ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟರೂ ಸಹಾಯಕ್ಕೆ ಬಾರದ ಜನ! – ಶ*ವದ ಪಕ್ಕ ಬಿದ್ದಿದ್ದ ಈರುಳ್ಳಿ ಹೊತ್ತೊಯ್ದ ಸ್ಥಳೀಯರು!  

ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟರೂ ಸಹಾಯಕ್ಕೆ ಬಾರದ ಜನ! – ಶ*ವದ ಪಕ್ಕ ಬಿದ್ದಿದ್ದ ಈರುಳ್ಳಿ ಹೊತ್ತೊಯ್ದ ಸ್ಥಳೀಯರು!  

ಕ್ಯಾಂಟರ್ ಲಾರಿ, ಆಟೋ ಹಾಗೂ ಎರಡು ಬೈಕ್‌ಗಳ ಭೀಕರ ಅಪಘಾತ ಸಂಭವಿಸಿದ್ದು ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಎಂಬಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಮತ್ತೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಇದನ್ನೂ ಓದಿ: ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ! – 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ನಿಗುಡ್‌ಬೈ!

ಬುಧವಾರ ಬೆಳಗ್ಗೆ ಸೊಲ್ಲಾಪುರದಿಂದ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ಲಾರಿ, ಆಟೋ ಹಾಗೂ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ಹಿಂದೆ ಬರುತ್ತಿದ್ದ ಕ್ಯಾಂಟರ್ ಲಾರಿಗೆ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಲಾರಿ ಮೊದಲು ಆಟೋಗೆ ಡಿಕ್ಕಿ ಹೊಡೆದು, ಬಳಿಕ ಎದುರಿಗೆ ಬರುತ್ತಿದ್ದ ಬೈಕ್‌ಗಳ ಮೇಲೆ ಬಿದ್ದಿದೆ. ಲಾರಿ ಬೈಕ್ ಮೇಲೆ ಉರುಳಿದ ಪರಿಣಾಮ ಒಬ್ಬ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ದೃಶ್ಯ ಅತ್ಯಂತ ಭೀಕರವಾಗಿದ್ದು, ರಸ್ತೆ ಮೇಲೆ ಈರುಳ್ಳಿ ಚೀಲಗಳು ಚೆಲ್ಲಾಪಿಲ್ಲಿಯಾಗಿವೆ.

ಇನ್ನು ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದರೂ ಸಹ ಜನ ಮಾನವೀಯತೆ ಮರೆತಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಸ್ಥಳದಲ್ಲೇ ಬಿಟ್ಟು ರಸ್ತೆ ಮೇಲೆ ಬಿದ್ದಿದ್ದ ಈರುಳ್ಳಿಯನ್ನು ಹೊತ್ತುಕೊಂಡು ಹೋಗಲು ಜನರು ಮುಗಿಬಿದ್ದಾರೆ. ಜನರು ಈರುಳ್ಳಿಗಾಗಿ ಮುಗಿಬಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ. ಮಾನವೀಯತೆ ಮರೆತ ಈ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಹಾಗೂ ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.

Shwetha M