ಶ್ರೀಲಂಕಾ ವಿರುದ್ಧ ಟೀಂ IND ಅಬ್ಬರ – 3ನೇ ಟಿ20I ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ ಮಹಿಳಾ ತಂಡ

ಶ್ರೀಲಂಕಾ ವಿರುದ್ಧ ಟೀಂ IND ಅಬ್ಬರ – 3ನೇ ಟಿ20I ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ ಮಹಿಳಾ ತಂಡ

ಭರವಸೆಯ ಬ್ಯಾಟರ್‌ ಶೆಫಾಲಿ ವರ್ಮಾ ಬಾರಿಸಿದ ಅರ್ಧಶತಕ ಹಾಗೂ ರೇಣುಕಾ ಸಿಂಗ್‌ ಅವರ ಬಿಗುವಿನ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಮಹಿಳಾ ತಂಡ ಮೂರನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಭಾರತ ಐದು ಟಿ20 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ಇನ್ನು ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿಯನ್ನು ವಶಕ್ಕೆ ಪಡೆದಿದೆ.

ಇದನ್ನೂ ಓದಿ: ಅರಮನೆ ಬಳಿ ಭಾರಿ ಭದ್ರತಾ ಲೋಪ? – ಸಿಸಿಟಿವಿ ಇದ್ರೂ ಸೆರೆಯಾಗಿಲ್ಲ ಸ್ಫೋ*ಟದ ದೃಶ್ಯ!
ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ಹಾಸಿನಿ ಪೆರೇರಾ ಹಾಗೂ ನಾಯಕಿ ಚಾಮರಿ ಅಟ್ಟಪಟ್ಟು ಜೋಡಿ ಸಾಧಾರಣ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 27 ಎಸೆತಗಳಲ್ಲಿ 25 ರನ್‌ ಸೇರಿಸಿತು. ಮಧ್ಯಮ ಕ್ರಮಾಂಕದಲ್ಲಿ ಹರ್ಷಿತಾ ಸಮರವಿಕ್ರಮ (2) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಹಾಸಿನಿ ಪೆರೇರಾ 18 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 25 ರನ್‌ ಸೇರಿಸಿದರು. ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಇಮೇಷಾ ದುಲಾನಿ ಹಾಗೂ ಕವಿಶಾ ದಿಲ್ಹಾರಿ ಐದನೇ ವಿಕೆಟ್‌ಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಅಲ್ಲದೆ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಈ ಜೋಡಿ 26 ಎಸೆತಗಳಲ್ಲಿ 40 ರನ್‌ ಸೇರಿಸಿತು. ಕವಿಶಾ ದಿಲ್ಹಾರಿ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 20 ರನ್‌ ಸಿಡಿಸಿ ಮಿಂಚಿದರು. ಇಮೇಷಾ ದುಲಾನಿ 4 ಬೌಂಡರಿ ನೆರವಿನಿಂದ 27 ರನ್‌ ಸಿಡಿಸಿದರು. ಕೌಶಾನಿ ನುತ್ಯಂಗನ 19 ರನ್‌ ಸಿಡಿಸಿ ಔಟ್ ಆದರು. ಅಂತಿಮವಾಗಿ ಶ್ರೀಲಂಕಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 112 ರನ್‌ ಸಿಡಿಸಿತು. ಟೀಮ್ ಇಂಡಿಯಾದ ಪರ ವೇಗದ ಬೌಲರ್‌ ರೇಣುಕಾ ಸಿಂಗ್‌ 21 ರನ್‌ಗಳಿಗೆ 4 ವಿಕೆಟ್‌ ಪಡೆದರು. ದೀಪ್ತಿ ಶರ್ಮಾ 18 ರನ್‌ಗಳಿಗೆ 3 ವಿಕೆಟ್‌ ಕಬಳಿಸಿದರು. ಶೆಫಾಲಿ ಅಬ್ಬರ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಸಹ ಕಳಪೆಯಾಗಿತ್ತು. ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಜೋಡಿ ಮೊದಲ ವಿಕೆಟ್‌ಗೆ 27 ರನ್‌ ಸೇರಿಸಿತು. ಈ ವೇಳೆ ಸ್ಮೃತಿ ಮಂಧಾನ ಕೇವಲ 1 ರನ್‌ಗಳಿಗೆ ಆಟ ಮುಗಿಸಿದರು. ಎರಡನೇ ವಿಕೆಟ್‌ಗೆ ಜೆಮಿಮಾ ರೋಡ್ರಿಗಸ್‌ (9) ಹಾಗೂ ಶೆಫಾಲಿ ವರ್ಮಾ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 29 ಎಸೆತಗಳಲ್ಲಿ 40 ರನ್‌ ಕಾಣಿಕೆ ನೀಡಿತು. ಈ ಜೊತೆಯಾಟದಲ್ಲೂ ಶೆಫಾಲಿ ವರ್ಮಾ ಅವರ ಕಾಣಿಕೆ ದೊಡ್ಡದಾಗಿತ್ತು. ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ 42 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 79 ರನ್‌ ಬಾರಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್‌ ಅಜೇಯ 21 ರನ್‌ ಸಿಡಿಸಿ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಭಾರತ ಮಹಿಳಾ ತಂಡ 13.2 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 115 ರನ್‌ ಸೇರಿಸಿ ಜಯ ಸಾಧಿಸಿತು.

Kishor KV