ಮನೆಕೆಲಸದವರನ್ನ ನಂಬಿ ಟ್ರಿಪ್‌ ಹೋದ ಕುಟುಂಬ! – ಅಯ್ಯಯ್ಯೋ.. ಕೋಟ್ಯಂತರ ಮೌಲ್ಯ ಚಿನ್ನ ಮಾಯ!

ಮನೆಕೆಲಸದವರನ್ನ ನಂಬಿ ಟ್ರಿಪ್‌ ಹೋದ ಕುಟುಂಬ! – ಅಯ್ಯಯ್ಯೋ.. ಕೋಟ್ಯಂತರ ಮೌಲ್ಯ ಚಿನ್ನ ಮಾಯ!

ಈಗಿನ ಕಾಲದಲ್ಲಿ ಯಾರನ್ನ ಕೂಡ ನಂಬಲು ಸಾಧ್ಯ ಇಲ್ಲ. ತಿಂದ ಮನೆಗೆ ಕನ್ನ ಹಾಕುವವರೇ ಹೆಚ್ಚು. ಇದೀಗ ಇಲ್ಲೊಂದು ಕಡೆ ಮನೆಕೆಲಸದವನನ್ನ ನಂಬಿ ಪ್ರವಾಸಕ್ಕೆ ಹೋದ ಕುಟುಂಬಕ್ಕೆ ಶಾಕ್‌ ಎದುರಾಗಿದೆ. ಮನೆಕೆಲಸದಾತ ಇದೀಗ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಗಿಲ್ಲಿಗೆ ಧ್ರುವಂತ್‌ ಚಾಲೆಂಜ್‌! – ಫಿನಾಲೆ ಟಾಸ್ಕ್‌ನಿಂದ ಮಾತಿನ ಮಲ್ಲ ಔಟ್?‌  

ಈ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ. ಅಭಿಷೇಕ್ ಅವರ ಮನೆಯಲ್ಲಿ ಪಶ್ಚಿಮ ಬಂಗಾಳ ಮೂಲದ ಹಾಜೀರಾ ಬೇಗಂ ಎಂಬಾಕೆ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ನಂಬಿಕಸ್ಥಳಾಗಿದ್ದ ಈಕೆ 2024 ರಲ್ಲಿ ಕೆಲಸ ಬಿಟ್ಟಿದ್ದಳು. ಆದರೆ, ಕಳೆದ ಡಿಸೆಂಬರ್ 27, 2025 ರಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದಳು. ಈ ಬಾರಿ ಆಕೆ ತನ್ನ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪತಿ ಶಬ್ಬೀರ್ ಎಂಬಾತನನ್ನು ಕೂಡ ಜೊತೆಗೆ ಕರೆತಂದಿದ್ದಳು. ದಂಪತಿಗಳಿಬ್ಬರೂ ಸೇರಿ ಅಭಿಷೇಕ್ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಡಿಸೆಂಬರ್ 30 ರಂದು ಮಾಲೀಕ ಅಭಿಷೇಕ್ ಅವರು ತಮ್ಮ ಕುಟುಂಬದವರ ಜೊತೆ ತಮಿಳುನಾಡು ಪ್ರವಾಸಕ್ಕೆ ತೆರಳಿದ್ದರು. ಇದನ್ನೇ ಸಂಚಿನ ಭಾಗವಾಗಿಸಿಕೊಂಡ ಆರೋಪಿಗಳಾದ ಹಾಜೀರಾ ಮತ್ತು ಶಬ್ಬೀರ್, ಮನೆಯಲ್ಲಿದ್ದ ಮೂಲ ಕೀಗಳನ್ನು ಬಳಸಿಕೊಂಡು ಲಾಕರ್ ತೆರೆದಿದ್ದಾರೆ. ಸುಮಾರು 900 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿದ್ದಾರೆ. ಡಿಸೆಂಬರ್ 31 ರಂದು ಪ್ರವಾಸ ಮುಗಿಸಿ ಅಭಿಷೇಕ್ ಅವರು ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಕಳ್ಳತನದ ಬಗ್ಗೆ ತಕ್ಷಣ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್  ದಾಖಲಿಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ, ಪಶ್ಚಿಮ ಬಂಗಾಳ ಮೂಲದ ದಂಪತಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 1.37 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಭಾರತ ಅಥವಾ ಹೊರ ರಾಜ್ಯದ ಕೆಲಸದವರನ್ನು ನೇಮಿಸಿಕೊಳ್ಳುವಾಗ ಅವರ ಹಿನ್ನೆಲೆ ಪರಿಶೀಲನೆ ಅತ್ಯಗತ್ಯ ಎಂದು ಪೊಲೀಸರು ಈ ಮೂಲಕ ಜನತೆಗೆ ಎಚ್ಚರಿಕೆ ನೀಡಿದ್ದಾರೆ.

Shwetha M