ಬುದ್ಧಿಕಲಿಯದ ಪಾಕ್ – ಭಾರತದ ಗಡಿಯೊಳಗೆ ಡ್ರೋನ್ ಬಿಟ್ಟ ಶತ್ರುದೇಶ

ಬುದ್ಧಿಕಲಿಯದ ಪಾಕ್ – ಭಾರತದ ಗಡಿಯೊಳಗೆ  ಡ್ರೋನ್ ಬಿಟ್ಟ ಶತ್ರುದೇಶ

 ಪಾಪಿ ಪಾಕ್‌ ತನ್ನ ನರಿ ಬುದ್ಧಿಯನ್ನ ಬಿಡುವಂತೆ ಕಾಣುತ್ತಿಲ್ಲ.  ಆಪರೇಷನ್ ಸಿಂಧೂರ್‌ ನಿಂದ ಭಾರೀ ಹೊಡೆತ ಅನುಭವಿಸಿದ್ದರೂ ಪಾಕಿಸ್ತಾನ  ಮಾತ್ರ ಬುದ್ದಿ ಕಲಿತಿಲ್ಲ. ಮತ್ತೆ ಡ್ರೋನ್  ಹಾರಾಟ ನಡೆಸುವ ಮೂಲಕ ಪ್ರಚೋದನೆ ಆರಂಭಿಸಿದೆ. ಜನವರಿ 9ರಿಂದ ಜಮ್ಮು ಮತ್ತು ಕಾಶ್ಮೀರದ ಗಡಿಭಾಗಗಳಲ್ಲಿ ಹಲವು ಪಾಕಿಸ್ತಾನಿ ಡ್ರೋನ್‌ಗಳು ಕಾಣಿಸಿಕೊಂಡಿದ್ದು, ಈ ಅಕ್ರಮ ಪ್ರವೇಶಗಳನ್ನು ತಕ್ಷಣ ನಿಲ್ಲಿಸುವಂತೆ ಭಾರತ ಪಾಕ್‌ಗೆ ಎಚ್ಚರಿಕೆ ನೀಡಿದೆ. ಆದರೂ ಗುರುವಾರ ರಾತ್ರಿ ಮತ್ತೆ ಪಾಪಿ ಪಾಕಿಸ್ತಾನದ ಡ್ರೋನ್‌ಗಳು ಕಾಣಿಸಿಕೊಂಡಿವೆ.

ಪಾಕ್ ಈಗ ಕಳುಹಿಸುತ್ತಿರುವ ಡ್ರೋನ್‌ಗಳು ಕಳೆದ ವರ್ಷದ ಮೇ ತಿಂಗಳಲ್ಲಿ ನಡೆದ ಸಂಘರ್ಷದ ವೇಳೆ ಬಳಸಿದ್ದ ಆತ್ಮಹತ್ಯಾ ಡ್ರೋನ್‌ಗಳಲ್ಲ. ಆತ್ಮಹತ್ಯಾ ಡ್ರೋನ್‌ಗಳು ಗುರಿಯನ್ನು ಹುಡುಕಿ, ಅದರ ಮೇಲೆ ನೇರ ದಾಳಿ ನಡೆಸುವಂತೆ ವಿನ್ಯಾಸಗೊಳಿಸಲಾದ ಮಾನವರಹಿತ ವೈಮಾನಿಕ ವಾಹನಗಳಾಗಿವೆ. ಇತ್ತೀಚೆಗೆ ಕಂಡುಬಂದ ಡ್ರೋನ್‌ಗಳು ಹೆಚ್ಚಿನದಾಗಿ ಸಣ್ಣ ಗಾತ್ರದ, ಗುಪ್ತಚರ ನಿಗಾವಹಿಸುವ ಉದ್ದೇಶದ ಡ್ರೋನ್‌ಗಳಾಗಿದ್ದು, ಈ ವಿಷಯವನ್ನು ಸೇನಾ ದಿನಾಚರಣೆಯ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಸ್ಪಷ್ಟಪಡಿಸಿದ್ದಾರೆ. ಪಾಕ್‌ನ ಈ ಡ್ರೋನ್ ಚಟುವಟಿಕೆಗಳಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ತಕ್ಕ ಪ್ರತಿಕ್ರಿಯೆ ಇರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಜನರಲ್ ದ್ವಿವೇದಿ ತಿಳಿಸಿದ್ದಾರೆ.

