ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುತ್ತೀರಾ? – ಇನ್ಮುಂದೆ ಫೈನ್‌ ಮಾತ್ರವಲ್ಲ, FIR ದಾಖಲಾಗುತ್ತೆ!

ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುತ್ತೀರಾ? – ಇನ್ಮುಂದೆ ಫೈನ್‌ ಮಾತ್ರವಲ್ಲ, FIR ದಾಖಲಾಗುತ್ತೆ!

ಈಗೀಗ ಟಾಫಿಕ್‌ ರೂಲ್ಸ್‌ ಬೇಕ್‌ ಮಾಡುವವರೇ ಹೆಚ್ಚು. ಸರ್ಕಾರ ವಾಹನ ಸವಾರರ ಸುರಕ್ಷತೆಗೆ ಕಠಿಣ ರೂಲ್ಸ್‌ ತಂದ್ರೂ ಯಾರೂ ನಿಯಮ ಪಾಲಿಸುತ್ತಿಲ್ಲ. ರೂಲ್ಸ್‌ ಬ್ರೇಕ್‌ ಮಾಡಿ ದಂಡ ಕಟ್ಟಿದ್ರೆ ಆಯ್ತು ಅನ್ನುವ ಮನಸ್ಥಿತಿ ಈಗೀನ ಜನರದ್ದು. ಇದೀಗ ರೂಲ್ಸ್‌ ಬ್ರೇಕ್‌ ಮಾಡುವವರಿಗೆ ಟ್ರಾಫಿಕ್‌ ಪೊಲೀಸರು ಶಾಕ್‌ ಕೊಟ್ಟಿದ್ದಾರೆ. ಇನ್ಮುಂದೆ ರೂಲ್ಸ್‌ ಬ್ರೇಕ್‌ ಮಾಡಿದ್ರೆ, ದಂಡ ಮಾತ್ರವಲ್ಲ, ನಿಮ್ಮ ಮೇಲೆ ಕೇಸ್‌ ಕೂಡ ದಾಖಲಾಗುತ್ತೆ.

ಇದನ್ನೂ ಓದಿ:  ನಾನು ಒನ್‌ ಮ್ಯಾನ್‌ ಆರ್ಮಿ!‌ – ಧ್ರುವಂತ್‌ ಬಿಲ್ಡಪ್‌ ಭಾಷಣ.. ಇಷ್ಟೊಂದು ಹೈಪ್‌ ಯಾಕೆ?  

ಹಳ್ಳಿ ಮಾತ್ರವಲ್ಲ ಸಿಟಿಗಳಲ್ಲೂ ಜನ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುತ್ತಲೇ ಇದ್ದಾರೆ. ಸರ್ಕಾರ ಎಷ್ಟು ಎಚ್ಚರಿಕೆ ಕೊಟ್ಟರೂ ಜನ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದೀಗ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಬೆಂಗಳೂರಲ್ಲಿ ಪೊಲೀಸರು ಈಗಾಗಲೇ ಎಫ್​ಐಆರ್​​ ದಾಖಲಿಸಲು ಆರಂಭಿಸಿದ್ದಾರೆ. ಸಿಗ್ನಲ್ ಜಂಪ್ ಮಾಡುವುದು, ಏಕಮಾರ್ಗ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಹಾಗೂ ರಸ್ತೆಗಳ ಮೇಲೆ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಉಂಟುಮಾಡುವಂತಹ ಪ್ರಕರಣಗಳಿಗೆ ಸಂಬಂಧಿಸಿ ಆಯಾ ಪ್ರದೇಶಗಳ ವ್ಯಾಪ್ತಿಯ ಸಂಚಾರ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ.

ಈ ಬಗ್ಗೆ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅನೂಪ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಸಿಗ್ನಲ್ ಜಂಪ್ ಮಾಡುವುದು ಮತ್ತು ಏಕಮಾರ್ಗ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುವುದು ಬೆಂಗಳೂರಿನಲ್ಲಿ ಸಾಮಾನ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿರುವ ಕಾರಣ ಇಲಾಖೆ ಕಠಿಣ ಕ್ರಮ ಜಾರಿಗೆ ಮುಂದಾಗಿದೆ. ಪೊಲೀಸ್‌ ಅಂಕಿ ಅಂಶಗಳ ಪ್ರಕಾರ 2025ರ ಜನವರಿಯಿಂದ ನವೆಂಬರ್‌ವರೆಗೆ ಬೆಂಗಳೂರಿನಲ್ಲಿ 6,62,447 ಸಿಗ್ನಲ್ ಜಂಪಿಂಗ್ ಪ್ರಕರಣಗಳು ಹಾಗೂ 3,02,962 ನೋ-ಎಂಟ್ರಿ ಉಲ್ಲಂಘನೆಗಳು ದಾಖಲಾಗಿವೆ. ಏಕಮುಖ ರಸ್ತೆಯಲ್ಲಿನ ಸಂಚಾರ ಟ್ರಾಫಿಕ್​​ ಸಮಸ್ಯೆಗೆ ಕಾರಣವಾಗುವ ಜೊತೆಗೆ ಅಪಘಾತಗಳಿಗೂ ಎಡೆಮಾಡಿಕೊಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸೆಕ್ಷನ್‌ 285 (ಸಾರ್ವಜನಿಕ ಮಾರ್ಗದಲ್ಲಿ ಅಪಾಯ ಅಥವಾ ಅಡ್ಡಿ ಉಂಟುಮಾಡುವುದು) ಅಡಿಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದೇ ಸೆಕ್ಷನ್‌ ಅಡಿಯಲ್ಲಿ, ಬಸ್​​ ಹಾಗೂ ರೈಲು ನಿಲ್ದಾಣಗಳ ಬಳಿ ರಸ್ತೆ ಮೇಲೆ ವಾಹನಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುವ ಆಟೋರಿಕ್ಷಾ ಹಾಗೂ ಕಾರುಗಳ ಮೇಲೂ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಸಿಗ್ನಲ್ ಜಂಪಿಂಗ್ ಕೂಡ ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಬಿಎನ್‌ಎಸ್‌ನ ಸೆಕ್ಷನ್‌ 281 (ಸಾರ್ವಜನಿಕ ಮಾರ್ಗದಲ್ಲಿ ಅಜಾಗರೂಕ ಅಥವಾ ನಿರ್ಲಕ್ಷ್ಯ ಚಾಲನೆ) ಅಡಿಯಲ್ಲಿ ಕೇಸ್​​ ದಾಖಲಾಗಲಿದೆ. ಹಿಂದೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದವರು ಸ್ಥಳದಲ್ಲೇ ದಂಡ ಪಾವತಿಸಿ ಮತ್ತೆ ಅದೇ ತಪ್ಪು ಮಾಡುತ್ತಿದ್ದರು. ಆದರೆ ಈಗ ಎಫ್‌ಐಆರ್‌ ದಾಖಲಾದ ಬಳಿಕ ವಾಹನವನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ದಂಡ ಪಾವತಿಸಲು ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ. ಇದು ದೀರ್ಘ ಪ್ರಕ್ರಿಯೆಯಾಗಿರುವ ಕಾರಣ ಪರಿಣಾಮ ದೊಡ್ಡದಿರಲಿದೆ ಎಂದು ಹೇಳಿದ್ದಾರೆ.

Shwetha M