ಸರ್ಕಾರಿ ನೌಕರರ ಕಳ್ಳಾಟಕ್ಕೆ ಬ್ರೇಕ್‌ – ರಾಜ್ಯ ಸರ್ಕಾರದಿಂದ ಟಫ್ ರೂಲ್ಸ್

ಸರ್ಕಾರಿ ನೌಕರರ ಕಳ್ಳಾಟಕ್ಕೆ ಬ್ರೇಕ್‌ – ರಾಜ್ಯ ಸರ್ಕಾರದಿಂದ ಟಫ್ ರೂಲ್ಸ್

 ರಾಜ್ಯ ಸರ್ಕಾರವು, ಸರ್ಕಾರಿ ನೌಕರರ ಕಳ್ಳಾಟಕ್ಕೆ ಬ್ರೇಕ್‌ ಹಾಕಲು ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, ಜತೆಗೆ ಡ್ರೆಸ್‌ ಕೋಡ್‌  ಕೂಡ ಪಾಲಿಸಲು ಸೂಚನೆ ನೀಡಲಾಗಿದೆ. ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಸರ್ಕಾರಿ ನೌಕರರು ಚಲನವಲನ ವಹಿ  ಮತ್ತು ನಗದು ಘೋಷಣೆ ವಹಿ  ಯನ್ನು ನಿರ್ವಹಣೆ ಮಾಡದಿರುವುದು, ಸಭ್ಯ ಉಡುಗೆ ತೊಡುಗೆಗಳನ್ನು ಧರಿಸದಿರುವ ಕುರಿತು ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ.ಬಿ ಅವರು ಸುತ್ತೋಲೆ ಹೊರಡಿಸಿದ್ದು, ಈ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿದ್ದಾರೆ.

 ಚಲನವಲನ ವಹಿ ನಿರ್ವಹಣೆ 

ಕಚೇರಿ ವೇಳೆಯಲ್ಲಿ ಸರ್ಕಾರಿ ನೌಕರರ ಚಲನವಲನವನ್ನು ನಿಯಂತ್ರಿಸಲು ಚಲನವಲನ ವಹಿಯ ನಿರ್ವಹಣೆ ಬಗ್ಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದು, ಅದರಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಚಲನವಲನ ವಹಿ  ಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಎಲ್ಲಾ ಅಧಿಕಾರಿ/ಸಿಬ್ಬಂದಿ ಸರ್ಕಾರಿ ಕಚೇರಿಗಳ ನಿಗದಿತ ಪ್ರಾರಂಭ ಸಮಯವಾದ ಬೆಳಗ್ಗೆ 10.10 ಗಂಟೆಗೆ ಕಾರ್ಯಾಲಯಕ್ಕೆ ಹಾಜರಾಗಬೇಕು ಹಾಗೂ ಕಚೇರಿ ಸಮಯ ಮುಗಿಯುವವರೆಗೂ ತಮ್ಮ ಕರ್ತವ್ಯದ ಸ್ಥಳದಲ್ಲಿಯೇ ಹಾಜರಿರಬೇಕು. ಕಚೇರಿ ಸಮಯದಲ್ಲಿ ಅಧಿಕೃತ ಕಾರ್ಯಕ್ಕಾಗಿ ಹೊರ ಹೋಗಬೇಕಾದಲ್ಲಿ, ಚಲನವಲನ ವಹಿಯಲ್ಲಿ ಹೊರ ಹೋಗುವ ಕಾರಣ/ಉದ್ದೇಶವನ್ನು ದಾಖಲಿಸಬೇಕು. ಅಲ್ಲದೇ ಮೇಲಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು. ಹೊರ ಹೋಗುವ ಸಮಯ ಹಾಗೂ ಹಿಂದಿರುಗಿದ ಸಮಯವನ್ನು ಸಹಿ ಮತ್ತು ದಿನಾಂಕದೊಂದಿಗೆ ದಾಖಲಿಸಬೇಕು.

ಚಲನವಲನ ವಹಿಯಲ್ಲಿ ದಾಖಲು ಮಾಡದೇ ಕರ್ತವ್ಯ ಸ್ಥಳದಲ್ಲಿ ಹಾಜರಿಲ್ಲದ ಅಧಿಕಾರಿ/ಸಿಬ್ಬಂದಿಗಳನ್ನು ಅನಧಿಕೃತವಾಗಿ ಗೈರು ಹಾಜರಿ ಎಂದು ಪರಿಗಣಿಸುವುದು ಮತ್ತು ಮೇಲಾಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳಬೇಕು. ಕಚೇರಿ ಸಮಯದಲ್ಲಿ ಅನಧಿಕೃತವಾಗಿ ಹೊರ ಹೋಗುವ ನೌಕರರನ್ನು ಮೇಲಾಧಿಕಾರಿಗಳು ನಿಯಂತ್ರಿಸಬೇಕು.

 ನಗದು ಘೋಷಣೆ ವಹಿ  

ನಗದು ಘೋಷಣೆ ವಹಿಯನ್ನು ನಿರ್ವಹಿಸುವ ಕುರಿತು ಈ ಹಿಂದೆ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಸರ್ಕಾರಿ ನೌಕರರು ಅಧಿಕೃತ ಸಹಿ ಹಾಜರಾತಿ ವಹಿ/ಎಎಂಎಸ್‌ನಲ್ಲಿ, ಕರ್ತವ್ಯಕ್ಕೆ ವರದಿ ಮಾಡಿದ ತಕ್ಷಣ, ಕಚೇರಿಗೆ ತಂದ ನಗದು ಮೊತ್ತವನ್ನು ನಗದು ಘೋಷಣೆ ವಹಿಯ ನಿಗದಿತ ನಮೂನೆಯಲ್ಲಿ ಸಹಿಯೊಂದಿಗೆ ಘೋಷಿಸಬೇಕು. ಮೇಲಧಿಕಾರಿಗಳು ತಮ್ಮ ಎಲ್ಲಾ ಸಿಬ್ಬಂದಿಗಳು ನಗದು ಘೋಷಣಾ ವಹಿಯಲ್ಲಿ ನಮೂದಿಸುತ್ತಿರುವ ಬಗ್ಗೆ, ಆಗಿಂದಾಗ್ಗೆ, ಪರಿಶೀಲಿಸಬೇಕು.

 ಸಭ್ಯ ಉಡುಗೆ ತೊಡುಗೆಗಳನ್ನು ಧರಿಸುವುದು 

ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ/ನೌಕರರುಗಳು ಸರ್ಕಾರದ ಘನತೆಗೆ ಧಕ್ಕೆ ಬಾರದಂತೆ ಮತ್ತು ಶೋಭೆಯನ್ನು ತರುವಂತಹ ಸಭ್ಯ ಉಡುಗೆ ತೊಡುಗೆಗಳನ್ನು ಮಾತ್ರ ಧರಿಸಬೇಕೆಂದು ಸರ್ಕಾರವು ಪರಿಷ್ಕೃತ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Kishor KV