ಕಂಬಳ ನೋಡಲು ಮಂಗಳೂರಿಗೆ ಬಂದ ಮೇರಿ ಕೋಮ್ – ಕೋಣಗಳ ಓಟಕ್ಕೆ ಬೆರಗಾದ ವಿಶ್ವಚಾಂಪಿಯನ್ ಬಾಕ್ಸರ್

ಕರಾವಳಿಯ ಜಾನಪದ ಕ್ರೀಡೆಯಲ್ಲಿ ಕಂಬಳವೂ ಒಂದು. ಅದರಲ್ಲೂ ಜೋಡುಕೆರೆ ಕಂಬಳ ನೋಡುವುದೇ ಸಂಭ್ರಮ. ಈ ಸಂತಸವನ್ನು ಕಣ್ತುಂಬಿಕೊಳ್ಳಲು ಕರಾವಳಿಗೆ ವಿಶ್ವಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಆಗಮಿಸಿದರು. ಬಂಗ್ರಕೂಳೂರಿನ ರಾಮ-ಲಕ್ಷ್ಮಣ ಜೋಡುಕರೆ ಕಂಬಳವನ್ನು ಕಣ್ಣಾರೆ ಕಂಡು ಅಚ್ಚರಿಪಟ್ಟರು.
ಇದನ್ನೂ ಓದಿ:ಮದುವೆ ಬಗ್ಗೆ ಭವಿಷ್ಯ ಕೇಳಿದ ಯುವತಿ! – ಅಬ್ಬಬ್ಬಾ.. ಆನ್ಲೈನ್ ಗುರೂಜಿ ಮಾಡಿದ್ದೇನು ಗೊತ್ತಾ?
ಒಲಿಂಪಿಕ್ ಪದಕ ವಿಜೇತೆ, ವಿಶ್ವಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಮಂಗಳೂರಿಗೆ ಬಂದಿದ್ದಾರೆ. ಮಣಿಪುರದಿಂದ ಮಂಗಳೂರಿಗೆ ಕಂಬಳ ನೋಡಲು ಆಗಮಿಸಿದರು. ಮಂಗಳೂರು ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ 9ನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ಕಂಬಳ ನಡೆದಿದೆ. ಹೊನಲು ಬೆಳಕಿನ ಈ ಮಂಗಳೂರು ಕಂಬಳಕ್ಕೆ ವಿಶೇಷ ಅತಿಥಿಯಾಗಿ ಮೇರಿ ಕೋಮ್ ಆಗಮಿಸಿದ್ದರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಶನಿವಾರ ಬೆಳಗ್ಗೆಯಿಂದ ಭಾನುವಾರ ಸಂಜೆಯವರೆಗೆ ಕಂಬಳೋತ್ಸವ ನಡೆದಿದೆ. ಈ ಸಂಭ್ರಮದಲ್ಲಿ ಮೇರಿಕೋಮ್ ಭಾಗವಹಿಸಿ, ಕೋಣಗಳ ಓಟದ ಸ್ಪರ್ಧೆಯನ್ನು ಕಣ್ತುಂಬಿಕೊಂಡರು.
ಈ ಬಾರಿ 142 ಜೊತೆ ಕೋಣಗಳು ಭಾಗಿಯಾದವು. ಗೆದ್ದ ಕೋಣಗಳಿಗೆ ಕ್ರಮವಾಗಿ ಎರಡು ಪವನ್, ಒಂದು ಪವನ್ ಚಿನ್ನ ಬಹುಮಾನ ನೀಡಲಾಯಿತು. ಈ ಬಾರಿಯ 9ನೇ ವರ್ಷದ ಕಾರ್ಯಕ್ರಮದ ಹಿನ್ನೆಲೆಯಲ್ಲಿ 9 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಾಕ್ಸಿಂಗ್ನ ವಿಶ್ವ ಚಾಂಪಿಯನ್ ಮೇರಿ ಕೋಮ್ ಮಂಗಳೂರು ಕಂಬಳಕ್ಕೆ ಸಾಕ್ಷಿಯಾಗಿದ್ದು, ಕರಾವಳಿಯ ಜನತೆ ಇವರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಕಂಬಳದಲ್ಲಿ ಕೋಣಗಳ ಓಟದ ಜೊತೆಗೆ ಕರಾವಳಿಯ ಆತಿಥ್ಯಕ್ಕೆ ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ ಸಂತಸ ವ್ಯಕ್ತಪಡಿಸಿದರು.

ನೋಡಿರಿ

