ಬಾಯ್ಕಾಟ್ ಬೆಂಕಿಗೆ ಬಿದ್ದ ಬಾಂಗ್ಲಾ – ICC ಅಧಿಕಾರಿಗಳಿಗೂ ಸಿಗ್ಲಿಲ್ಲ ವೀಸಾ
T-20 ವಿಶ್ವಕಪ್ ಕಗ್ಗಂಟು ಹೆಚ್ಚಾಯ್ತಾ?

ಬಾಯ್ಕಾಟ್ ಬೆಂಕಿಗೆ ಬಿದ್ದ ಬಾಂಗ್ಲಾ – ICC ಅಧಿಕಾರಿಗಳಿಗೂ ಸಿಗ್ಲಿಲ್ಲ ವೀಸಾT-20 ವಿಶ್ವಕಪ್ ಕಗ್ಗಂಟು ಹೆಚ್ಚಾಯ್ತಾ?

ಟಿ-20 ವಿಶ್ವಕಪ್​ಗಾಗಿ ನಾವು ಪಂದ್ಯಗಳನ್ನ ಆಡಲು ಭಾರತಕ್ಕೆ ಬರಲ್ಲ ಅಂತಾ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹೇಳಿತ್ತು. ಈ ವಿಚಾರವಾಗಿ ಈಗ್ಲೂ ಐಸಿಸಿ ಮತ್ತು ಬಿಸಿಬಿ ನಡುವೆ ಒಂದಷ್ಟು ತಿಕ್ಕಾಟಗಳು ನಡೀತಿದೆ. ಇದುವೆರೆಗೆ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಆದ್ರೆ ಬಾಂಗ್ಲಾದೇಶದೊಳಗಿನ ಕ್ರಿಕೆಟ್​ನಲ್ಲೇ ಕೋಲಾಹಲವೇ ಎದ್ದಿದೆ. ಭಾರತಕ್ಕೆ ಬರೋದು ಬಿಡೋದು ಇರ್ಲಿ ಬಾಂಗ್ಲಾ ಪ್ರೀಮಿಯರ್ ಲೀಗ್​ನಲ್ಲೇ ಬಾಯ್ಕಾಟ್ ಬೆಂಕಿ ಬಿದ್ದಿದೆ. ಐಸಿಸಿ ನಿಯೋಗ ಬಾಂಗ್ಲಾಗೆ ವಿಸಿಟ್ ಕೊಡ್ತಿದೆ.

