ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಪಿಂಕ್ ಲೈನ್‌, ಬ್ಲೂ ಲೈನ್ ಮೆಟ್ರೋ ಆರಂಭಕ್ಕೆ ಮುಹೂರ್ತ ಫಿಕ್ಸ್!‌

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಪಿಂಕ್ ಲೈನ್‌, ಬ್ಲೂ ಲೈನ್ ಮೆಟ್ರೋ ಆರಂಭಕ್ಕೆ ಮುಹೂರ್ತ ಫಿಕ್ಸ್!‌

ಸಿಲಿಕಾನ್‌ ಸಿಟಿ ಮಂದಿಗೆ ನಮ್ಮ ಮೆಟ್ರೋ ಸಂಚಾರಕ್ಕೆ ಜೀವನಾಡಿಯಾಗಿದೆ. ನಿತ್ಯ ಲಕ್ಷಾಂತರ ಮಂದಿ ನಮ್ಮ ಮೆಟ್ರೋದಲ್ಲೇ ಪ್ರಯಾಣಿಸುತ್ತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್‌ ನಮ್ಮ ಮೆಟ್ರೋ ಮಾರ್ಗವನ್ನ ವಿಸ್ತರಿಸುತ್ತಲೇ ಇದೆ. ಇದೀಗ 2027ರ ಅಂತ್ಯದ ವೇಳೆಗೆ ಮೆಟ್ರೋ ಜಾಲ 175.55 ಕಿಲೋಮೀಟರ್‌ಗೆ ವಿಸ್ತರಿಸಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಭೀಮ ಜೊತೆ ಫೋಟೋ ತೆಗೆಸಿಕೊಂಡ್ರೆ ಹುಷಾರ್! – ಆನೆ ಹತ್ತಿರ ಹೋದ್ರೂ ಬೀಳುತ್ತೆ ಕೇಸ್!

ನಮ್ಮ ಮೆಟ್ರೋ ಮಾರ್ಗದ ಕಾಮಕಾರಿಗಳು ವೇಗವಾಗಿ ಸಾಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಡುಗಡೆ ಮಾಡಿದ ಪ್ರಗತಿ ವರದಿಯ ಪ್ರಕಾರ, 2027ರ ಅಂತ್ಯದ ವೇಳೆಗೆ ಮೆಟ್ರೋ ಜಾಲ 175.55 ಕಿಲೋಮೀಟರ್‌ಗೆ ವಿಸ್ತರಿಸಲಿದೆ. ಈ ವಿಸ್ತರಣೆಯಿಂದ ನಗರದಲ್ಲಿನ ವಾಹನ ದಟ್ಟಣೆ ಕಡಿಮೆಯಾಗುವ ಜೊತೆಗೆ ಸಾರ್ವಜನಿಕರಿಗೆ ವೇಗದ ಹಾಗೂ ಸುರಕ್ಷಿತ ಸಂಚಾರ ವ್ಯವಸ್ಥೆ ಲಭ್ಯವಾಗಲಿದೆ.

ಪಿಂಕ್‌ ಲೈನ್‌ ಮೆಟ್ರೋ ಸಂಚಾರಕ್ಕೆ ಮುಹೂರ್ತ ಫಿಕ್ಸ್!‌

ಬನ್ನೇರುಘಟ್ಟ ರಸ್ತೆಯಿಂದ ನಾಗವಾರದವರೆಗೆ ಸಾಗುವ ಪಿಂಕ್ ಲೈನ್ ಕಾಮಗಾರಿ ಈಗ ಅಂತಿಮ ಹಂತದಲ್ಲಿದೆ. ಈ ಮಾರ್ಗವನ್ನು ಎರಡು ಹಂತಗಳಲ್ಲಿ ಸಾರ್ವಜನಿಕರ ಬಳಕೆಗೆ ತೆರೆಯಲಾಗುತ್ತದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಏರಿಸಿದ ಮಾರ್ಗವನ್ನು ಮೇ 2026ರ ವೇಳೆಗೆ ಆರಂಭಿಸುವ ನಿರೀಕ್ಷೆ ಇದೆ. ಇದು ದಕ್ಷಿಣ ಬೆಂಗಳೂರಿನ ಜನರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ.

