WPL ಇತಿಹಾಸದಲ್ಲಿ RCBಗೆ ಹ್ಯಾಟ್ರಿಕ್ ಗೆಲುವು – ಗುಜರಾತ್ ಜೈಂಟ್ಸ್ ವಿರುದ್ಧ 32 ರನ್ಗಳ ಭರ್ಜರಿ

ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಗುಜರಾತ್ ಜೈಂಟ್ಸ್ ವಿರುದ್ಧ 32 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆರ್ಸಿಬಿ ತಂಡ WPL ಇತಿಹಾಸದಲ್ಲಿ ಮೊದಲ ಮೂರು ಪಂದ್ಯಗಳನ್ನು ಗೆದ್ದ ದಾಖಲೆಯನ್ನು ನಿರ್ಮಿಸಿದೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲೇ ನಡೆಯುತ್ತೆ 2026ರ ಐಪಿಎಲ್ ಪಂದ್ಯಗಳು – ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಫ್ರಾಂಚೈಸಿ
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ 9ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಆರ್ಸಿಬಿ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 183 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಪೆಟ್ಟು ಕೊಟ್ಟಿದ್ದು ಕನ್ನಡಿಗರ ಹೆಮ್ಮೆಯ ಆಟಗಾರ್ತಿ ಟಗರು ಪುಟ್ಟಿ ಶ್ರೇಯಾಂಕ ಪಾಟೀಲ್ . ಟಗರು ಪುಟ್ಟಿಯ ಮಾರಕ ದಾಳಿಗೆ ಗುಜರಾತ್ ಬಳಲಿ ಬೆಂಡಾಯ್ತು. ಈ ಅವಧಿಯಲ್ಲಿ ಶ್ರೇಯಾಂಕಾ ಪಾಟೀಲ್ ಅದ್ಭುತ ಬೌಲಿಂಗ್ ಮಾಡಿದರು. ಅವರು 3.5 ಓವರ್ಗಳಲ್ಲಿ ಕೇವಲ 23 ರನ್ಗಳನ್ನು ಬಿಟ್ಟುಕೊಟ್ಟು 5 ವಿಕೆಟ್ಗಳನ್ನು ಪಡೆದರು. ಪರಿಣಾಮವಾಗಿ, ಗುಜರಾತ್ 18.5 ಓವರ್ಗಳಲ್ಲಿ 150 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಇತ್ತ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ಕಳಪೆ ಆರಂಭವನ್ನೇ ಪಡೆಯಿತು. ಪವರ್ಪ್ಲೇನಲ್ಲಿ, ಆರ್ಸಿಬಿ ಕೇವಲ 45 ರನ್ಗಳಿಗೆ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ನಂತರ ರಾಧಾ ಯಾದವ್ ಮತ್ತು ರಿಚಾ ಘೋಷ್ ಐದನೇ ವಿಕೆಟ್ಗೆ ಅದ್ಭುತ ಪಾಲುದಾರಿಕೆಯನ್ನು ನಿರ್ಮಿಸಿದರು. ರಾಧಾ ಯಾದವ್ 47 ಎಸೆತಗಳಲ್ಲಿ 66 ರನ್ ಗಳಿಸಿದರೆ, ರಿಚಾ ಘೋಷ್ 28 ಎಸೆತಗಳಲ್ಲಿ 44 ರನ್ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಇಬ್ಬರು ಆಟಗಾರ್ತಿಯರು 66 ಎಸೆತಗಳಲ್ಲಿ ಐದನೇ ವಿಕೆಟ್ಗೆ 105 ರನ್ ಸೇರಿಸಿದರು. ನಂತರ ನಾಡಿನ್ ಡಿ ಕ್ಲರ್ಕ್ 12 ಎಸೆತಗಳಲ್ಲಿ 26 ರನ್ ಗಳಿಸಿದರು. ಈ ಮೂವರ ಆಟಗದಿಂದಾಗಿ ತಂಡದ ಸ್ಕೋರ್ 20 ಓವರ್ಗಳಲ್ಲಿ ಏಳು ವಿಕೆಟ್ಗಳಿಗೆ 182 ರನ್ಗಳಿಗೆ ತಲುಪಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಜೈಂಟ್ಸ್ ತಂಡವು ಟಗರು ಪುಟ್ಟಿಯ ದಾಳಿಗೆ ಸೋತು ಶರಣಾಯ್ತು.

ನೋಡಿರಿ