ಇದನ್ನೂ ಓದಿ : ಟಗರುಪುಟ್ಟಿ ಡಿಚ್ಚಿಗೆ ಗುಜರಾತ್ ಪಲ್ಟಿ – RCB ಸಿಂಹಿಣಿಯರ Hat-Trick ಗರ್ಜನೆ

ಫೆಬ್ರವರಿ 7ರಿಂದ ಟಿ-20 ವಿಶ್ವಕಪ್​ಗಳು ಆರಂಭ ಆಗುತ್ತೆ. 20 ತಂಡಗಳ ನಡುವಿನ ಹೈವೋಲ್ಟೇಜ್ ಫೈಟ್​ನಲ್ಲಿ ಮಾರ್ಚ್ 8ರಂದು ಈ ವರ್ಷದ ಐಸಿಸಿ ಟೂರ್ನಿ ವಿನ್ನರ್ ಯಾರು ಅನ್ನೋದು ಗೊತ್ತಾಗುತ್ತೆ. ಭಾರತ ಮತ್ತು ಶ್ರೀಲಂಕಾ ಆಯೋಜನೆಯಲ್ಲಿ ಟೂರ್ನಿ ನಡೆಯಲಿದೆ. ಆದ್ರೆ ಐಪಿಎಲ್​ನಿಂದ ಬಾಂಗ್ಲಾ ಆಟಗಾರರನ್ನ ಹೊರ ಹಾಕಿದ್ದಕ್ಕೆ ಸಿಟ್ಟಿಗೆದ್ದ ಬಾಂಗ್ಲಾ ನಾವು ಟಿ-20 ವಿಶ್ವಕಪ್ ಆಡೋಕೆ ಭಾರತಕ್ಕೆ ಕಾಲಿಡಲ್ಲ. ನಮಗೆ ಸೇಫ್ಟಿ ಟೆನ್ಷನ್ ಇದೆ. ನಮ್ಮ ಪಂದ್ಯಗಳನ್ನ ಲಂಕಾಗೆ ಶಿಫ್ಟ್ ಮಾಡಿ ಅಂದಿದ್ರು. ಇದಕ್ಕೆ ಪಾಕ್ ಕೂಡ ಸಪೋರ್ಟ್ ಮಾಡಿತ್ತು. ಆದ್ರೆ ಬಾಂಗ್ಲಾ ಎರಡೆರಡು ಸಲ ಪತ್ರ ಬರೆದ್ರೂ ಐಸಿಸಿ ಕ್ಯಾರೇ ಎಂದಿಲ್ಲ. ಸೋ ಇಷ್ಟಕ್ಕೆ ಸುಮ್ಮನಾಗಿ ಭಾರತದಲ್ಲಿ ಪಂದ್ಯಗಳನ್ನ ಆಡಿದ್ರೆ ಮುಗ್ದೋಗ್ತಿತ್ತು. ಆದ್ರೆ ಬಿಸಿಬಿ ಹಣಕಾಸು ಅಧ್ಯಕ್ಷ ನಾಲಗೆ ಹರಿಬಿಟ್ಟಿದ್ದು ಬಾಂಗ್ಲಾ ಕ್ರಿಕೆಟ್​ನಲ್ಲಿ ಕಿಚ್ಚು ಹೊತ್ತಿಸಿದೆ.

ಟಿ-20 ವಿಶ್ವಕಪ್ ಆಡದಿದ್ರೆ ನಮಗೇನು ನಷ್ಟ ಇಲ್ಲ ಎಂದಿದ್ದ ನಜ್ಮುಲ್!

ಮುಸ್ತಾಫಿಜುರ್‌ ರೆಹಮಾನ್​ರನ್ನ ಐಪಿಎಲ್‌ನಿಂದ ಹೊರಗಿಟ್ಟಿದ್ದಕ್ಕೆ ಬಾಂಗ್ಲಾ ತಂಡ ಭಾರತದಲ್ಲಿ ಟಿ20 ವಿಶ್ವಕಪ್‌ ಆಡಲ್ಲ ಅಂತಿದ್ದಾರೆ. ಈ ಬಗ್ಗೆ ಮಾತನಾಡಿದ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಹಸನ್ ಬಾಂಗ್ಲಾ ಆಟಗಾರರ ಬಗ್ಗೆ ಕೇವಲವಾಗಿ ಮಾತನಾಡಿದ್ರು. ಬಾಂಗ್ಲಾ ಕ್ರಿಕೆಟಿಗರು ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. ಟಿ20 ವಿಶ್ವಕಪ್‌ನಿಂದ ಬಾಂಗ್ಲಾ ಹಿಂದಕ್ಕೆ ಸರಿದರೆ ಅದರಿಂದ ಮಂಡಳಿಗೆ ನಷ್ಟವಿಲ್ಲ. ಆದರೆ ಆಟಗಾರರಿಗೆ ಸಂಭಾವನೆ ಸಿಗುವುದಿಲ್ಲ ಎಂದಿದ್ದರು. ಅಲ್ಲದೆ, ಮಾಜಿ ಕ್ರಿಕೆಟಿಗ ತಮೀಮ್‌ ಇಕ್ಬಾಲ್‌ರನ್ನು ಭಾರತದ ಏಜೆಂಟ್‌ ಎಂದು ಕರೆದಿದ್ದರು. ಇದು ಆಟಗಾರರನ್ನು ಕೆರಳಿಸಿತ್ತು.

