RCBಗೆ ಬಿಸಿತುಪ್ಪವಾದ ಯಶ್ ದಯಾಳ್ – ಬೇಲ್ ಅರ್ಜಿ ವಜಾ.. ಅರೆಸ್ಟ್ ಆಗ್ತಾರಾ?
IPLನಿಂದಲೇ ಬ್ಯಾನ್ ಆದ್ರೆ ಮುಂದೇನು?

2026ರ ಐಪಿಎಲ್ಗೆ ಆರ್ಸಿಬಿ ತುಂಬಾನೇ ಸ್ಟ್ರಾಂಗ್ ಆಗಿ ರೆಡಿ ಆಗಿದೆ.. ಮಿನಿ ಆಕ್ಷನ್ ಆದ್ಮೇಲಂತೂ ಬ್ಯಾಟಿಂಗ್ ಮತ್ತು ಬೌಲಿಂಗ್ ಇನ್ನೂ ಸೂಪರ್ ಸ್ಟ್ರಾಂಗ್ ಆಗಿದೆ. ವರ್ಲ್ಡ್ ಕ್ಲಾಸ್ ಪ್ಲೇಯರ್ಗಳೇ ತಂಡದಲ್ಲಿ ಇರೋದ್ರಿಂದ 19ನೇ ಆವೃತ್ತಿಯಲ್ಲಿ ಟ್ರೋಫಿ ಗೆಲ್ಲುವಂಥ ಫೇವರೆಟ್ ಟೀಂ ಎನಿಸಿಕೊಳ್ತಿದೆ. ಆದ್ರೀಗ ಆರ್ಸಿಬಿ ಆಟಗಾರ ಯಶ್ ದಯಾಳ್ ಬಂಧನದ ಭೀತಿಯಲ್ಲಿದ್ದಾರೆ. ಫ್ರಾಂಚೈಸಿಗೂ ತಲೆಬಿಸಿ ತಂದಿಟ್ಟಿದ್ದಾರೆ.
ಇದನ್ನೂ ಓದಿ : VHTಯಲ್ಲೂ RO-KO ರೌದ್ರಾವತಾರ – BCCI ಚಳಿ ಬಿಡಿಸಿದ ಸೆಂಚುರಿ ಸಿಡಿಲು
ಯಶ್ ದಯಾಳ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ. 2023ರ ಐಪಿಎಲ್ನಲ್ಲಿ ರಿಂಕು ಸಿಂಗ್ಗೆ ಒಂದೇ ಓವರ್ನಲ್ಲಿ 5 ಸಿಕ್ಸ್ ಹೊಡೀತಿದ್ದಂತೆ ದಯಾಳ್ ಕರಿಯರ್ ಮುಗ್ದೇ ಹೋಯ್ತೇನೋ ಅನ್ನೋ ಚರ್ಚೆ ಶುರುವಾಗಿತ್ತು. ಇಂಥಾ ಟೈಮಲ್ಲಿ ಪುನರ್ಜನ್ಮ ನೀಡಿದ್ದೇ ಬೆಂಗಳೂರು ತಂಡ. ಬಿದ್ದ ನೆಲದಲ್ಲೇ ಗೆದ್ದು ತೋರಿಸ್ಬೇಕು ಅಂತಾ ಯಾವ ಐಪಿಎಲ್ನಲ್ಲಿ ಟ್ರೋಲ್ ಆಗಿದ್ರೋ ಅದೇ ಐಪಿಎಲ್ನಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ರು. ಆರ್ಸಿಬಿ ತಂಡದ ಪ್ರಮುಖ ಆಟಗಾರನಾಗಿರೋ ಯಶ್ ದಯಾಳ್ 18ನೇ ಸೀಸನ್ ಐಪಿಎಲ್ನಲ್ಲಿ ಬೆಂಗಳೂರು ಟೀಂ ಟ್ರೋಫಿ ಗೆಲ್ಲೋಕೆ ಇವ್ರ ಪ್ರದರ್ಶನವೂ ಕಾರಣ. 2024ರಲ್ಲಿ 5 ಕೋಟಿ ರೂಪಾಯಿಗೆ ಆರ್ಸಿಬಿ ಸೇರಿದ್ದ ದಯಾಳ್ರನ್ನ 2025 ಹಾಗೇ 26ಕ್ಕೂ ಆರ್ಸಿಬಿ ಉಳಿಸಿಕೊಂಡಿದೆ. ಕಳೆದ ಸೀಸನ್ನಲ್ಲಿ ದಯಾಳ್ 15 ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದರು ಮತ್ತು ಆರ್‌ಸಿಬಿಯ ಚೊಚ್ಚಲ ಐಪಿಎಲ್ 2025 ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೀಗ ದಯಾಳ್ ಬಂಧನ ಭೀತಿಯಲ್ಲಿದ್ದು ಫ್ರಾಂಚೈಸಿಯೂ ಗೊಂದಲದಲ್ಲಿದೆ.
ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್!
2025ರ ಐಪಿಎಲ್ ಆದ್ಮೇಲೆ ಯಶ್ ದಯಾಳ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು. ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿರೋ ಆರೋಪ ಎದುರಿಸುತ್ತಿದ್ದಾರೆ. ಸದ್ಯ ಕೇಸ್ ಕೋರ್ಟ್ನಲ್ಲಿದ್ದು ಇದೀಗ ಯಶ್ ದಯಾಳ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜೈಪುರ ಪೋಕ್ಸೊ ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಯಶ್ ದಯಾಳ್ಗೆ ಬಂಧನ ಭೀತಿ ಎದುರಾಗಿದೆ. ಜೈಪುರ ಮೆಟ್ರೋಪಾಲಿಟನ್ ನ್ಯಾಯಾಲಯದ ನ್ಯಾಯಾಧೀಶೆ ಅಲ್ಕಾ ಬನ್ಸಾಲ್ ಅವರು ಆದೇಶ ಹೊರಡಿಸಿದ್ದಾರೆ. ದೂರಿನ ದಾಖಲೆಯಲ್ಲಿರುವ ವಿಷಯಗಳು ಯಶ್ ದಯಾಳ್ ಅವರನ್ನು ತಪ್ಪಾಗಿ ಆರೋಪಿಸಲಾಗಿದೆ ಎಂದು ಸೂಚಿಸುವುದಿಲ್ಲ. ಇದುವರೆಗಿನ ತನಿಖೆಯು ದಯಾಳ್ ಅವ್ರು ಆರೋಪದಲ್ಲಿ ಭಾಗಿಯಾಗಿರೋದನ್ನೇ ತೋರಿಸುತ್ತಿದೆ. ಹೀಗಾಗಿ ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ನೀಡಲಾಗುವುದಿಲ್ಲ ಎಂದಿದ್ದಾರೆ.
ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರೋ ಎಫ್‌ಐಆರ್ ಪ್ರಕಾರ ಹಲವು ಅಂಶಗಳನ್ನ ಉಲ್ಲೇಖಿಸಲಾಗಿದೆ. ಅಪ್ರಾಪ್ತೆಯೊಬ್ಬಳು ತನ್ನ ಕ್ರಿಕೆಟ್ ವೃತ್ತಿಜೀವನಕ್ಕೆ ಸಹಾಯ ಮಾಡುವುದಾಗಿ ಯಶ್ ದಯಾಳ್ ಆಮಿಷವೊಡ್ಡಿದ್ದಾರೆ. ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಮತ್ತು ಜೈಪುರ ಮತ್ತು ಕಾನ್ಪುರದ ಹೋಟೆಲ್‌ಗಳು ಸೇರಿದಂತೆ ಹಲವಾರು ಕಡೆ ಸುಮಾರು ಎರಡೂವರೆ ವರ್ಷಗಳಿಂದ ನನ್ನ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ್ರು. ಬಳಿಕ ಪೊಲೀಸರು ಸಂತ್ರಸ್ತೆಯ ಮೊಬೈಲ್‌ಪರಿಶೀಲನೆ ವೇಳೆ ಇಬ್ಬರ ನಡುವೆ ನಡೆದಿರುವ ಚಾಟ್‌ಗಳು, ಫೋಟೊಗಳು ಮತ್ತು ವಿಡಿಯೋಗಳು, ಫೋನ್ ಕಾಲ್ ರೆಕಾರ್ಡ್ಸ್, ಹೋಟೆಲ್ನಲ್ಲಿ ಸ್ಟೇ ಆಗಿದ್ದ ರೆಕಾರ್ಡ್ಸ್ ಎಲ್ಲವನ್ನೂ ಪೋಕ್ಸೊ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದ್ದಾರೆ. ಕೋರ್ಟ್ ಕೂಡ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿರೋದ್ರಿಂದ ದಯಾಳ್ ಬಂಧನದ ಭೀತಿಯಲ್ಲಿದ್ದಾರೆ.
