6 ತಿಂಗಳಿಂದ ಸಿಗಲ್ಲಿಲ್ಲ ಸಂಬಳ – ಗುತ್ತಿಗೆ ವೈದ್ಯಾಧಿಕಾರಿ ಡಾ. ಕುಲದೀಪ್ ಎಂ.ಡಿ. ರಾಜೀನಾಮೆ

ಸರ್ಕಾರ ಗುತ್ತಿಗೆ ವೈದ್ಯರಿಗೆ ಸಂಬಳ ನೀಡುವುದನ್ನೇ ಮರೆತಿದ್ಯಾ?. ಯಾಕೆಂದರೆ, ವೈದ್ಯರೊಬ್ಬರು ಆರು ತಿಂಗಳಿಂದ ಸಂಬಳ ಸಿಕ್ಕಿಲ್ಲ ಎಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣದಿಂದ ವೈದ್ಯಾಧಿಕಾರಿಗಳ ಸಂಬಳವನ್ನು ಬಾಕಿ ಉಳಿಸಿಕೊಂಡಿರುವ ವಿಚಾರ ಈಗ ಚರ್ಚೆಯಲ್ಲಿದೆ.
ಇದನ್ನೂ ಓದಿ:ರಾಜ್ಯದ ಗೃಹಲಕ್ಷ್ಮೀಯರಿಗೆ ಗುಡ್ನ್ಯೂಸ್! – ಈ ವಾರವೇ ಬರಲಿದೆ ಗೃಹಲಕ್ಷ್ಮಿ 2000 ಹಣ!
ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಕುಲದೀಪ್ ಎಂ.ಡಿ. ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕಳೆದ ಆರು ತಿಂಗಳಿಂದ ಸಂಬಳ ದೊರೆಯದ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಈ ನಿರ್ಧಾರ ಒಂದು ರೀತಿಯಲ್ಲಿ ಸರ್ಕಾರಕ್ಕೂ ಬಿಸಿ ಮುಟ್ಟಿಸಿದೆ. ಕಳೆದ ಎರಡೂವರೆ ವರ್ಷಗಳಿಂದ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ. ಕುಲದೀಪ್ ಎಂ.ಡಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಡಾ. ಕುಲದೀಪ್ ಅವರಿಗೆ ಆರು ತಿಂಗಳ ಕಾಲ ವೇತನ ಸಿಕ್ಕಿರಲಿಲ್ಲ. ಹೀಗಾಗಿ ವೈಯಕ್ತಿಕ ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತಿತ್ತಂತೆ. ಒಂದು ಅಥವಾ ಎರಡು ತಿಂಗಳು ಸಂಬಳದಲ್ಲಿ ವ್ಯತ್ಯಾಸವಾದರೂ ಜೀವನ ನಡೆಸಲು ಕಷ್ಟವಾಗುತ್ತದೆ. ಹಾಗಿರುವಾಗ ಸತತ ಆರು ತಿಂಗಳ ವೇತನವಿಲ್ಲದೆ ಅವರು ಮಾನಸಿಕವಾಗಿ ನೊಂದಿದ್ದರು. ಹೀಗಾಗಿ ರಾಜೀನಾಮೆ ನೀಡುವ ಮೂಲಕ ತನ್ನ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ. ಡಾ. ಕುಲದೀಪ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ನೋಡಿರಿ

