ಸೂರ್ಯೋದಯವೋ.. ಸೂರ್ಯಾಸ್ತವೋ? – ಗಂಭೀರ ಸ್ಥಿತಿಯಿಂದ ಹೊರಬರುತ್ತಾ ಟೆಸ್ಟ್?
ತವರಿನ ವೈಟ್ ವಾಶ್ ಸರಣಿ ನಿಲ್ಲುತ್ತಾ?

ಸೂರ್ಯೋದಯವೋ.. ಸೂರ್ಯಾಸ್ತವೋ? – ಗಂಭೀರ ಸ್ಥಿತಿಯಿಂದ ಹೊರಬರುತ್ತಾ ಟೆಸ್ಟ್?ತವರಿನ ವೈಟ್ ವಾಶ್ ಸರಣಿ ನಿಲ್ಲುತ್ತಾ?

2026ರಲ್ಲಿ ಟೀಂ ಇಂಡಿಯಾಗೆ ಮೂರು ವಿಶ್ವಕಪ್​ಗಳಿವೆ. ಅದ್ರಲ್ಲಿ ಒಂದು ಪುರುಷರ ಟಿ-20 ವಿಶ್ವಕಪ್.. ಌಂಡ್ ಮಹಿಳೆಯರ ಟಿ-20 ವಿಶ್ವಕಪ್.. ಹಾಗೇ ಅಂಡರ್ 19 ವಿಶ್ವಕಪ್​.. ಮೂರರಲ್ಲೂ ಭಾರತ ಚಾಂಪಿಯನ್ ಪಟ್ಟಕ್ಕೇರೋ ಟಾರ್ಗೆಟ್​ನಲ್ಲಿದೆ. ಇದಿಷ್ಟೇ ಅಲ್ಲದೆ ಟೀಂ ಇಂಡಿಯಾ ಮೆನ್ಸ್ ಪಡೆಗೆ ಮೂರು ಬಿಗ್ ಟಾಸ್ಕ್​ಗಳಿವೆ.  2025ರಲ್ಲಿ ಭಾರತ ವೈಟ್ ಬಾಲ್ ಕ್ರಿಕೆಟ್​ನಲ್ಲಿ ಡಾಮಿನೇಟ್ ಮಾಡಿತ್ತು. ಆದ್ರೆ ಟೆಸ್ಟ್ ಕ್ರಿಕೆಟ್​ನಲ್ಲಿ ಕಂಪ್ಲೀಟ್ ಹಳ್ಳ ಹಿಡಿದಿತ್ತು. ಭಾರತದ ಪರ ಕೆಲವ್ರು ಅದ್ಭುತ ಪ್ರದರ್ಶನ ನೀಡಿ ಟಾಪ್​ನಲ್ಲಿದ್ರೆ ಇನ್ನೂ ಕೆಲವ್ರು ಉನ್ನತ ಸ್ಥಾನದಲ್ಲಿದ್ರೂ ಫ್ಲ್ಯಾಪ್ ಶೋ ತೋರಿಸಿದ್ರು. ಆದ್ರೆ ಈ ವರ್ಷದ ಪ್ರದರ್ಶನದ ಮೇಲೆ ಕೆಲವರ ಭವಿಷ್ಯ ಕೂಡ ನಿರ್ಧಾರ ಆಗುತ್ತೆ. ಅದ್ರಲ್ಲೂ ಟಿ-20 ತಂಡದ ಸೂರ್ಯಕುಮಾರ್ ಯಾದವ್ ಮತ್ತು ಗೌತಮ್ ಗಂಭೀರ್ ಪಾಲಿಗೆ ಈ ವರ್ಷ ಅಗ್ನಿಪರೀಕ್ಷೆಯೇ ಸರಿ.

ಇದನ್ನೂ ಓದಿ : ದೇಶದ ಆರ್ಥಿಕ ಕುಸಿತ, ಬೆಲೆಯೇರಿಕೆ, ನಿರುದ್ಯೋಗ – ಇರಾನ್‌ನಲ್ಲೂ ಬೀದಿಗಿಳಿದ Gen Z Z

ಫಾರ್ಮ್ ಗೆ ಬರದಿದ್ರೆ ಈ ವರ್ಷ ಸೂರ್ಯಾಸ್ತ ಪಕ್ಕಾ?