ಇದನ್ನೂ ಓದಿ: ಕದ್ದ ವಾಚ್ ಧರಿಸಿ ವಾಟ್ಸಾಪ್ ಸ್ಟೇಟಸ್ – ಮಾಲೀಕನ ಕೈಗೆ ಸಿಕ್ಕಿಬಿದ್ದ ಕಿಲಾಡಿ ಕಳ್ಳಿ

ಜನವರಿ 26  ಗಣರಾಜ್ಯೋತ್ಸವ  ಸಮಯದಲ್ಲಿ ಭಾರತ ಏನಾದರೂ ಕ್ರಮ ಕೈಗೊಳ್ಳಬಹುದು ಎಂಬ ಭಯ ಪಾಕ್‌ಗೆ ಇದೆ. ಈ ಸಮಯದಲ್ಲಿ ಕಡಿಮೆ ಎತ್ತರದಲ್ಲಿ, ಲೈಟ್‌ಗಳನ್ನು ಆನ್ ಮಾಡಿಕೊಂಡು ಹಾರುವ ಸಣ್ಣ ಡ್ರೋನ್‌ಗಳನ್ನು ನಾವು ಕಂಡಿದ್ದೇವೆ,” ಎಂದು ದ್ವಿವೇದಿ ಹೇಳಿದರು.ಜನವರಿ 9ರಿಂದ ಅಂತಾರಾಷ್ಟ್ರೀಯ ಗಡಿ (IB) ಹಾಗೂ ನಿಯಂತ್ರಣ ರೇಖೆ (LoC)ಯ ವಿವಿಧ ವಲಯಗಳಲ್ಲಿ ಕನಿಷ್ಠ 10–12 ಡ್ರೋನ್‌ಗಳನ್ನು ಪಾಕಿಸ್ತಾನ ಕಳುಹಿಸಿದೆ. ಗುರುವಾರ ಪೂಂಚ್ ಮತ್ತು ಸಾಂಬಾ ಜಿಲ್ಲೆಯ ರಾಮಗಢ ವಲಯಗಳಲ್ಲಿ ಡ್ರೋನ್‌ಗಳು ಕಾಣಿಸಿಕೊಂಡಿದ್ದವು. ಇದಕ್ಕೂ ಮೊದಲು ನೌಶೆರಾ ಮತ್ತು ರಾಜೌರಿ ವಲಯಗಳಲ್ಲಿ ಡ್ರೋನ್ ಚಟುವಟಿಕೆ ಕಂಡುಬಂದಿದ್ದು, ಭದ್ರತಾ ಪಡೆಗಳು ಆಂಟಿ-ಯುಎಎಸ್ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿ ಗುಂಡಿನ ದಾಳಿ ನಡೆಸಿದ್ದವು.

ಜನವರಿ 9ರಂದು ಪಾಕ್‌ನಿಂದ ಬಂದ ಡ್ರೋನ್‌ವೊಂದು ಸಾಂಬಾ ಜಿಲ್ಲೆಯಲ್ಲಿ ಎರಡು ಪಿಸ್ತೂಲುಗಳು, ಮೂರು ಮ್ಯಾಗಜಿನ್‌ಗಳು, 16 ಗುಂಡುಗಳು ಮತ್ತು ಒಂದು ಗ್ರನೇಡ್ ಅನ್ನು ಬೀಳಿಸಿರಬಹುದು ಎಂದು ಶಂಕಿಸಲಾಗಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಹೆಚ್ಚಿದ ಭದ್ರತಾ ಪರಿಶೀಲನೆಯ ವೇಳೆ ಇವುಗಳನ್ನು ವಶಪಡಿಸಿಕೊಳ್ಳಲಾಯಿತು. ಸೋಮವಾರ ರಾತ್ರಿ ರಾಜಸ್ಥಾನದ ಜೈಸಲ್ಮೇರ್ ಮೇಲೆಯೂ ಶಂಕಿತ ಪಾಕಿಸ್ತಾನಿ ಡ್ರೋನ್ ಕಾಣಿಸಿತ್ತು.

Kishor KV