ಆಟಗಾರರ ಪರ ನಿಂತವರಿಗೆ ಜೀವ ಬೆದರಿಕೆ!

ಇನ್ನು ಬಾಂಗ್ಲಾದೇಶ ಕ್ರಿಕೆಟಿಗರ ಪರ ನಿಂತಿದ್ದ ಕಲ್ಯಾಣ ಸಂಘ ಅಧ್ಯಕ್ಷ ಮೊಹಮ್ಮದ್ ಮಿಥುನ್​ಗೆ ಈಗ ಜೀವಭಯ ಸೃಷ್ಟಿಯಾಗಿದೆ. ಬಿಸಿಬಿಯ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಇಸ್ಲಾಂ ಅವರ ರಾಜೀನಾಮೆಗೆ ಮಿಥುನ್ ಆಗ್ರಹಿಸಿದ್ದರು. ಬಾಂಗ್ಲಾದೇಶ್ ಕ್ರಿಕೆಟಿಗರ ಕಲ್ಯಾಣ ಸಂಘವು ಬಿಸಿಬಿಯ ಹಣಕಾಸು ಸಮಿತಿಯ ಅಧ್ಯಕ್ಷ ಸ್ಥಾನದಿಂದ ನಜ್ಮುಲ್ ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿತ್ತು. ಇಲ್ಲದೇ ಇದ್ರೆ ಬಾಂಗ್ಲಾ ಪ್ರೀಮಿಯರ್ ಲೀಗ್​ನಲ್ಲಿ ಯಾವ ಆಟಗಾರರು ಆಡೋದಿಲ್ಲ ಅಂದಿದ್ರು. ಅದ್ರಂತೆ ಗುರುವಾರ ನಡೆಯಬೇಕಿದ್ದ ಪಂದ್ಯಗಳಿಂದ ಬಾಂಗ್ಲಾದೇಶದ ಆಟಗಾರರು ಹಿಂದೆ ಸರಿದಿದ್ದರು. ಹೀಗಾಗಿ 2 ಪಂದ್ಯಗಳು ರದ್ದಾಗಿದ್ದವು. ಗುರುವಾರದ 2 ಪಂದ್ಯಗಳು ಮುಂದೂಡಿಕೆಯಾಗಿದ್ದರಿಂದ ಅಭಿಮಾನಿಗಳು ಕ್ರೀಡಾಂಗಣದ ಹೊರಗಡೆ ದಾಂಧಲೆ ನಡೆಸಿದರು. ಫ್ಲೆಕ್ಸ್‌ಗಳನ್ನು ಹರಿದು, ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು, ಜೈಕಾರ ಕೂಗಿ ಆಕ್ರೊಶ ವ್ಯಕ್ತಪಡಿಸಿದರು. ಕೆಲವು ಕಡೆಗಳನ್ನು ರಸ್ತೆ ತಡೆ ಕೂಡಾ ನಡೆಸಿದರು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಸಿಬಿ, ನಜ್ಮುಲ್‌ರನ್ನು ಹಣಕಾಸು ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ. ಆ ನಂತ್ರ ಮತ್ತೆ ಬಾಂಗ್ಲಾ ಪ್ರೀಮಿಯರ್ ಲೀಗ್​ನ ಪಂದ್ಯಗಳು ಸ್ಟಾರ್ಟ್ ಆಗಿವೆ. ಇಷ್ಟೆಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮೊಹಮ್ಮದ್ ಮಿಥುನ್​ ಗೆ ಜೀವಬೆದರಿಕೆ ಫೋನ್ ಕಾಲ್ಸ್ ಬರ್ತಿದೆ ಅಂತಾ ಆರೋಪಿಸಿದ್ದಾರೆ. ನಾನು ದೇಶದ ವಿರುದ್ಧ ಮಾತನಾಡಿಲ್ಲ. ಕ್ರಿಕೆಟ್ ಮತ್ತು ಆಟಗಾರರ ಹಿತಾಸಕ್ತಿಗಾಗಿ ಮಾತನಾಡಿದ್ದೇನೆ. ಒಂದು ಸಂಸ್ಥೆಯ ಅಧ್ಯಕ್ಷನಾಗಿದ್ದು ಆಟಗಾರರ ಪರ ಮಾತಾಡಿದ್ರೆ ಅದ್ರಲ್ಲಿ ತಪ್ಪೇನಿದೆ ಎಂದಿದ್ದಾರೆ. ಇದೆಲ್ಲದ್ರ ನಡುವೆ ಹೊಸ ಸಮಸ್ಯೆ ಶುರುವಾಗಿದೆ.