2024 ರ ಟಿ20 ವಿಶ್ವಕಪ್ ವರೆಗೆ ಸೂರ್ಯಕುಮಾರ್ ಯಾದವ್ ಭಾರತದ ಅತ್ಯುತ್ತಮ ಟಿ20 ಬ್ಯಾಟ್ಸ್‌ಮನ್ ಆಗಿದ್ದರು. ವಿಶ್ವಕಪ್ ಫೈನಲ್​ನಲ್ಲೂ ಹೀರೋ ಆಗಿದ್ರು. ಭಾರತ ಚಾಂಪಿಯನ್ ಆದ್ಮೇಲೆ ನಾಯಕತ್ವವೂ ಸಿಕ್ಕಿತು. ಜುಲೈ ಮತ್ತು ಅಕ್ಟೋಬರ್ 2024 ರಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಸರಣಿಗಳಲ್ಲಿ ಸೂರ್ಯನ ಪ್ರದರ್ಶನ ಅದ್ಭುತವಾಗಿತ್ತು. ಹಾಗೇ ಕ್ಯಾಪ್ಟನ್ ಆಗಲು ಸರ್ವಸಮರ್ಥರು ಅನ್ನುವಂತೆ ಆಡಿದ್ರು.  2024ರ ಅಕ್ಟೋಬರ್ 12ರಂದು ಬಾಂಗ್ಲಾದೇಶ ವಿರುದ್ಧ 35 ಎಸೆತಗಳಲ್ಲಿ 75 ರನ್ ಗಳಿಸಿದರು, ಇದರಲ್ಲಿ ಐದು ಸಿಕ್ಸರ್‌ಗಳು ಮತ್ತು ಎಂಟು ಬೌಂಡರಿಗಳಿದ್ವು. ವಿಪರ್ಯಾಸ ಅಂದ್ರೆ ಟಿ20ಐಗಳಲ್ಲಿ ಸೂರ್ಯ ಸಿಡಿಸಿದ ಕೊನೇ ಅರ್ಧಶತಕ ಇದು. ಈ ಪಂದ್ಯ ಆದ್ಮೇಲೆ ಸೂರ್ಯ 2025 ರ ಅಂತ್ಯದವರೆಗೆ ಇನ್ನೂ 22 ಪಂದ್ಯಗಳನ್ನು ಆಡಿದ್ರು. ಆದ್ರೆ ಈ ಇನ್ನಿಂಗ್ಸ್​ಗಳಲ್ಲಿ ಜಸ್ಟ್ 2 ಸಲ ಅಷ್ಟೇ 25 ರನ್‌ಗಳ ಸ್ಕೋರ್  ದಾಟಿದ್ದಾರೆ. ಗರಿಷ್ಠ ಸ್ಕೋರ್ ಅಂದ್ರೆ 2025 ರ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 47* ಆಗಿದೆ.  ಬ್ಯಾಟಿಂಗ್​ನಲ್ಲಿ ಕಂಟಿನ್ಯೂಯಸ್ ಆಗಿ ಫೇಲ್ಯೂರ್ ಆಗ್ತಿದ್ರೂ ಅವರನ್ನು T20 ವಿಶ್ವಕಪ್‌ಗೆ ನಾಯಕನಾಗಿಯೇ ಮುಂದುವರಿಸಲಾಗಿದೆ. ಬಿಸಿಸಿಐನ ಇದೇ ನಡೆ ಚರ್ಚೆಗೂ ಗ್ರಾಸವಾಗಿತ್ತು. ಶುಭ್​ಮನ್ ಗಿಲ್​ರಂತೆ ಸೂರ್ಯನನ್ನೂ ಹೊರಗೆ ಕೂರಿಸಬೇಕಿತ್ತು ಅನ್ನೋ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಸೂರ್ಯನಿಗೆ ಈ ವರ್ಷ ತುಂಬಾನೇ ಮುಖ್ಯವಾಗುತ್ತೆ. ನ್ಯೂಜಿಲೆಂಡ್ ವಿರುದ್ಧ ಜನವರಿ ಕೊನೆಯಲ್ಲಿ ನಡೆಯಲಿರೋ 5 ಪಂದ್ಯಗಳ ಟಿ-20 ಸರಣಿಯಲ್ಲಿ ಕಂ ಬ್ಯಾಕ್ ಮಾಡಲೇಬೇಕು. ಫಾರ್ಮ್ ಗೆ ಮರಳಬೇಕು. ಌಂಡ್ ನೆಕ್ಸ್​ಟ್ ಟಿ-20 ವಿಶ್ವಕಪ್ ಯುದ್ಧದಲ್ಲೂ ಅಬ್ಬರಿಸಲೇಬೇಕು. ಚಾಂಪಿಯನ್ ಟೈಟಲ್​ನ ತಮ್ಮಲ್ಲೇ ಉಳಿಸಿಕೊಳ್ಬೇಕು. ಆಗಷ್ಟೇ 2026ರಲ್ಲಿ ಸೂರ್ಯನ ಪಾಲಿಗೆ ಉದಯವಾಗುತ್ತೆ. ಇಲ್ಲದೇ ಇದ್ರೆ ಇದೇ ವರ್ಷ ಸೂರ್ಯಾಸ್ತದಂತೆ ಟೀಂ ಇಂಡಿಯಾದಿಂದಲೇ ಮರೆಯಾದ್ರೂ ಆಶ್ಚರ್ಯ ಪಡ್ಬೇಕಿಲ್ಲ. ಹಾಗೇ ಸೂರ್ಯನ ಜೊತೆ ಗೌತಮ್ ಗಂಭೀರ್​ ಪಾಲಿಗೂ ಈ ವರ್ಷ ಅಗ್ನಿಪರೀಕ್ಷೆಯೇ ಸರಿ.

