68ನೇ ವಯಸ್ಸಿನಲ್ಲಿ 58ರ ಆಂಟಿ ಕೈ ಹಿಡಿದ ಅಪ್ಪ – ಇಳಿವಯಸ್ಸಿನ ಅಂಕಲ್ ಮದುವೆಗೆ ಮಕ್ಕಳ ಗಲಾಟೆ

ಇಳಿವಯಸ್ಸಿನ ಒಂಟಿಯಾಗಿರುವ ನೋವು.. ಹೀಗಾಗಿ ಸಂಗಾತಿ ಬೇಕೆಂಬ ಬಯಕೆ. ಅದಕ್ಕಾಗಿ ಎರಡನೇ ಮದುವೆ. ಇದೇ ವಿಚಾರದಲ್ಲಿ ನಡೆದ ಗಲಾಟೆ. ಹಾಸನದಲ್ಲಿ ಅಂಕಲ್ ಮತ್ತು ಆಂಟಿ ಮದುವೆಗೆ ಮಕ್ಕಳೇ ವಿರೋಧ ಪಡಿಸಿದ್ದಾರೆ. ಮಕ್ಕಳ ಗಲಾಟೆ ನಡುವೆಯೇ ಈ ಮದುವೆಯಂತೂ ನಡೆದುಹೋಗಿದೆ.
ಇದನ್ನೂ ಓದಿ:6 ತಿಂಗಳಿಂದ ಸಿಗಲ್ಲಿಲ್ಲ ಸಂಬಳ – ಗುತ್ತಿಗೆ ವೈದ್ಯಾಧಿಕಾರಿ ಡಾ. ಕುಲದೀಪ್ ಎಂ.ಡಿ. ರಾಜೀನಾಮೆ
ತುಂಬು ಸಂಸಾರ ನಡೆಸಿದವರಿಗೆ ಒಂಟಿಯಾಗಿ ಇರುವುದು ತುಂಬಾ ನೋವು ಕೊಡುತ್ತದೆ. ಅದರಲ್ಲೂ ಪತ್ನಿಯಿಲ್ಲದೆ ಒಂಟಿಯಾಗಿರುವುದು ಪತಿಗೆ ತುಂಬಾ ಕಷ್ಟ. ಹೀಗಾಗಿ 68 ವಯಸ್ಸಿನಲ್ಲಿ ಒಂಟಿಯಾಗಿದ್ದ ರಾಜಣ್ಣ ಎಂಬ ವ್ಯಕ್ತಿ 58ನೇ ವಯಸ್ಸಿನ ಗೀತಾ ಎಂಬವರನ್ನು ಮದುವೆಯಾಗಿದ್ದಾರೆ. ಇವರು ಮದುವೆಯಾಗಿದ್ದು ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿಯಾಗಿರಲು. ಆದರೆ, ಇವರ ನೆಮ್ಮದಿಯನ್ನು ಅವರ ಮಕ್ಕಳೇ ಹಾಳು ಮಾಡಿದ್ದಾರೆ.
68 ವಯಸ್ಸಿನ ರಾಜಣ್ಣ ಮತ್ತು 58 ವರ್ಷದವರಾದ ಗೀತಾ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ನಿವಾಸಿಗಳು. ಗಂಡನಿಂದ ದೂರವಾಗಿದ್ದ ಗೀತಾಗೆ ಇಬ್ಬರು ಹೆಣ್ಮಕ್ಕಳು. ಇಬ್ಬರನ್ನೂ ಮದ್ವೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ಮನೆಯಲ್ಲಿ ಒಂಟಿಯಾಗಿದ್ದರು. ಇನ್ನು ರಾಜಣ್ಣಗೆ ಮೂವರು ಮಕ್ಕಳು. ಎಲ್ರದ್ದೂ ಮದ್ವೆಯಾಗಿದೆ. ಎರಡು ವರ್ಷದ ಹಿಂದೆ ಪತ್ನಿ ಸಾವನ್ನಪ್ಪಿದ್ರು. ಅವತ್ತಿನಿಂದಲೂ ಒಂಟಿ ಅನ್ನೋ ಭಾವ ಕಾಡ್ತಿತ್ತಂತೆ. ಹೀಗಾಗಿ ರಾಜಣ್ಣ ಮತ್ತು ಗೀತಾ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಡಿಸೆಂಬರ್ 17ರಂದು ಮಾವಿನಕೆರೆ ಬೆಟ್ಟದಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ರಾಜಣ್ಣನ ಮಕ್ಕಳು ಗಲಾಟೆ ಮಾಡಿದ್ದಾರೆ. ಆಸ್ತಿಯನ್ನೆಲ್ಲಾ ನಮಗೆ ಬರೆದುಕೊಟ್ಟು, ಯಾರ ಜೊತೆಗಾದ್ರೂ ಸಂಸಾರ ಮಾಡು ಅಂತಾ ಬೆದರಿಕೆ ಹಾಕ್ತಿದ್ದಾರಂತೆ. ಅಷ್ಟೇ ಅಲ್ಲ ಮನೆಗೆ ನುಗ್ಗಿ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾರಂತೆ. ರಾಜಣ್ಣ 2ನೇ ಮದ್ವೆಯಾಗೋದಕ್ಕೂ ಮೊದಲು ಎಲ್ಲಾ ಆಸ್ತಿಯನ್ನ ಮಕ್ಕಳಿಗೆ ಹಂಚಿದ್ದಾರಂತೆ. ಒಂದು ಮನೆಯನ್ನ ಮಾತ್ರ ತಮ್ಮ ಹೆಸರಲ್ಲಿ ಇಟ್ಕೊಂಡಿದ್ದಾರೆ. ಇದೀಗ ಈ ಮನೆಗಾಗಿ ಮಕ್ಕಳು ಗಲಾಟೆ ಮಾಡಿದ್ದಾರೆ. ರಾಜಣ್ಣ ಪತ್ನಿ ಗೀತಾ ನರ್ಸಿಂಗ್ ಹೋಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ದುಡಿಮೆ ಅವರೇ ಮಾಡಿಕೊಳ್ಳುತ್ತಿದ್ದಾರೆ. ಆದರೆ, ರಾಜಣ್ಣನ ಮಕ್ಕಳು ಇಬ್ಬರಿಗೂ ಬೆದರಿಕೆ ಹಾಕಿದ್ದಾರೆ. ಹೀಗಾಗಿ ದಂಪತಿ, ಪೊಲೀಸ್ ಠಾಣೆಯಲ್ಲಿ ಕಂಪ್ಲೆಂಟ್ ಕೊಟ್ಟಿದ್ದಾರೆ. ಆದರೆ, ಪೊಲೀಸರು ಕೂಡಾ ಇವರ ಪರ ನಿಲ್ಲಲೇ ಇಲ್ಲ. ಇದರಿಂದ ಬೇಸತ್ತ ರಾಜಣ್ಣ ಮಚ್ಚು ಹಿಡ್ಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಇದೀಗ ಪೊಲೀಸರು ಈ ಇಳಿವಯಸ್ಸಿನಲ್ಲಿ ನೆಮ್ಮದಿಯ ಜೀವನ ಬೇಕು. ಒಂಟಿಯಾಗಿ ಬದುಕಲು ಸಾಧ್ಯವಿಲ್ಲ ಎಂದು ಮದುವೆಯಾದ ಈ ದಂಪತಿಗೆ ರಕ್ಷಣೆ ನೀಡುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ನೋಡಿರಿ