ಬಾಂಗ್ಲಾ ಭೇಟಿಗೆ ಸಿದ್ಧವಾಗಿದ್ದ ಐಸಿಸಿ ಅಧಿಕಾರಿಗಳಿಗೆ ವೀಸಾ ಸಮಸ್ಯೆ!

ಇನ್ನು ಇದೆಲ್ಲದ್ರ ನಡುವೆ ಟಿ-20 ವಿಶ್ವಕಪ್​ಗಾಗಿ ಭಾರತದಲ್ಲಿ ಆಡುವಂತೆ ಹಾಗೇ ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಐಸಿಸಿ ನಿಯೋಗ ಇವತ್ತು ಬಾಂಗ್ಲಾಗೆ ವಿಸಿಟ್ ಕೊಡೋಕೆ ರೆಡಿಯಾಗಿತ್ತು. ಆದ್ರೆ ಬಾಂಗ್ಲಾಗೆ ತೆರಳಲು ಭಾರತೀಯ ಮೂಲಕ ಅಧಿಕಾರಿಗಳಿಗೆ ವೀಸಾ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಐಸಿಸಿಯ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ವಿಭಾಗದ ಮುಖ್ಯಸ್ಥ ಆಂಡ್ರ್ಯೂ ಎಫ್‌ಗ್ರೇವ್, ಬಿಕ್ಕಟ್ಟನ್ನು ಪರಿಹರಿಸಲು ಜನವರಿ 17 ರಂದು ಢಾಕಾಗೆ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದಾರೆ. ಆದ್ರೆ ಈಗಿನ ಡವಲಪ್​ಮೆಂಟ್​ಗಳನ್ನ ನೋಡಿದ್ರೆ ಈ ಸಮಸ್ಯೆ ಮತ್ತಷ್ಟು ಜಟಿಲವಾಗೋದ್ರಲ್ಲಿ ಅನುಮಾನವೇ ಇಲ್ಲ. ಒಂದ್ಕಡೆ ಟಿ20 ವಿಶ್ವಕಪ್‌ನಲ್ಲಿ ತನ್ನ ಪಂದ್ಯಗಳನ್ನು ಭಾರತದಲ್ಲಿ ಆಡುವುದಿಲ್ಲ ಅನ್ನೋದು ಬಾಂಗ್ಲಾ ವಾದ. ಇನ್ನೊಂದ್ಕಡೆ ಭಾರತದಲ್ಲಿ ಯಾವುದೇ ಭದ್ರತಾ ಸಮಸ್ಯೆಗಳಿಲ್ಲ ಹಾಗೇ ಈಗ ಪಂದ್ಯಗಳನ್ನ ಶಿಫ್ಟ್ ಮಾಡೋದು ಕಷ್ಟ ಭಾರತದ್ಲಲೇ ಪಂದ್ಯಗಳನ್ನ ಆಡಿ ಅನ್ನೋದು ಐಸಿಸಿ ವಾದ. ಇದೆಲ್ಲದ್ರ ನಡುವೆ ಬಾಂಗ್ಲಾದೇಶದಲ್ಲೇ ಆಂತರಿಕ ಕಚ್ಚಾಟ ಬೇರೆ.

Shantha Kumari