ರಸ್ತೆಯಲ್ಲಿ ಆಟ ಆಡುವ ಮಕ್ಕಳನ್ನ ಟಾರ್ಗೆಟ್‌ ಮಾಡ್ತಿದ್ದವನಿಗೆ ಸಂಕಷ್ಟ! – ಸೈಕೋ ರಂಜನ್‌ ಮೇಲೆ ಪೋಕ್ಸೋ ಕೇಸ್‌ ದಾಖಲಿಸಲು ಮುಂದಾದ ಪೊಲೀಸರು

ರಸ್ತೆಯಲ್ಲಿ ಆಟ ಆಡುವ ಮಕ್ಕಳನ್ನ ಟಾರ್ಗೆಟ್‌ ಮಾಡ್ತಿದ್ದವನಿಗೆ ಸಂಕಷ್ಟ! – ಸೈಕೋ ರಂಜನ್‌ ಮೇಲೆ ಪೋಕ್ಸೋ ಕೇಸ್‌ ದಾಖಲಿಸಲು ಮುಂದಾದ ಪೊಲೀಸರು

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಸೋಕೋ ಒಬ್ಬ ಮಕ್ಕಳ ಮೇಲೆ ದಾಳಿ ಮಾಡಿ ಕ್ರೌರ್ಯ ಮೆರೆಯುತ್ತಿದ್ದ. ಇದೀಗ ಈ ಸೈಕೋ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ರಂಜನ್‌ ಮೇಲೆ ಪೋಕ್ಸೋ ಕೇಸ್‌ ದಾಖಲಿಸಿ ಅರೆಸ್ಟ್‌ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಓಡಾಡುವ ಮಕ್ಕಳೇ ಇವನ ಟಾರ್ಗೆಟ್! – ಆಟವಾಡುತ್ತಿದ್ದ ಬಾಲಕನನ್ನ ಕಾಲಿನಿಂದ ಒದ್ದ ಸೈಕೋ!

ಮಕ್ಕಳ ಮೇಲೆ ದಾಳಿ ಮಾಡಿದ ರಂಜನ್‌ ಜಿಮ್‌ ಟ್ರೈನರ್‌ ಎಂದು ಗೊತ್ತಾಗಿದೆ. ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳನ್ನ ಟಾರ್ಗೆಟ್‌ ಮಾಡಿ ಕಿರುಕುಳ ನೀಡುತ್ತಿದ್ದ. ಮಕ್ಕಳ ಮೇಲೆ ವಿಕೃತಿ ಮೆರೆಯುತ್ತಿದ್ದ. ಈತ ತ್ಯಾಗರಾಜ ನಗರದ ಪೋಸ್ಟ್ ಆಫೀಸ್ ರಸ್ತೆಯಲ್ಲಿ ಆಟವಾಡುತ್ತಿದ್ದ 5 ವರ್ಷದ ಮಗುವನ್ನು ಕಾಲಿನಿಂದ ಒದ್ದು ವಿಕೃತಿ ಮೆರೆದಿದ್ದ. ಒದ್ದ ಏಟಿಗೆ ಮಗು ದೂರಕ್ಕೆ ಮುಗ್ಗರಿಸಿ ಬಿದ್ದಿತ್ತು. ಬಿದ್ದ ರಭಸಕ್ಕೆ ಮಗುವಿನ ಹಣೆ, ಕಣ್ಣಿನ ಭಾಗ, ಕೈ-ಕಾಲುಗಳಲ್ಲಿ ರಕ್ತ ಸ್ರಾವವಾಗಿತ್ತು. ಇದಲ್ಲದೇ ಈತನ ಹಲವು ಕರಾಳ ಕೃತ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದವು. ಈತನನ್ನು ಹೀಗೇ ಬಿಟ್ಟರೆ ಮುಂದೆ ಮಕ್ಕಳ ಸರಣಿ ಕೊಲೆಗಾರ ಆಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಪೊಲೀಸರು ಈ ಸಂಬಂಧ ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸಲು ಮುಂದಾಗಿದ್ದಾರೆ. ಈತ ಮಕ್ಕಳ ಮೇಲೆ ಮಾತ್ರವಲ್ಲದ ಇತರ ದಾರಿಹೋಕರ ಮೇಲೆ ವಿನಾಕಾರಣ ಹಲ್ಲೆ ನಡೆಸಲು ಮುಂದಾಗುತ್ತಿದ್ದುದೂ ಪತ್ತೆಯಾಗಿದೆ.

ಈ ಜಿಮ್ ಟ್ರೈನರ್‌ಗೆ ದಾರಿಹೋಕರಿಗೆ ಅನಗತ್ಯವಾಗಿ ಬೈಯುವುದು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುವುದು ಚಾಳಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರೂ, ಸದ್ಯ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಈಗಾಗಲೇ ಒಂದು ಪ್ರಕರಣದಲ್ಲಿ ಆರೋಪಿಯನ್ನು ವಿಚಾರಣೆ ನಡೆಸಲಾಗಿದೆ. ಸದ್ಯ ಆರೋಪಿ ಸ್ಟೇಷನ್ ಬೇಲ್ ಪಡೆದು ಚೆನ್ನೈಗೆ ತೆರಳಿದ್ದಾನೆ. ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.

Shwetha M