ಪಾತಾಳಕ್ಕೆ ಬಿದ್ದಿರೋ ಟೆಸ್ಟ್ ಟೀಂ ಮೇಲೆತ್ತುತ್ತಾರಾ ಗಂಭೀರ್?

ಗೌತಮ್ ಗಂಭೀರ್ ಕೋಚ್ ಆದ್ಮೇಲೆ ಟೀಂ ಇಂಡಿಯಾ ವೈಟ್ ಬಾಲ್ ಸಿರೀಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಌಂಡ್ ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾಕಪ್​ನಲ್ಲಿ ಅಜೇಯವಾಗಿ ಟ್ರೋಫಿ ಎತ್ತಿ ಹಿಡಿದಿದೆ.  ಆದ್ರೆ ಟೆಸ್ಟ್ ಕ್ರಿಕೆಟ್​ನಲ್ಲಿ ಕಂಪ್ಲೀಟ್ ಹಳ್ಳ ಹಿಡಿದಿದೆ. ಹೀಗಾಗಿ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡವನ್ನು ಸೀಮಿತ ಓವರ್‌ಗಳ ಪವರ್​ಶೋನಂತೆಯೇ ಈ ವರ್ಷ ಮೇಲೆತ್ತಬೇಕಾದ ಸವಾಲು ಗಂಭೀರ್ ಮೇಲಿದೆ. 2024ರ ಟಿ20 ವಿಶ್ವಕಪ್ ಬಳಿಕ ಗಂಭೀರ್ ಭಾರತದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ಭಾರತ 6 ಸರಣಿಗಳಲ್ಲಿ 19 ಟೆಸ್ಟ್ ಪಂದ್ಯಗಳನ್ನ ಆಡಿದೆ. ಈ ಪೈಕಿ ಏಳು ಟೆಸ್ಟ್‌ ಪಂದ್ಯ ಗೆದ್ರೆ 10 ರಲ್ಲಿ ಸೋತಿದೆ ಮತ್ತು ಎರಡು ಡ್ರಾ ಮಾಡಿಕೊಂಡಿದೆ. ಇನ್ನು ಭಾರತವು ತವರಿನಲ್ಲಿ ಬಾಂಗ್ಲಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಎರಡು ಸರಣಿಗಳನ್ನು ಗೆದ್ದಿದೆ. ಹಾಗೇ ಮೂರು ಸರಣಿ ಸೋತಿದೆ. ಅದ್ರಲ್ಲಿ ತವರಿನಲ್ಲಿ ನ್ಯೂಜಿಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧ ಕ್ಲೀನ್ ಸ್ವೀಪ್ ಹಾಗೇ ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ. ಌಂಡ್ ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿದೆ. ಸತತ ಎರಡು ಬಾರಿ ವಿಶ್ವಟೆಸ್ಟ್ ಚಾಂಪಿಯನ್ ಫೈನಲ್​ಗೇರಿದ್ದ ಭಾರತ ಗಂಭೀರ್ ಕೋಚ್ ಆದ್ಮೇಲೆ 2025ರಲ್ಲಿ ಫೈನಲ್​ಗೆ ತಲುಪೋಕೆ ಸಾಧ್ಯವಾಗ್ಲಿಲ್ಲ. ಈಗ 2027ರಲ್ಲೂ ಆಗುತ್ತೋ ಇಲ್ವೋ ಹೇಳೋಕೆ ಆಗಲ್ಲ. ಯಾಕಂದ್ರೆ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಪ್ರಸ್ತುತ 2025-27ರ ಸರ್ಕಲ್​ನಲ್ಲಿ ಇನ್ನು 9 ಟೆಸ್ಟ್ ಪಂದ್ಯಗಳಿದ್ದು 7 ಪಂದ್ಯಗಳನ್ನ ಗೆದ್ರಷ್ಟೇ ಫೈನಲ್​ ರೇಸ್ ಅವಕಾಶ ಇದೆ. ಇಲ್ಲದಿದ್ರೆ ಈ ಸಲವೂ ಮಿಸ್ ಆಗಲಿದೆ. ಸೋ ಗಂಭೀರ್ ಮುಂದಿರೋ ಅತಿದೊಡ್ಡ ಚಾಲೆಂಜ್ ಅಂದ್ರೆ ಇದೇ ಆಗಿದೆ. ರೆಡ್ ಬಾಲ್ ಕ್ರಿಕೆಟ್​​ನಲ್ಲಿ ಮತ್ತೆ ಟೀಂ ಇಂಡಿಯಾವನ್ನ ಟಾಪ್​ ರೇಸ್​ಗೆ ತರಲೇಬೇಕಿದೆ. ಗಂಭೀರ ಸ್ಥಿತಿ ತಲುಪಿರೋ ಟೆಸ್ಟ್ ಟೀಂ ಸುಧಾರಿಸಲೇಬೇಕಿದೆ.

