ಭಾರತಕ್ಕೆ ಬಂದು ಆಡಿ, ಇಲ್ಲ ಪಾಯಿಂಟ್ಸ್ ಕಟ್ಟಾಗುತ್ತೆ – ಬಾಂಗ್ಲಾಕ್ಕೆ ಬರೆ ಎಳೆದ ICC

ಭಾರತಕ್ಕೆ ಬಂದು ಆಡಿ, ಇಲ್ಲ ಪಾಯಿಂಟ್ಸ್ ಕಟ್ಟಾಗುತ್ತೆ – ಬಾಂಗ್ಲಾಕ್ಕೆ  ಬರೆ ಎಳೆದ ICC

ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮನವಿಯನ್ನು ICC ತಿರಸ್ಕರಿಸಿದೆ. ಬಾಂಗ್ಲಾದೇಶ ಟೂರ್ನಮೆಂಟ್‌ಗಾಗಿ ಭಾರತಕ್ಕೆ ಪ್ರಯಾಣಿಸಬೇಕಾಗುತ್ತದೆ ಅಥವಾ ಅಂಕಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.ಬಾಂಗ್ಲಾ ವೇಗಿ ಮುಸ್ತಾಫಿಜುರ್‌ ರಹಮಾನ್‌ರನ್ನು ಮುಂಬರುವ ಐಪಿಎಲ್‌ನಿಂದ ಹೊರಹಾಕಿದ್ದಕ್ಕೆ ಭಾರತ ವಿರುದ್ಧ ಆಕ್ರೋಶಗೊಂಡಿರುವ ಬಾಂಗ್ಲಾ, ಸುರಕ್ಷತೆ ಮತ್ತು ಭದ್ರತೆಯ ಕಾರಣ ನೀಡಿ ವಿಶ್ವಕಪ್‌ ಪಂದ್ಯಾವಳಿ ಆಡಲು ಭಾರತಕ್ಕೆ ಪ್ರಯಾಣಿಸುವುದಿಲ್ಲ. ತನ್ನ ಪಂದ್ಯಗಳನ್ನು ವಿಶ್ವಕಪ್‌ಗೆ ಜಂಟಿ ಆತಿಥ್ಯ ವಹಿಸಿಕೊಂಡಿರುವ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಕಳೆದ ಭಾನುವಾರ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಐಸಿಸಿಗೆ ಮನವಿ ಸಲ್ಲಿಸಿತ್ತು. ಆದರೆ ಬಾಂಗ್ಲಾದ ಈ ಮನವಿಯನ್ನು ಐಸಿಸಿ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ದಾಸನಿಗೆ ಜೈಲಿನಲ್ಲಿ ಸಾಲು ಸಾಲು ಸಂಕಷ್ಟ! – ಕೋರ್ಟ್‌ ಆದೇಶವಿದ್ರೂ ದರ್ಶನ್‌ಗೆ ಮನೆಯ ಬ್ಲಾಂಕೆಟ್‌ ಸಿಗಲ್ಲ!  

ಮೂಲಗಳ ಪ್ರಕಾರ, ಐಸಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ, ಟೂರ್ನಮೆಂಟ್ ವೇಳಾಪಟ್ಟಿ ಮತ್ತು ಸ್ಥಳಗಳು ಯಾವುದೇ ಕಳವಳಗಳನ್ನು ವ್ಯಕ್ತಪಡಿಸಿದ್ದರೂ ಬದಲಾಗದೆ ಉಳಿಯುತ್ತವೆ ಎಂದು ತಿಳಿಸಿದೆ. ಭಾರತದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸುವುದರಿಂದ ಅಂಕಗಳನ್ನು ಕಳೆದುಕೊಳ್ಳುವ ಸಾಧ್ಯತೆ ಸೇರಿದಂತೆ ಕ್ರೀಡಾ ಪರಿಣಾಮಗಳು ಉಂಟಾಗುತ್ತವೆ ಎಂದು  ಐಸಿಸಿ ಬಿಸಿಬಿಗೆ ತಿಳಿಸಿದೆ ಎಂದು ತಿಳಿದುಬಂದಿದೆ.

ಭಾರತಕ್ಕೆ ತಿರುಗೇಟು ನೀಡುವ ಸಲುವಾಗಿ ಬಾಂಗ್ಲಾದೇಶವು ಮುಂಬರುವ ಐಪಿಎಲ್ ಋತುವಿನ ಪ್ರಸಾರವನ್ನು ದೇಶದಲ್ಲಿ ನಿಷೇಧಿಸುವ ಕ್ರಮಗಳನ್ನು ತೆಗೆದುಕೊಂಡಿದೆ. ಹಿಂದೂ ಪರ ಸಂಘಟನೆಗಳು, ಸ್ವಾಮೀಜಿಗಳು, ಬಿಜೆಪಿ ಮುಖಂಡರು ಸೇರಿ ಹಲವರು, ಬಾಂಗ್ಲಾದಲ್ಲಿ ಹಿಂದೂಗಳನ್ನು ಹತ್ಯೆ ಮಾಡುತ್ತಿದ್ದರೂ ಆ ದೇಶದ ವೇಗಿಗೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಒಡೆತನದ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ, ಬಿಸಿಸಿಐ ಮುಸ್ತಾಫಿಜುರ್‌ರನ್ನು ಐಪಿಎಲ್‌ನಿಂದ ಹೊರಹಾಕಿಸಿತ್ತು. ಇದು ಎರಡು ದೇಶದ ಸಂಬಂಧವನ್ನ ಮತ್ತಷ್ಟು ಹದಗೆಡುವಂತೆ ಮಾಡಿದೆ.

Kishor KV