ಗೃಹಲಕ್ಷ್ಮೀ ಗೋಲ್ಮಾಲ್, ವಲಸಿಗರಿಗೆ ಮನೆ – ಕಾಂಗ್ರೆಸ್ ವಿರುದ್ಧ ಬೀದಿಗಿಳಿಯಲು ರೆಡಿಯಾದ ಬಿಜೆಪಿ
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ವಿಚಾರದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಇದೀಗ ಯೂಟರ್ನ್ ಹೊಡೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸ ಕ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ನೀತಿಯಿಂದ ರಾಜ್ಯದ ಜನರು ದಂಗೆ ಏಳುವಂಥ ಸ್ಥಿತಿ ಇದೆ. ಜನವರಿ 5ರಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಇದೆ. ಡ್ರಗ್ ಮಾಫಿಯಾ, ಕನ್ನಡಿಗರಿಗೆ ಅಪಮಾನ, ಗೃಹಲಕ್ಷ್ಮಿ ಯೋಜನೆಯ ಅಕ್ರಮದ ಕುರಿತು ಸಮಗ್ರವಾಗಿ ಚರ್ಚಿಸಿ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡುವ ಬಗ್ಗೆ ರೂಪುರೇಷೆಗಳನ್ನು ನಿರ್ಧರಿಸಲಿದ್ದೇವೆ ಎಂದು ತಿಳಿಸಿದರು.
ಅಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯ ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿಯ ಮನೆಗಳನ್ನು ಕೊಡುವುದಾಗಿ ನಿರ್ಧರಿಸಿದ್ದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ನಮ್ಮ ರಾಜ್ಯದ ನೀತಿ-ನಿರ್ಧಾರಗಳನ್ನು ದೆಹಲಿಯಲ್ಲಿ ಕುಳಿತ ಕೇರಳ ಮೂಲದ ಕೆ.ಸಿ. ವೇಣುಗೋಪಾಲ್ ತೀರ್ಮಾನಿಸಬೇಕೇ? ಈ ರಾಜ್ಯದ ಮುಖ್ಯಮಂತ್ರಿಗಳು ನಿರ್ಧರಿಸಬೇಕೇ? ಬೈಯಪ್ಪನಹಳ್ಳಿಯ ಮನೆಗಳನ್ನು ಕನ್ನಡಿಗರಿಗೆ, ಬಡವರಿಗೆ ಕೊಡಲು ಕಟ್ಟಲಾಗಿದೆ. ಹೈಕಮಾಂಡಿಗೆ ಬೆದರಿ, ಕುರ್ಚಿ ಉಳಿಸಿಕೊಳ್ಳಲು ಮನಸೋ ಇಚ್ಛೆ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ಸಿಎಂ ನಿರ್ಧಾರಕ್ಕೆ ಕಾನೂನಿನಡಿ ಅಧಿಕಾರ ಇದೆಯೇ? ಎಂದು ಕೇಳಿದರು.
ಇದನ್ನೂ ಓದಿ: ಇಶಾನ್ ಕಿಶನ್ ಪಂದ್ಯವಾಡಬಾರದು – ಬಿಸಿಸಿಐ ಕಟ್ಟಪ್ಪಣೆ ಹೊರಡಿಸಿದ್ದು ಯಾಕೆ?
ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ವಲಸಿಗರಿಗೆ ಅಕ್ರಮವಾಗಿ ಮನೆ ಕೊಡುವುದಾಗಿ ಘೋಷಿಸಿದ್ದು ಖಂಡಿತಕ್ಕೂ ಕಾನೂನಿನ ವಿರುದ್ಧವಾದುದು. ಸಿಎಂ, ಡಿಸಿಎಂ ನಿರ್ಧಾರವೇ ಅಕ್ರಮ. ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ಆಗುವಂತೆ ಯಾಕೆ ಇಂಥ ನಿರ್ಧಾರ ಮಾಡುತ್ತೀರಿ ಎಂದು ಪ್ರಶ್ನಿಸಿದ ಅವರು, ರಾಜ್ಯದ ತೆರಿಗೆದಾರರ ಹಣದಿಂದ ಕಟ್ಟಿದ ಮನೆಗಳನ್ನು ನೀವು ಖುಷಿ ಬಂದಂತೆ ತೀರ್ಮಾನ ಮಾಡುವುದು ಸರಿಯೇ ಮುಖ್ಯಮಂತ್ರಿಗಳೇ ಎಂದು ಅವರು ಕೇಳಿದರು.
ಕೇರಳದ ಮುಖ್ಯಮಂತ್ರಿ ಪಿಣರಾಯಿಯವರ ಹೇಳಿಕೆ, ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕಿದ ಬಳಿಕ ಹೀಗಾಗಿದೆ. ಸಿಎಂ ಅವರು ತಮ್ಮ ಕುರ್ಚಿ ಉಳಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರೆ, ಉಪ ಮುಖ್ಯಮಂತ್ರಿಗಳು ಸಿಎಂ ಕುರ್ಚಿ ಪಡೆದುಕೊಳ್ಳುವ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಹಿಂದೆ ಕೇರಳದ ವಯನಾಡಿನಲ್ಲಿ ಭೀಕರ ಪ್ರವಾಹ ಆದಾಗ 100 ಮನೆಗಳನ್ನು ಕಟ್ಟಿಸಿಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು. ವಯನಾಡಿನ ಆನೆ ತುಳಿತ ಸಾವಿಗೆ ತಕ್ಷಣ 15 ಲಕ್ಷ ಪರಿಹಾರ ನೀಡಿದ್ದರು. ಕೇರಳದಲ್ಲಿ ಮನೆ ಕಟ್ಟಿಸಿಕೊಡುವ, ಪರಿಹಾರ ಕೊಡುವ ನಿಮಗೆ ನಮ್ಮ ರಾಜ್ಯದ ಬಡವರೇನು ಅನ್ಯಾಯ ಮಾಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಕೇಳಿದರು. ರಾಜ್ಯದಲ್ಲಿ ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದರು. ಮುಖ್ಯಮಂತ್ರಿಗಳಿಂದ ಪರಿಹಾರ ನಿರೀಕ್ಷೆಯಲ್ಲಿದ್ದರು. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಮುಖ್ಯಮಂತ್ರಿಗಳು ಕೇಂದ್ರದ ಕಡೆ ಬೊಟ್ಟು ಮಾಡಿ ಕುಳಿತಿದ್ದರಲ್ಲವೇ ಎಂದರು. ಸಿಎಂ ಕುರ್ಚಿ ಉಳಿಸಿಕೊಳ್ಳುವ ಯತ್ನ ಮತ್ತು ಪಡೆಯುವ ಯತ್ನ ಈ ರಾಜ್ಯಕ್ಕೆ, ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು. ನಮ್ಮ ರಾಜ್ಯದ ಬಡವರು, ಕಡುಬಡವರಿಗೆ ಮನೆ ಕೊಟ್ಟು ಆಮೇಲೆ ಅಕ್ಕಪಕ್ಕದ ರಾಜ್ಯದವರ ಬಗ್ಗೆ ಚಿಂತನೆ ಮಾಡಿ ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ಅವರು ಕನ್ನಡ ನಾಡಿನ ಮುಖ್ಯಮಂತ್ರಿಗಳು. ಇದನ್ನು ನೆನಪಿಸಬೇಕಾದುದು ದುರ್ದೈವ ಎಂದು ಟೀಕಿಸಿದರು.

ನೋಡಿರಿ

