ಹಾಲಿನ ಪ್ರೋತ್ಸಾಹ ಧನ 7 ರೂ. ಹೆಚ್ಚಳ – ರೈತರಿಗೆ ಗುಡ್ನ್ಯೂಸ್ ನೀಡಿದ ಸಿಎಂ ಸಿದ್ದರಾಮಯ್ಯ

ರಾಜ್ಯದ ರೈತರಿಗೆ ಸಿಎಂ ಸಿದ್ದರಾಮಯ್ಯ ಗುಡ್ನ್ಯೂಸ್ ನೀಡಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದ್ದು, ಇಷ್ಟು ದಿನ ಪ್ರತಿ ಲೀಟರ್ಗೆ ಐದು ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ರೈತರ ಹಿತ ದೃಷ್ಟಿಯಿಂದ ರೈತರಿಗೆ ನೀಡುತ್ತಿದ್ದ ಐದು ರೂಪಾಯಿ ಪ್ರೋತ್ಸಾಹ ಧನವನ್ನು 7 ರೂಪಾಯಿಗೆ ಹೆಚ್ಚಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ರೈತರಿಗೆ ಪ್ರೋತ್ಸಾಹಧನ ಸಂಪೂರ್ಣವಾಗಿ ತಲುಪುತ್ತಿಲ್ಲ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಿಎಂ ಅವರು, ಬೆಲೆ ಏರಿಕೆಯ ಹೊರತಾಗಿಯೂ ಸರ್ಕಾರದಿಂದ ನೆರವು ಮುಂದುವರಿಯುತ್ತಲೇ ಇರುತ್ತದೆ ಎಂದು ಭರವಸೆ ನೀಡಿದ್ದಾರೆ.ತಮ್ಮ ಸರ್ಕಾರದ ಹಿಂದಿನ ಅವಧಿ (2013-18) ಪ್ರಣಾಳಿಕೆಯ ಭರವಸೆಗಳನ್ನು ಪ್ರಸ್ತಾಪಿಸಿ, 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಬಜೆಟ್ನಲ್ಲಿ ಘೋಷಿಸದ 30 ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂಬುದನ್