಿಕರಿಗೆ ಬಿಗ್‌ಶಾಕ್!‌ – ಮಂಗಳೂರು-ಕಾಸರಗೋಡು ಪ್ರಯಾಣ ಬಲು ದುಬಾರಿ!

ಅಷ್ಟಕ್ಕೂ ಆಗಿದ್ದೇನು?

ಈ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಅಂಕೋಲಾ ತಾಲೂಕಿನ ಅವರ್ಸಾದ ನಿವಾಸಿ ರಾಜು ಪಿಕಳೆ ಅವರು ಕಾರವಾರದ ಪಿಕಳೆ ನರ್ಸಿಂಗ್ ಹೋಂನ ಔಷಧಿ ವಿತರಣಾ ವಿಭಾಗದಲ್ಲಿ ಹಲವು ವರ್ಷಗಳಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. ಆದರೆ, ಸುಮಾರು 15 ದಿನಗಳ ಹಿಂದೆ ಅಪರಿಚಿತ ರೋಗಿಯ ಸಂಬಂಧಿಯೊಬ್ಬರು ರಾಜು ಪಿಕಳೆ ಅವರು ಅವಧಿ ಮೀರಿದ ಮಾತ್ರೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ, ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ನಂತರ ರಾಜು ಪಿಕಳೆ ಅವರು ತೀವ್ರವಾಗಿ ನೊಂದಿದ್ದರು. ಇದು ಕೇವಲ ಕಣ್ತಪ್ಪಿನಿಂದ ಆದ ಪ್ರಮಾದ ಎಂದು ಅವರು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದರು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಟೀಕೆಗಳು ಮತ್ತು ತೇಜೋವಧೆಯಿಂದ, ಕಳೆದ ಎರಡು ವಾರಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗ್ತಿದೆ ಇದೀಗ ರಾಜು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಅಂಗಳದ ತುಳಸಿಕಟ್ಟೆಯ ಮುಂಭಾಗವೇ ರಾಜು ಪಿಕಳೆ ಅವರು ಡಬಲ್ ಬ್ಯಾರಲ್ ಗನ್‌ನಿಂದ ಶೂಟ್ ಮಾಡಿಕೊಂಡು ಬದುಕನ್ನು ಕೊನೆಗೊಳಿಸಿಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿ ಅಕ್ಕಪಕ್ಕದವರು ಧಾವಿಸಿ ಬರುವಷ್ಟರಲ್ಲೇ ಕೊನೆಯುಸಿರೆಳೆದಿದ್ದರು. ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿದ್ದ ವ್ಯಕ್ತಿ, ಕೇವಲ ಒಂದು ವಿಡಿಯೋ ವೈರಲ್ ಆದ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದು ಜಿಲ್ಲೆಯಾದ್ಯಂತ ವಿಷಾದ ಮೂಡಿಸಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಡಬಲ್ ಬ್ಯಾರಲ್ ಗನ್ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Shwetha M