10 ದಿನದೊಳಗೆ 163.62 ಕೋಟಿ ರೂಪಾಯಿ ಪಾವತಿ ಮಾಡಿ – ಆಪ್ಗೆ ದೆಹಲಿ ಸರ್ಕಾರದಿಂದಲೇ ಆದೇಶ..!
ದೆಹಲಿ : ಆಮ್ ಆದ್ಮಿ ಪಕ್ಷ ಮುಂದಿನ ಹತ್ತು ದಿನಗಳಲ್ಲಿ ದೆಹಲಿ ಸರ್ಕಾರಕ್ಕೆ 164 ಕೋಟಿ ರುಪಾಯಿ ಪಾವತಿಸಬೇಕು ಅಂತ ಅರವಿಂದ ಕೇಜ್ರಿವಾಲ್ ಆಡಳಿತ ನಡೆಸುತ್ತಿರುವ ಸರ್ಕಾರ ನೊಟೀಸ್ ನೀಡಿದೆ.. ನಿಜ.. ದೆಹಲಿ ಸರ್ಕಾರವೇ ಆಡಳಿತ ರೂಢ ಆಮ್ ಆದ್ಮಿ ಪಕ್ಷಕ್ಕೆ ಇಂತಹ ನೊಟೀಸ್ ನೀಡಿರೋದು. ಸರ್ಕಾರದ ಸಂದೇಶದ ರೀತಿಯಲ್ಲಿ ನೀಡಿರುವ ರಾಜಕೀಯ ಜಾಹಿರಾತುಗಳಿಗೆ ಸಂಬಂಧಿಸಿದಂತೆ 10 ದಿನದೊಳಗೆ 163.62 ಕೋಟಿ ರುಪಾಯಿ ಪಾವತಿಸುವಂತೆ ದೆಹಲಿ ಸರ್ಕಾರದ ಮಾಹಿತಿ ಮತ್ತು ಪ್ರಸಾರ ನಿರ್ದೇಶನಾಲಯ ರಿಕವರಿ ನೊಟೀಸ್ ಕಳಿಸಿದೆ. ಇದರಲ್ಲಿ 99.31 ಕೋಟಿ ರುಪಾಯಿಗಳನ್ನು ಆಮ್ ಆದ್ಮಿ ಪಕ್ಷ ಜಾಹೀರಾತುಗಳಿಗಾಗಿ 2017ರ ಮಾರ್ಚ್ 31ರವರೆಗೆ ಖರ್ಚು ಮಾಡಿರುವ ಹಣವಾಗಿದ್ದು, ಇದರ ಮೇಲೆ 64.31 ಕೋಟಿ ರುಪಾಯಿಯನ್ನು ದಂಡವಾಗಿ ಪಾವತಿಸುವಂತೆ ಸೂಚಿಸಿದೆ. ಆದ್ರೆ ಆಪ್ಗೆ ನೀಟಿರುವ ನೋಟೀಸ್ಗೆ ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆಕ್ರೋಶ ವ್ಯಕ್ತಪಡಿಸಿದ್ದು, ದೆಹಲಿಯ ಉಪ ರಾಜ್ಯಪಾಲ ವಿ.ಕೆ.ಸಕ್ಸೇನಾ ದೆಹಲಿ ಸರ್ಕಾರದ ಅಧಿಕಾರಿಗಳನ್ನು ಬಳಸಿ ಈ ರೀತಿಯ ರಾಜಕೀಯ ಮಾಡುತ್ತಿದ್ದಾರೆಂದು ದೂರಿದ್ದಾರೆ. ಒಂದು ವೇಳೆ 10 ದಿನದೊಳಗೆ ಆಪ್ ಜಾಹೀರಾತಿಗೆ ಸಂಬಂಧಿಸಿದ ಹಣ ಪಾವತಿಸದಿದ್ದರೆ, ದೆಹಲಿಯಲ್ಲಿ ಆಪ್ನ ಕಚೇರಿ ಸೇರಿದಂತೆ ಇತರೆ ಪ್ರಾಪರ್ಟಿಗಳನ್ನು ದೆಹಲಿ ಸರ್ಕಾರ ಮುಟ್ಟುಗೋಲು ಹಾಕುವ ಸಾಧ್ಯತೆಯಿದೆ.