ಕೋಗಿಲು ಲೇಔಟ್ ಬಳಿ ಮನೆ ತೆರವು – ಆರೋಪ ಮಾಡಿದ ಪಿಣರಾಯಿ ವಿಜಯನ್‌ಗೆ ಡಿಸಿಎಂ ಡಿಕೆಶಿ ಡಿಚ್ಚಿ

ಕೋಗಿಲು ಲೇಔಟ್ ಬಳಿ ಮನೆ ತೆರವು – ಆರೋಪ ಮಾಡಿದ ಪಿಣರಾಯಿ ವಿಜಯನ್‌ಗೆ ಡಿಸಿಎಂ ಡಿಕೆಶಿ ಡಿಚ್ಚಿ

ಬೆಂಗಳೂರು ಉತ್ತರದ ಕೋಗಿಲು ಲೇಔಟ್ ಬಳಿ ನಡೆದ ಮನೆಗಳ ತೆರವು ಪ್ರಕರಣದ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ವಾಸ್ತವ ಅರಿಯದೆ ಪ್ರತಿಕ್ರಿಯಿಸಿದ್ದಾರೆ ಎಂದು  ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಪಿಣರಾಯಿ ವಿಜಯನ್ ಅವರ ‘ಬುಲ್ಡೋಜರ್ ರಾಜ್’ ಎಕ್ಸ್ ಸಂದೇಶಕ್ಕೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ಪಿಣರಾಯಿ ವಿಜಯನ್ ಹಿರಿಯ ನಾಯಕರು. ಆದರೆ ಸ್ಥಳೀಯ ವಿಚಾರಗಳನ್ನು, ಸತ್ಯ ಸಂಗತಿಯನ್ನು ತಿಳಿಯದೇ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಕೋಗಿಲು ಲೇಔಟ್ ಬಳಿ ಕೆಲವು ಜನರು ಬಿಬಿಎಂಪಿಗೆ ಸೇರಿದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಜಾಗವನ್ನು ಕಸದ ವಿಲೇವಾರಿಗೆ ಮೀಸಲಿಟ್ಟ 5 ಎಕರೆ ಪ್ರದೇಶವಾಗಿದ್ದು, ಅಕ್ರಮ ಒತ್ತುವರಿಯನ್ನು ಕಾನೂನುಬದ್ಧವಾಗಿ ತೆರವುಗೊಳಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಹಿರಿಯೂರು ಬಸ್ ದುರಂತ ಬೆನ್ನಲ್ಲೇ ಸರ್ಕಾರ ಅಲರ್ಟ್ – ರಾತ್ರಿ ವೇಳೆ ಬಸ್‌ ಸಂಚಾರ ಸ್ಟಾಪ್?‌ 

ಯಾರನ್ನೂ ಮನೆ ಕಳೆದುಕೊಳ್ಳುವಂತೆ ಮಾಡಿಲ್ಲ. ಮನೆ ಕಳೆದುಕೊಂಡವರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಹಂಚಿಕೆ ಮಾಡಲಾಗುತ್ತಿದೆ. ನಾವು ಬುಲ್ಡೋಜರ್ ರಾಜಕಾರಣವನ್ನು ಪಾಲಿಸುವುದಿಲ್ಲ. ಕಾನೂನುಬದ್ಧ ಪ್ರಕ್ರಿಯೆಯಲ್ಲೇ ತೆರವು ಕಾರ್ಯ ನಡೆದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ವಿಷಯವನ್ನು ನಮ್ಮ ಪಕ್ಷದ ನಾಯಕರಿಗೂ ತಿಳಿಸಲಾಗಿದೆ. ಇಲ್ಲಿನ ಸ್ಥಿತಿಗತಿಗಳನ್ನು ಅರಿಯದೇ ಆರೋಪ ಮಾಡುವುದು ಸರಿಯಲ್ಲ ಎಂದು ಪಿಣರಾಯಿ ವಿಜಯನ್ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂತಹ ಪ್ರತಿಕ್ರಿಯೆ ಮೂಡಿ ಬಂದಿರುವುದು ರಾಜಕೀಯ ಗಿಮಿಕ್ ಆಗಿರಬಹುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಸರ್ಕಾರದ ಜಾಗದಲ್ಲಿ ಅಕ್ರಮ ಸ್ಲಂ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ.

ಮನೆ ತೆರವು ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ಡಿಕೆ ಶಿವಕುಮಾರ್ ವಿವರವಾದ ವರದಿಯನ್ನು ಸಲ್ಲಿಸಿದ್ದಾರೆ. ವರದಿಯಲ್ಲಿ ಕೋಗಿಲು ಲೇಔಟ್‌ನಲ್ಲಿ ಬಿಬಿಎಂಪಿಗೆ ಸೇರಿದ 5 ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಈ ಅಕ್ರಮ ತೆರವು ಕಾನೂನುಬದ್ಧವಾಗಿ ನಡೆದಿದೆ. ಅಕ್ರಮವಾಗಿ ವಾಸಿಸುತ್ತಿದ್ದವರಲ್ಲಿ ಬಹುತೇಕರು ಅಲ್ಪಸಂಖ್ಯಾತ ಸಮುದಾಯದವರು ಎಂಬ ಮಾಹಿತಿಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Kishor KV