ತವರಿನಲ್ಲಿ ವೈಟ್ ವಾಷ್ ಸರಣಿ ತಪ್ಪುತ್ತಾ?

ಇನ್ನು ಟೆಸ್ಟ್ ಫಾರ್ಮೆಟ್​ನಲ್ಲಿ ಭಾರತ ತವರಿನಲ್ಲಿ ಪ್ರಾಬಲ್ಯ ಮರೆದಿತ್ತು. ಬಟ್ ಕಳೆದೊಂದು ವರ್ಷದಲ್ಲಿ ಭಾರತದಲ್ಲೇ ವೈಟ್ ವಾಷ್ ಮುಖಭಂಗಗಗಳನ್ನ ಅನುಭವಿಸಿದೆ. 2013ರ ಫೆಬ್ರವರಿಯಿಂದ ಹಿಡ್ದು 2024ರ ಅಕ್ಟೋಬರ್​ವರೆಗೆ ತವರಿನಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನೂ ಸೋಲದ ಭಾರತ ಗಂಭೀರ್ ಕೋಚ್ ಆದ್ಮೇಲೆ 2024ರ ಅಕ್ಟೋಬರ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಆಗಿತ್ತು. 3ಕ್ಕೆ ಮೂರೂ ಪಂದ್ಯಗಳನ್ನೂ ಸೋತಿತ್ತು. ಆ ನಂತ್ರ ಕಳೆದ ವರ್ಷ ನವೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಸರಣಿಯಲ್ಲಿ ವೈಟ್ ವಾಶ್ ಆಗಿತ್ತು. ಈ ಎರಡೂ ಸರಣಿಗಳ ಕ್ಲೀನ್ ಸ್ವೀಪ್ ಭಾರತಕ್ಕೆ ಅತಿದೊಡ್ಡ ಮುಖಭಂಗವಾಗುವಂತೆ ಮಾಡಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಅನುಭವಿ ಆಟಗಾರರ ನಿವೃತ್ತಿ ಬಳಿಕ ತಂಡದ ಅಧಃಪತನ ಜಾಸ್ತಿ ಆಗ್ತಿದೆ. ಅದ್ರಲ್ಲೂ ತವರಿನಲ್ಲೇ ವೈಟ್ ವಾಶ್ ಅವಮಾನದ ಸರಪಳಿಯಿಂದ ಹೊರ ಬರ್ಬೇಕಿದೆ.

Shantha Kumari