ಹಾಸನದಲ್ಲಿ ಮಗುವಿಗೆ ಜನ್ಮ ನೀಡಿದ 10ನೇ ತರಗತಿ ಬಾಲಕಿ – ಎತ್ತ ಸಾಗುತ್ತಿದೆ ನಮ್ಮ ಸಮಾಜ?

ಹಾಸನದಲ್ಲಿ ಮಗುವಿಗೆ ಜನ್ಮ ನೀಡಿದ 10ನೇ ತರಗತಿ ಬಾಲಕಿ –  ಎತ್ತ ಸಾಗುತ್ತಿದೆ ನಮ್ಮ ಸಮಾಜ?

ಅಪ್ರಾಪ್ತ ಬಾಲಕಿಯೊಬ್ಬಳಿಗೆ ನಿತ್ಯ ಚಾಕೋಲೆಟ್​ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಹಾಸನ ಜಿಲ್ಲೆಯ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿಯೆಂದು ತಿಳಿದು ಬಂದಿದ್ದು, ಮಗು ಮತ್ತು ತಾಯಿ ಆರೋಗ್ಯವಾಗಿರುವುದಾಗಿ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಹಾಸನ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯ ಮೇಲೆ ಅದೇ ಶಾಲೆಯಲ್ಲಿ ವಾಹನ ಚಾಲಕನಾಗಿದ್ದ ರಂಜಿತ್ ಎಂಬಾತ 8 ತಿಂಗಳಿನಿಂದ ಲೈಂಗಿಕ ದೌರ್ಜನ್ಯವೆಸಗಿದ್ದು, ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆರೋಪಿಯನ್ನ ಚನ್ನರಾಯಪಟ್ಟಣ ನಗರಠಾಣೆಯ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅಲ್ಲದೇ, ನ್ಯಾಯಾಂಗ ಬಂಧನಕ್ಕೂ ಒಪ್ಪಿಸಿದ್ದಾರೆ. ಇನ್ನು ಬಾಲಕಿ ಮತ್ತು ಮಗುವನ್ನು ಕೆಲ ದಿನಗಳ ಕಾಲ ಆರೈಕೆ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದ್ರಕ್ಕೆ ಶೀಘ್ರ ಒಪ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹಾಸನ ಡಿಹೆಚ್​ಒ ಅನಿಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಮೈ ನಡುಗಿಸುವ ಚಳಿಯಲ್ಲೂ ಕೈ ಸುಡುತ್ತಿದೆ ಮಟನ್ ದರ! – ಹೊಸ ವರ್ಷದ ಹೊಸ್ತಿಲಲ್ಲ ಮಾಂಸಪ್ರಿಯರಿಗೆ ಶಾಕ್!‌

ಇಂತಹದ್ದೇ ಘಟನೆ ಇತ್ತೀಚೆಗೆ ಕೊಪ್ಪಳ ಜಿಲ್ಲೆಯಿಂದ ಕೇಳಿ ಬಂದಿತ್ತು. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಒಂದರ ಬಿಸಿಎಂ ಬಾಲಕಿಯರ ವಿದ್ಯಾರ್ಥಿ ನಿಲಯದ 10ನೇ ತರಗತಿ ಓದುತ್ತಿರುವ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಕರ್ತವ್ಯ ಲೋಪದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಬ್ಬರು ವೈದ್ಯಾಧಿಕಾರಿಗಳ ಮೇಲೂ ಎಫ್‌ಐಆ‌ರ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನೂ ಬಂಧಿಸಲಾಗಿದೆ.

ಇದಕ್ಕೂ ಮುನ್ನ ಶಿವಮೊಗ್ಗ ಹಾಗೂ ಯಾದಗರಿ ಜಿಲ್ಲೆಯಲ್ಲಿಯೂ ಇಂತಹದ್ದೇ ಘಟನೆಗಳು ವರದಿಯಾಗಿದ್ದವು. ಯಾದಗಿರಿ ಜಿಲ್ಲೆಯಲ್ಲಿ ಶಾಲಾ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದ ಘಟನೆ ಮಾಸುವ ಮುನ್ನವೇ, ಮನೆಯ ಶೌಚಾಲಯದಲ್ಲಿ 15 ವರ್ಷದ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿತ್ತು.

ಈಗ ಹಾಸನದಲ್ಲೂ ಇದೇ ತರದ ಘಟನೆ ನಡೆದಿದ್ದು, ನಮ್ಮ ಸಮಾಜ ಎತ್ತ ಸಾಗುತ್ತಿದೆ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ. ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ, ಈ ಕೃತ್ಯಕ್ಕೆ ಕಾರಣರಾದ ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ  ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್​​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Kishor KV