ತಿರುಪತಿಯಲ್ಲಿ ತೆರೆಯಿತು ವೈಕುಂಠ ದ್ವಾರ! –  ವೆಂಕಟೇಶ್ವರನ ಕಣ್ತುಂಬಿಕೊಂಡ ಭಕ್ತ ಸಾಗರ!

ತಿರುಪತಿಯಲ್ಲಿ ತೆರೆಯಿತು ವೈಕುಂಠ ದ್ವಾರ! –  ವೆಂಕಟೇಶ್ವರನ ಕಣ್ತುಂಬಿಕೊಂಡ ಭಕ್ತ ಸಾಗರ!

ಇಂದು ವೈಕುಂಠ ಏಕಾದಶಿ. ನಾಡಿನೆಲ್ಲೆಡೆ ಸಂಭ್ರಮದಿಂದ ವೈಕುಂಠ ಏಕಾದಶಿಯನ್ನ ಆಚರಿಸಲಾಗುತ್ತಿದೆ. ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿದಿಯಲ್ಲಿ ವೈಕುಂಠ ದ್ವಾರ ಓಪನ್‌ ಆಗಿದ್ದು, ಭಕ್ತರು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ: ವೈಕುಂಠ ಏಕಾದಶಿ ಶುಭ ಮುಹೂರ್ತ ಯಾವುದು? – ಪೂಜಾ ವಿಧಿ-ವಿಧಾನಗಳೇನು?

ಇಂದು ಧನುರ್ಮಾಸ ಶುದ್ಧ ಏಕಾದಶಿ. ಇದನ್ನು ವೈಕುಂಠ ಏಕಾದಶಿ ಆಗಿದ್ದು, ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) 10 ದಿನಗಳವರೆಗೆ, ಅಂದರೆ ಡಿಸೆಂಬರ್ 30 ರಿಂದ ಜನವರಿ 8, 2026 ರವರೆಗೆ ವೈಕುಂಠ ದ್ವಾರ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಳಿಗ್ಗೆ 12:05 ಕ್ಕೆ ವೈಕುಂಠ ದ್ವಾರಗಳನ್ನು ತೆರೆಯಲಾಯಿತು. ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು.ಈ ವಿಶೇಷ ದರ್ಶನವು ವರ್ಷದಲ್ಲಿ ಈ ಹತ್ತು ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ.

ವರ್ಷದಲ್ಲಿ 24 ಏಕಾದಶಿಗಳು ಬರಲಿವೆ. ವೈಕುಂಠ ಏಕಾದಶಿಗೆ ವಿಶೇಷ ಮಹತ್ವವಿದೆ. ವೈದಿಕ ಜ್ಯೋತಿಷದ ಪ್ರಕಾರ, ಈ ದಿನದಂದು ವಿಷ್ಣುವಿನ ನಿವಾಸದ ದ್ವಾರಗಳು ತೆರೆದಿರುತ್ತವೆ. ಹಾಗಾಗಿಯೇ, ವೈಕುಂಠ ಏಕಾದಿನ ದಿನ ಭಕ್ತರು ಉಪವಾಸ ಮಾಡಲಿದ್ದಾರೆ. ಇದರಿಂದ ಭಕ್ತರ ಪ್ರಾರ್ಥನೆ ಇಡೇರುತ್ತವೆ ಎಂಬ ನಂಬಿಕೆ ಇದೆ. ವೈಕುಂಠ ಏಕಾದಶಿ ಹಿನ್ನೆಲೆ ಇಸ್ಕಾನ್ ಟೆಂಪಲ್‌ಗೆ ಭಕ್ತರ ದಂಡು ಹರಿದುಬರುತ್ತಿದೆ. ಬೆಳಗಿನ ಜಾವದಿಂದಲೇ ದರ್ಶನಕ್ಕಾಗಿ ಕ್ಯೂ ನಲ್ಲಿ ಭಕ್ತರು ನಿಂತಿದ್ದಾರೆ. ಇಸ್ಕಾನ್ ದೇಗುಲಕ್ಕೆ ಶಾಸಕ ಗೋಪಾಲಯ್ಯ ಕುಟುಂಬ ಭೇಟಿ ನೀಡಿದ್ದಾರೆ.

ಇನ್ನು, ಬೆಂಗಳೂರಿನ ವೈಯಾಲಿಕಾವಲ್ ಟಿಟಿಡಿ ದೇವಾಲಯದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯರಾತ್ರಿ 1:30 ರಿಂದ ಮಾರನೇ ದಿನ ರಾತ್ರಿ 11 ಘಂಟೆಯ ತನಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 80 ಸಾವಿರ ಭಕ್ತರು ಬರುವ ನಿರೀಕ್ಷೆ ಇದೆ. ಪ್ರತ್ಯೇಕ ಬ್ಯಾರಿಕೇಡ್ ಹಾಕಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಜಾವದಿಂದಲೇ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.

ನೆಲಮಂಗಲದ ಶ್ರೀದೇವಿ ಭೂದೇವಿ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. 800 ವರ್ಷಗಳಿಗೂ ಹಳೆಯದಾದ ಪುರಾತನ ದೇವಾಲಯವಿದು. ದೇವಾಲಯದ ಉತ್ತರ ಬಾಗಿಲ ಮೂಲಕ ಭಕ್ತರು ವೈಕುಂಠನ ದರ್ಶನ ಪಡೆಯುತ್ತಿದ್ದಾರೆ. ದೇವಾಲಯಕ್ಕೆ 25 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಬರುವ ನಿರೀಕ್ಷೆ ಇದೆ.

Shwetha M