O+ ರಕ್ತದ ಬದಲಾಗಿ A+ ರಕ್ತ ಕೊಟ್ಟ ಭೂಪ – ಲ್ಯಾಬ್ ಟೆಕ್ನಿಷಿಯನ್ ಎಡವಟ್ಟಿಗೆ ರೋಗಿ ಸ್ಥಿತಿ ಗಂಭೀರ

O+ ರಕ್ತದ ಬದಲಾಗಿ A+ ರಕ್ತ ಕೊಟ್ಟ ಭೂಪ –  ಲ್ಯಾಬ್ ಟೆಕ್ನಿಷಿಯನ್ ಎಡವಟ್ಟಿಗೆ ರೋಗಿ ಸ್ಥಿತಿ ಗಂಭೀರ

ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ  ದೊಡ್ಡ ಎಡವಟ್ಟು ನಡೆದಿದೆ. ರಕ್ತಹೀನತೆ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರ ಸ್ಥಿತಿ ಗಂಭೀರವಾಗಿದೆ. ತಪ್ಪು ರಕ್ತ ನೀಡಿದ್ದರ ಪರಿಣಾಮ ರೋಗಿಯ ಆರೋಗ್ಯ ತೀವ್ರ ಹದಗೆಟ್ಟಿದೆ. ತಕ್ಷಣ ಅವರನ್ನು ಐಸಿಯುವಿಗೆ ಸ್ಥಳಾಂತರಿಸಿ ತುರ್ತು ಚಿಕಿತ್ಸೆ ನೀಡಲಾಗಿದ್ದು, ಈ ಕುರಿತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುನೀತ್ ಸೂರ್ಯ ಎಂಬ ರೋಗಿ ರಕ್ತಹೀನತೆ ಚಿಕಿತ್ಸೆ ಪಡೆಯಲು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದರು. O+  ರಕ್ತದ ಗುಂಪಿನವರಾಗಿದ್ದು, ಲ್ಯಾಬ್ ಟೆಕ್ನಿಷಿಯನ್ ನಿರ್ಲಕ್ಷ್ಯದಿಂದಾಗಿ ತಪ್ಪಾಗಿ ಎ ಪಾಸಿಟಿವ್  A+  ರಕ್ತ ನೀಡಲಾಗಿದ್ದು, ಪುನೀತ್ ಸ್ಥಿತಿ ಗಂಭೀರವಾಗಿತ್ತು. ಐಸಿಯುವಿನಲ್ಲಿ ಮುಂದುವರಿದ ಚಿಕಿತ್ಸೆಯಿಂದ ಇದೀಗ ಅವರ ಆರೋಗ್ಯ ಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ. ಈ ಎಡವಟ್ಟಿಗೆ ಕಾರಣವಾದ ಲ್ಯಾಬ್ ಟೆಕ್ನಿಷಿಯನ್ ಉಮೇಶ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಮೇರೆಗೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕಿತ್ತೊಗಿರೋ ಕಾಮೆಂಟ್ಸ್‌ಗೆ ನಾನು ತಲೆ ಕೆಡಿಸಿಕೊಳ್ಳಲ್ಲ! – ಮಗಳು ಸಾನ್ವಿ ಬಗ್ಗೆ ಕೆಟ್ಟ ಕಮೆಂಟ್‌ ಮಾಡಿದವರಿಗೆ ಕಿಚ್ಚನ ವಾರ್ನ್‌!

O+ ರಕ್ತದ ಗುಂಪಿನವರಿಗೆ A ರಕ್ತಕಣಗಳ ವಿರುದ್ಧ ಪ್ರತಿಕಾಯಗಳು  ಇರುತ್ತವೆ. ಆದ್ದರಿಂದ A+ ರಕ್ತ ನೀಡಿದಾಗ ದೇಹದ ರೋಗನಿರೋಧಕ ವ್ಯವಸ್ಥೆ, ರೋಗಿಗೆ ನೀಡಿದ ರಕ್ತವನ್ನು ಪರಕೀಯವೆಂದು ಗುರುತಿಸಿ ತಕ್ಷಣ ದಾಳಿ ಮಾಡುತ್ತದೆ. ಇದರಿಂದ ರೋಗಿಯ ದೇಹದಲ್ಲಿ ಅಪಾಯಕಾರಿ ಪ್ರತಿಕ್ರಿಯೆ ಉಂಟಾಗಬಹುದು. ಇದರಿಂದಾಗಿ ಜ್ವರ, ಉಸಿರಾಟದ ತೊಂದರೆ, ಎದೆನೋವು, ರಕ್ತದೊತ್ತಡ ಕುಸಿತ, ಮೂತ್ರಪಿಂಡಗಳ ವೈಫಲ್ಯ ಹಾಗೂ ಕೆಲ ಸಂದರ್ಭಗಳಲ್ಲಿ ಜೀವಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ.

Kishor KV