ಪಿಂಕ್ ಲೈನ್‌ನ ಡೈರಿ ವೃತ್ತದಿಂದ ನಾಗವಾರದವರೆಗಿನ 13.76 ಕಿ.ಮೀ ಸುರಂಗ ಮಾರ್ಗವು ನಗರದ ಪ್ರಮುಖ ಭಾಗಗಳನ್ನು ಸಂಪರ್ಕಿಸುತ್ತದೆ. ಈ ಭಾಗದ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಡಿಸೆಂಬರ್ 2026ಕ್ಕೆ ಸಂಚಾರ ಆರಂಭವಾಗಲಿದೆ. ಈ ಮಾರ್ಗವು ನಗರ ಮಧ್ಯಭಾಗದ ಸಂಚಾರದ ಒತ್ತಡವನ್ನು ಬಹಳಷ್ಟು ಕಡಿಮೆ ಮಾಡಲಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬ್ಲೂ ಲೈನ್ ಮೆಟ್ರೋ ಯೋಜನೆ ಬಹು ನಿರೀಕ್ಷಿತವಾಗಿದೆ. ಹೊರ ವರ್ತುಲ ರಸ್ತೆಯ ಅತಿ ಹೆಚ್ಚು ಟ್ರಾಫಿಕ್ ಇರುವ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೃಷ್ಣರಾಜಪುರವರೆಗಿನ 19.75 ಕಿ.ಮೀ ಮಾರ್ಗವನ್ನು ಡಿಸೆಂಬರ್ 2026ಕ್ಕೆ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಮಾರ್ಗದಿಂದ ಐಟಿ ಉದ್ಯೋಗಿಗಳ ದಿನನಿತ್ಯದ ಪ್ರಯಾಣ ಸುಲಭವಾಗಲಿದೆ.

ಏರ್ಪೋರ್ಟ್ ಮೆಟ್ರೋ ಜೂನ್ 2027ಕ್ಕೆ ಚಾಲನೆ

ಹೆಬ್ಬಾಳದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ 27 ಕಿ.ಮೀ ಉದ್ದದ ಮೆಟ್ರೋ ಮಾರ್ಗವು ಜೂನ್ 2027ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಈ ಮಾರ್ಗದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ವೇಗದ ಮತ್ತು ನಂಬಿಕೆಯ ಸಾರಿಗೆ ವ್ಯವಸ್ಥೆ ದೊರೆಯಲಿದೆ.

 ಹೆಬ್ಬಾಳಕೃಷ್ಣರಾಜಪುರ ಸಂಪರ್ಕ ಮಾರ್ಗ

ಬ್ಲೂ ಲೈನ್‌ನ ಭಾಗವಾಗಿರುವ ಹೆಬ್ಬಾಳದಿಂದ ಕೃಷ್ಣರಾಜಪುರವರೆಗೆ 11 ಕಿ.ಮೀ ಸಂಪರ್ಕ ಮಾರ್ಗದ ಕಾಮಗಾರಿ ಡಿಸೆಂಬರ್ 2027ಕ್ಕೆ ಪೂರ್ಣಗೊಳ್ಳಲಿದೆ. ಈ ಮಾರ್ಗವು ಉತ್ತರ ಮತ್ತು ಪೂರ್ವ ಬೆಂಗಳೂರಿನ ನಡುವೆ ಉತ್ತಮ ಸಂಪರ್ಕ ಒದಗಿಸಲಿದೆ.

ಸರ್ಜಾಪುರಹೆಬ್ಬಾಳ ಮೆಟ್ರೋ 3A ಯೋಜನೆ

ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ ಉದ್ದದ ಮೆಟ್ರೋ 3A ಮಾರ್ಗದ ಯೋಜನೆ ಸಿದ್ಧವಾಗಿದೆ. ಈ ಮಾರ್ಗದಲ್ಲಿ 28 ನಿಲ್ದಾಣಗಳು ಇರಲಿದ್ದು, ಬಹುಪಾಲು ಮೇಲ್ಸೇತುವೆ ಮತ್ತು ಸುರಂಗ ಮಾರ್ಗವಾಗಿ ನಿರ್ಮಾಣವಾಗಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಕೋರಲಾಗಿದೆ. ಬೆಂಗಳೂರು ಮೇಲಿನ ಸಂಚಾರದ ಒತ್ತಡ ಕಡಿಮೆ ಮಾಡಲು ಪ್ರಾದೇಶಿಕ ಕ್ಷಿಪ್ರ ಸಂಚಾರ ವ್ಯವಸ್ಥೆ ಹಾಗೂ ಸ್ಯಾಟಲೈಟ್ ಪಟ್ಟಣಗಳ ಅಭಿವೃದ್ಧಿ ಕುರಿತು ಕೂಡ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗಿದೆ. ಬೆಂಗಳೂರು ಬಲಿಷ್ಠವಾಗಿದ್ದರೆ.

ಮೆಟ್ರೋ ಹಂತ-2 ಯೋಜನೆಯ ವೆಚ್ಚ ಏರಿಕೆ

ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದಂತೆ, ಮೆಟ್ರೋ ಹಂತ-2 ಯೋಜನೆಯ ಡಿಪಿಆರ್ 2010ರಲ್ಲಿ ತಯಾರಾಗಿತ್ತು. ಆಗ ಸುಮಾರು 26 ಸಾವಿರ ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು, ಆದರೆ ಈಗ ಅದು 40 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಭೂಸ್ವಾಧೀನಕ್ಕೆ ಮಾತ್ರವೇ 2,500 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಿದೆ. ಈ ಯೋಜನೆಯನ್ನು 2026ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.

Shwetha M