ಕಾಣೆಯಾದ ಅಪ್ಪನನ್ನ ಹುಡುಕಿ ಕೊಟ್ಟ ಇನ್ಸ್ಟಾ – ಒಂದೇ ಒಂದು ಪೋಸ್ಟ್‌ನಿಂದ ಒಂದಾದ ಕುಟುಂಬ

ಕಾಣೆಯಾದ ಅಪ್ಪನನ್ನ ಹುಡುಕಿ ಕೊಟ್ಟ ಇನ್ಸ್ಟಾ – ಒಂದೇ ಒಂದು ಪೋಸ್ಟ್‌ನಿಂದ ಒಂದಾದ ಕುಟುಂಬ

ಸೋಷಿಯಲ್ ಮೀಡಿಯಾದಿಂದ  ಎಷ್ಟು ಕೆಟ್ಟದ್ದು ಆಗುತ್ತೋ, ಅಷ್ಟೇಒಳ್ಳೆಯದ್ದು ಆಗುತ್ತೆ ಅನ್ನೋದು ಚಾಮರಾಜನಗರದಲ್ಲಿ ಸಾಬೀತಾಗಿದೆ.  ಆಕಸ್ಮಿಕವಾಗಿ ಕುಟುಂಬದಿಂದ ಕಾಣೆಯಾಗಿ ನಿರ್ಗತಿಕನಾಗಿ ಬದುಕುತ್ತಿದ್ದ ವೃದ್ಧ ವ್ಯಕ್ತಿಯೊಬ್ಬರು ಇನ್ಸ್​ಸ್ಟಾಗ್ರಾಂ ಮೂಲಕ ಮತ್ತೆ ಕುಟುಂಬ ಸೇರಿದ್ದಾರೆ.  ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಅಮರ್​ಪುರ್ ತಾಲೂಕಿನ ಧನ್ವಾಸಿ ಗ್ರಾಮದ ಪ್ರೀತಂ ಸಿಂಗ್(60) ಎಂಬವರು ಮತ್ತೆ ಕುಟುಂಬ ಸೇರಿರುವವರು. ಇವರು ತಮ್ಮ ಕುಟುಂಬದವರೊಂದಿಗೆ ಕೂಲಿ ಕೆಲಸಕ್ಕಾಗಿ ಚಾಮರಾಜನಗರ ಜಿಲ್ಲೆಯ ಯಳಂದೂರಿಗೆ ಬಂದಿದ್ದರು. ಆದರೆ, ಅಚಾನಾಕ್ಕಾಗಿ ಕುಟುಂಬದದಿಂದ ಬೇರೆಯಾಗಿ ದಾರಿ, ಭಾಷೆ ಯಾವುದೂ ತಿಳಿಯದೆ ಪರದಾಡಿ ನಿರ್ಗತಿಕರಾಗಿದ್ದರು.

ಇದನ್ನೂ ಓದಿ: ಫೈ*ರಿಂಗ್ ಪೋಲಿಸರಿಂದ ನಡೆದಿಲ್ಲ! – ಬ್ಯಾನರ್‌ ಗಲಾಟೆ ಕೇಸ್‌ FSL?