ದಯಾಳ್ ರನ್ನು ಉಳಿಸಿಕೊಂಡಿದ್ದಕ್ಕೆ ಫ್ಯಾನ್ಸ್ ಆಕ್ರೋಶ!
ಇನ್ನು ಇದೆಲ್ಲದ್ರ ನಡುವೆ ಇಂಥಾ ಗಂಭೀರ ಆರೋಪ ಕೇಳಿ ಬಂದ ಮೇಲೂ ಯಶ್ ದಯಾಳ್ರನ್ನ 2026ರ ಐಪಿಎಲ್ಗೆ ಉಳಿಸಿಕೊಂಡಿರೋ ಆರ್ಸಿಬಿ ಫ್ರಾಂಚೈಸಿಯ ನಡೆ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಅವರನ್ನು ಬಂಧಿಸಿದರೆ ಅಥವಾ ತನಿಖೆ ಚುರುಕುಗೊಂಡರೆ, ಯಶ್ ದಯಾಳ್ ಅವರನ್ನು ಐಪಿಎಲ್ 2026 ರಿಂದ ತೆಗೆದುಹಾಕುವ ಸಾಧ್ಯತೆಯಿದೆ. ಅಲ್ದೇ ಆರೋಪ ಕೇಳಿ ಬಂದ ಮೇಲೆ ಯಶ್ ದಯಾಳ್ರನ್ನ ಯುಪಿ ಕ್ರಿಕೆಟ್ ಅಸೋಸಿಯೇಷನ್ ಬ್ಯಾನ್ ಮಾಡಿತ್ತು. ಹೀಗಾಗಿ 2025 ರ ಐಪಿಎಲ್ ಫೈನಲ್ ನಂತರ ದಯಾಳ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಹಾಗೇನಾದ್ರೂ ದಯಾಳ್ ತಪ್ಪು ಮಾಡಿದ್ದು ಸಾಬೀತಾದ್ರೆ ಐಪಿಎಲ್ನಲ್ಲಿ ದಯಾಳ್ರನ್ನ ಬ್ಯಾನ್ ಮಾಡೋ ಅವಕಾಶ ಐಪಿಎಲ್ ಆಡಳಿತ ಮಂಡಳಿಗೆ ಇದೆ. ಅಥವಾ ಆರ್ಸಿಬಿ ಫ್ರಾಂಚೈಸಿಯೇ ಪಂದ್ಯಗಳಲ್ಲಿ ಭಾಗಿಯಾಗದಂತೆ ನಿಷೇಧವನ್ನೂ ಹೇರಬಹುದು. 2013 ರಲ್ಲಿ, ಶ್ರೀಶಾಂತ್ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿತ್ತು. ಶಿಕ್ಷೆ ವಿಧಿಸುವ ಮೊದಲೇ ಅವರನ್ನು ನಿಷೇಧಿಸಲಾಗಿತ್ತು. ಸೋ ಈಗ ದಯಾಳ್ ವಿಚಾರದಲ್ಲಿ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳುತ್ತೆ. 2026ರ ಐಪಿಎಲ್ನಲ್ಲಿ ಆಡ್ತಾರಾ ಅನ್ನೋದೇ ಅತಿದೊಡ್ಡ ಪ್ರಶ್ನೆಯಾಗಿದೆ. ಹಾಗೇ ತಂಡದಲ್ಲೇ ಉಳಿಸಿಕೊಂಡಿರೋ ಆರ್ಸಿಬಿ ಫ್ರಾಂಚೈಸಿ ನಡೆಯೂ ಅಸಮಾಧಾನಕ್ಕೆ ಕಾರಣವಾಗಿದೆ.

ನೋಡಿರಿ

