“ತನ್ನಷ್ಟಕ್ಕೇ ಮುಚ್ಚಿಕೊಳ್ಳುತ್ತಿದೆ ಓಝೋನ್ ರಂಧ್ರ” – ವಿಜ್ಞಾನಿಗಳಿಂದ ಮಾಹಿತಿ
ವಾಷಿಂಗ್ಟನ್: ಭೂಮಿಯಲ್ಲಿನ ಜೀವ ಸಂಕುಲಗಳ ಸಂರಕ್ಷಕ ಎಂದೇ ಕರೆಯಲ್ಪಡುವ ಓಝೋನ್ ಪದರದ ಬಗ್ಗೆ ವಿಜ್ಞಾನಿಗಳು ಶುಭ ಸುದ್ದಿಯೊಂದನ್ನು ನೀಡಿದ್ದು, ಅಂಟಾರ್ಕ್ಟಿಕಾ ವಲಯದ ಓಝೋನ್ ಪದರದಲ್ಲಿ ಉಂಟಾಗಿರುವ ರಂಧ್ರವು ತನ್ನಷ್ಟಕ್ಕೆ ತಾನೆ ಮುಚ್ಚಿಕೊಳ್ಳುತ್ತಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮನಿ ಕಂಟ್ರೋಲ್ ವೆಬ್‌ಸೈಟ್ ನಲ್ಲಿ ವರದಿ ಪ್ರಕಟಿಸಿದ್ದು, ಅಂಟಾರ್ಕ್ಟಿಕಾ ವಲಯದ ಓಝೋನ್ ಪದರದಲ್ಲಿ ಉಂಟಾಗಿರುವ ರಂಧ್ರವು ಪರಿಸರ ವಿಜ್ಞಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಓಝೋನ್ ಪದರದಲ್ಲಿನ ರಂಧ್ರ ತಾನಾಗಿಯೇ ಮುಚ್ಚಿಕೊಳ್ಳುತ್ತಿದೆ. ಮುಂದಿನ 43 ವರ್ಷಗಳಲ್ಲಿ ಈ ರಂಧ್ರವು ಸಂಪೂರ್ಣ ಮುಚ್ಚಿಕೊಳ್ಳಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: 50,000 ಬಳಿಕ ಭೂಮಿ ಸಮೀಪ ಬರಲಿದೆ ಅಪರೂಪದ ಧೂಮಕೇತು – ನೋಡಲು ಮಿಸ್ ಮಾಡಲೇಬೇಡಿ..!
ಮೂರು ಪರಮಾಣುಗಳ ಆಮ್ಲಜನಕದಿಂದ ರಚನೆಯಾಗಿರುವ ಈ ಓಝೋನ್ ಪದರವು ಸೂರ್ಯನಿಂದ ಹೊಮ್ಮುವ ಅಪಾಯಕಾರಿಯಾದ ಅತಿನೇರಳೆ ವಿಕಿರಣಗಳ ಬಹುಪಾಲನ್ನು ಹೀರಿಕೊಳ್ಳುತ್ತದೆ. ಒಂದು ವೇಳೆ ಓಜೋನ್‌ನ ಈ ಫಿಲ್ಟರ್ ಇರದೇ ಇದ್ದರೆ ಇಷ್ಟು ಹೊತ್ತಿಗೆ ಭೂಮಿಯ ಜೀವಿಗಳೆಲ್ಲಾ ನಾಶವಾಗಿರುತ್ತಿದ್ದವು. ಭೂಮಿಗೆ ಕವಚದಂತಿರುವ ಓಝೋನ್ ಪದರದಲ್ಲಿ ರಂಧ್ರ ಉಂಟಾಗಿತ್ತು. ಇದೀಗ, ಆ ರಂಧ್ರ ತನ್ನಷ್ಟಕ್ಕೆ ತಾನೆ ಮುಚ್ಚಿಕೊಳ್ಳುತ್ತದೆ. ಓಝೋನ್ ರಂಧ್ರವು 2066ರ ವೇಳೆಗೆ ಸಂಪೂರ್ಣವಾಗಿ ಮುಚ್ಚಿಕೊಳ್ಳಲಿದೆ ಎಂದು ವಿಶ್ವಸಂಸ್ಥೆಯ ತಜ್ಞರ ತಂಡ ಹೇಳಿದೆ.
‘ಜಾಗತಿಕವಾಗಿ ಸದ್ಯ ಜಾರಿಯಲ್ಲಿರುವ ವಾಯುಮಾಲಿನ್ಯ ತಡೆ ನೀತಿಗಳು ಹೀಗೆ ಮುಂದುವರೆದರೆ 2066ರ ಹೊತ್ತಿಗೆ ಅಂಟಾರ್ಕ್ಟಿಕಾದ ಓಝೋನ್ ಪದರವು 1980ರ ಸ್ಥಿತಿಗೆ(ಓಜೋನ್ ರಂಧ್ರದ ಕಂಡುಬಂದ ಸಮಯ) ಮರಳಲಿದೆ. 2045ರ ಹೊತ್ತಿಗೆ ಆರ್ಕ್ಟಿಕ್‌ನಲ್ಲಿ ಮತ್ತು 2040ರ ಹೊತ್ತಿಗೆ ಜಗತ್ತಿನ ಇತರೆಡೆ ಓಝೋನ್ ಪದರ ಸಾಮಾನ್ಯ ಸ್ಥಿತಿಗೆ ಮರಳಲಿದೆ’ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.