ಹಿಂದಿ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲದೇ, ಮನೆಯವರ ಫೋನ್ ನಂಬರೂ ತಿಳಿಯದೇ, ವಾಪಸ್ ಹೋಗಲು ಗೊತ್ತಾಗದೇ ಮನೆಯವರ ಪಾಲಿಗೆ ನಾಪತ್ತೆಯಾಗಿ ಯಳಂದೂರು ಬಸ್ ನಿಲ್ದಾಣದ ಸುತ್ತಮುತ್ತ ಓಡಾಡುತ್ತಾ, ರಾತ್ರಿ ವೇಳೆ ರಸ್ತೆ ಬದಿ ಮಲಗಿ ದಿನ ಕಳೆಯುತ್ತಿದ್ದರು. ನಿರ್ಗತಿಕ ವೃದ್ಧನನ್ನು ಗಮನಿಸಿದ ಯಳಂದೂರು ಠಾಣೆ ಪೊಲೀಸರು, ನವೆಂಬರ್ 11ರಂದು ಸಂತೇಮರಹಳ್ಳಿಯ ಜ್ಞಾನ ಸಿಂಧು ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಅಂದಿನಿಂದ ವೃದ್ಧಾಶ್ರಮದಲ್ಲಿದ್ದ ಪ್ರೀತಂ ಸಿಂಗ್ ಅವರು ಊರು, ಮನೆಯವರ ಬಗ್ಗೆ ಹಿಂದಿಯಲ್ಲಿ ಹೇಳಿಕೊಂಡು ಪೇಚಾಡುತ್ತಿದ್ದರು. ಇವರು ಸರಿಯಾಗಿ ಊರಿನ ಹೆಸರು ಹೇಳುತ್ತಿದ್ದಾರಾ ಎನ್ನುವ ಗೊಂದಲವೂ ಮೂಡಿತ್ತು. ವೃದ್ಧಾಶ್ರಮದ ಅಧೀಕ್ಷಕ ಎಂ.ಮಹದೇವಸ್ವಾಮಿ, ಸಮಾಜ ಸೇವಕ ಹೆಚ್​.ಬಿ.ಪ್ರಕಾಶ್‌ ಅವರಿಗೆ ಪ್ರೀತಂ ಸಿಂಗ್‌ ಅವರನ್ನು ಹೇಗಾದರೂ ಮಾಡಿ ಕುಟುಂಬದ ಮಡಿಲು ಸೇರಿಸಬೇಕೆಂಬ ಆಸೆ ಇತ್ತು. ಈ ಸಂದರ್ಭದಲ್ಲಿ ವೃದ್ದಾಶ್ರಮದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಬಂದಿದ್ದ ಸತ್ಯ ಎಜುಕೇರ್ ಕಾಂಪಿಟೆನ್ಸಿ ಟ್ರಸ್ಟ್‌ನ ಮಹೇಶ್ ಅವರು ಪ್ರೀತಂ ಸಿಂಗ್ ಅವರ ವಿಡಿಯೋ ಮಾಡಿ ಇನ್ಸ್​ಸ್ಟಾಗ್ರಾಂನಲ್ಲಿರುವ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಗ್ರೂಪ್‌ಗೆ ಹಾಕಿ ಸಹಾಯ ಕೋರಿದ್ದರು.

ಇನ್ಸ್​ಸ್ಟಾಗ್ರಾಂನಿಂದ ಸಿಕ್ಕ ಮಾಹಿತಿ ಆಧರಿಸಿ ಡಿ.30ರಂದು ಪ್ರೀತಂ ಸಿಂಗ್ ಪುತ್ರ ರಾಜೇಶ್ ಸಿಂಗ್ ಧುರ್ವಿ ಇಲ್ಲಿಗೆ ಹುಡುಕಿಕೊಂಡು ಬಂದಿದ್ದಾರೆ. ಕಾನೂನು ಪ್ರಕಾರ, ಪ್ರೀತಂ ಸಿಂಗ್‌ರನ್ನು ಯಳಂದೂರು ಪೊಲೀಸರ ಮೂಲಕ ಮಗನಿಗೆ ಒಪ್ಪಿಸಲಾಯಿತು. ಯಳಂದೂರಿನ ಬಸ್ ನಿಲ್ದಾಣದ ಬಳಿ ಇರುತ್ತಿದ್ದ ಪ್ರೀತಂ ಸಿಂಗ್‌ ಅವರನ್ನು ಪೊಲೀಸರು ವೃದ್ಧಾಶ್ರಮಕ್ಕೆ ಕರೆತಂದು ಬಿಟ್ಟಿದ್ದರು. ಇವರ ಬಗ್ಗೆ ಮಹೇಶ್ ಎಂಬವರು ವಿಡಿಯೋ ಮಾಡಿ ಇನ್ಸ್​ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುವ ಮೂಲಕ ಕುಟುಂಬದವರನ್ನು ಪತ್ತೆ ಮಾಡಿದರು. ಪ್ರೀತಂ ಸಿಂಗ್ ಮಗ ಬಂದು ಕರೆದುಕೊಂಡು ಹೋಗಿದ್ದಾರೆ” ಎಂದು ವೃದ್ಧಾಶ್ರಮದ ಅಧೀಕ್ಷಕ ಮಹಾದೇವಸ್ವಾಮಿ ತಿಳಿಸಿದರು.

Kishor KV