ಹಾರ್ದಿಕ್ ಪಾಂಡ್ಯ & ವರುಣ್‌ ಅಬ್ಬರಕ್ಕೆ ದ.ಆಫ್ರಿಕಾ ಉಡೀಸ್ – ಟಿ20I ಸರಣಿ ಗೆದ್ದ ಟೀಂ IND

ಹಾರ್ದಿಕ್ ಪಾಂಡ್ಯ & ವರುಣ್‌  ಅಬ್ಬರಕ್ಕೆ ದ.ಆಫ್ರಿಕಾ ಉಡೀಸ್ – ಟಿ20I ಸರಣಿ ಗೆದ್ದ ಟೀಂ IND

ಭರವಸೆಯ ಬ್ಯಾಟರ್‌ ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡರ್‌ ಆಟ ಹಾಗೂ ವರುಣ್‌ ಚಕ್ರವರ್ತಿ ಅವರ ಅಮೋಘ ಬೌಲಿಂಗ್ ನೆರವಿನಿಂದ ಟೀಮ್ ಇಂಡಿಯಾ ಐದನೇ ಟಿ20 ಕ್ರಿಕೆಟ್‌ನಲ್ಲಿ 30 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿ ಸರಣಿಯನ್ನು ವಶಕ್ಕೆ ಪಡೆದಿದೆ. ಈ ಮೂಲಕ ಭಾರತ ಐದು ಪಂದ್ಯಗಳ ಟಿ20 ಸರಣಿಯನ್ನು 3-1 ರಿಂದ ತನ್ನದಾಗಿಸಿಕೊಂಡಿದೆ.
ಟೀಮ್ ಇಂಡಿಯಾ ನೀಡಿದ್ದ 232 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಕ್ವಿಂಟನ್‌ ಡಿಕಾಕ್‌, ರೆಜಾ ಹೆಂಡ್ರಿಕ್ಸ್ (13) ಅವರ ಭರ್ಜರಿ ಜೊತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕಾ 6.3 ಓವರ್‌ಗಳಲ್ಲಿ 69 ರನ್‌ ಸೇರಿಸಿತು. ಎರಡನೇ ವಿಕೆಟ್‌ಗೆ ಡೆವಾಲ್ಡ್ ಬ್ರೆವಿಸ್‌ ಮತ್ತು ಕ್ವಿಂಟನ್‌ ಡಿ ಕಾಕ್‌ ಜೋಡಿ ಸಹ ಭರ್ಜರಿ ಜೊತೆಯಾಟವನ್ನು ನೀಡಿತು. ಈ ವೇಳೆ 65 ರನ್ ಬಾರಿಸಿ ಮುನ್ನುಗುತ್ತಿದ್ದ ಕ್ವಿಂಟನ್‌ ಡಿಕಾಕ್ ಜಸ್ಪ್ರೀತ್ ಬುಮ್ರಾ ತೋಡಿದ ಖೆಡ್ಡಾಗೆ ಬಲಿಯಾದರು. ಡಿಕಾಕ್‌ ಅವರ ಅಮೋಘ ಇನಿಂಗ್ಸ್‌ನಲ್ಲಿ 9 ಬೌಂಡರಿ, 3 ಸಿಕ್ಸರ್ ಸೇರಿವೆ.

ಇದನ್ನೂ ಓದಿ: ಅಭಿಷೇಕ್ ಇದ್ರಷ್ಟೇ ಹೊಡಿಬಡಿ – ಟಾಪ್-8ರಲ್ಲಿ ವೀಕೆಸ್ಟ್ ಟೀಂ ಭಾರತ

ಮಧ್ಯಮ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್‌ 17 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 31 ರನ್ ಸಿಡಿಸಿ ಔಟ್ ಆದರು. ಉಳಿದಂತೆ ಯಾವೊಬ್ಬ ಬ್ಯಾಟರ್‌ ಟೀಮ್ ಇಂಡಿಯಾದ ಬೌಲರ್‌ಗಳ ಕರಾರುವಾಕ್‌ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. ಡೇವಿಡ್‌ ಮಿಲ್ಲರ್‌ (18), ಜಾರ್ಜ್ ಲಿಂಡೆ (16), ಮಾರ್ಕೊ ಜಾನ್ಸನ್‌ (14), ಕಾರ್ಬಿನ್‌ ಬಾಷ್ (17), ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 201 ರನ್‌ ಸೇರಿಸಿತು. ಸ್ಪಿನ್ ಮಾಂತ್ರಿಕ ವರುಣ್‌ ಚಕ್ರವರ್ತಿ ಅಬ್ಬರಿಸಿದರು. ಇವರು 4 ಓವರ್‌ ಬೌಲಿಂಗ್ ಮಾಡಿ 53 ರನ್‌ ನೀಡಿ 4 ವಿಕೆಟ್‌ ಪಡೆದರೆ, ಜಸ್ಪ್ರೀತ್ ಬುಮ್ರಾ 17 ರನ್‌ ನೀಡಿ 2 ವಿಕೆಟ್‌ ಕಬಳಿಸಿದರು. ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್‌ ಪಡೆದರು.

ಇನ್ನೂ  ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ಸಂಜು ಸ್ಯಾಮ್ಸನ್‌ (37) ಹಾಗೂ ಅಭಿಷೇಕ್ ಶರ್ಮಾ (34) ಮೊದಲ ವಿಕೆಟ್‌ಗೆ 5.4 ಓವರ್‌ಗಳಲ್ಲಿ 63 ರನ್‌ ಸೇರಿಸಿತು. ಸೂರ್ಯಕುಮಾರ್ ಯಾದವ್ (5) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಈ ಜೊಡಿ ತಂಡದ ಮೊತ್ತವನ್ನು ಹಿಗ್ಗಿಸಿತು. ಹಾರ್ದಿಕ್ ಪಾಂಡ್ಯ 5 ಬೌಂಡರಿ, 5 ಸಿಕ್ಸರ್ ಸಹಾಯದಿಂದ 63 ರನ್‌ ಸಿಡಿಸಿ ಔಟ್ ಆದರು. ಇನ್ನು ತಿಲಕ್ ವರ್ಮಾ 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ 73 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 231 ರನ್‌ ಸೇರಿಸಿತು.

Kishor KV