ಭಾರತದ ಎರಡು ಕೆಮ್ಮಿನ ಸಿರಪ್ ಬಳಸಬೇಡಿ – ಉಜ್ಬೇಕಿಸ್ತಾನಕ್ಕೆ WHO ಶಿಫಾರಸು
ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಕಂಪೆನಿ ತಯಾರಿಸಿದ ಎರಡು ಕೆಮ್ಮಿನ ಸಿರಪ್‌ಗಳನ್ನು ಉಜ್ಬೇಕಿಸ್ತಾನದ ಮಕ್ಕಳು ಬಳಸದಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸು ಮಾಡಿದೆ. ವೈದ್ಯಕೀಯ ಉತ್ಪನ್ನ ಕುರಿತಾದ ಎಚ್ಚರಿಕೆಯನ್ನು ಬುಧವಾರ ಹೊರಡಿಸಿರುವ ಡಬ್ಲ್ಯೂಎಚ್‌ಒ, ಕೆಳದರ್ಜೆಯ ವೈದ್ಯಕೀಯ ಉತ್ಪನ್ನಗಳನ್ನು ಮರಿಯನ್ ಬಯೋಟೆಕ್ ತಯಾರಿಸಿದ್ದು, ಇವು ನಿಗದಿತ ಗುಣಮಟ್ಟ ಅಥವಾ ನಿರ್ದಿಷ್ಟ ಮಾನದಂಡಗಳನ್ನು ಮುಟ್ಟುವಲ್ಲಿ ವಿಫಲವಾಗಿವೆ. ಹೀಗಾಗಿ ಇವುಗಳು ನಿರ್ದಿಷ್ಟ ಅರ್ಹತೆಗಳಿಂದ ಹೊರತಾಗಿವೆ ಎಂದು ಹೇಳಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ತೀವ್ರವಾಗ್ತಿದೆ ಹಣದುಬ್ಬರ – ಆರ್ಥಿಕ ಬಿಕ್ಕಟ್ಟಿನಿಂದ ಜೀವನ ದುಸ್ತರ
ಗ್ಯಾಂಬಿಯಾದಲ್ಲಿ ಭಾರತ ಮೂಲದ ಔಷಧಿ ಕಂಪನಿ ತಯಾರಿಸಿದ ಕೆಮ್ಮಿನ ಔಷಧಿ ಕುಡಿದು ಮಕ್ಕಳು ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ, ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಉಜ್ಬೇಕಿಸ್ತಾನ್‌ನ ಆರೋಗ್ಯ ಸಚಿವಾಲಯವು ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಔಷಧಿಗಳನ್ನು ಸೇವಿಸಿ ದೇಶದಲ್ಲಿ 18 ಮಕ್ಕಳು ಸಾವನ್ನಪ್ಪಿರುವುದಾಗಿ ಹೇಳಿಕೊಂಡಿದೆ. ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ತಯಾರಿಸಿದ ಕೆಮ್ಮಿನ ಸಿರಪ್ ಕುಡಿದು ತೀವ್ರ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ್ ಆರೋಗ್ಯ ಸಚಿವಾಲಯ ಹೇಳಿತ್ತು.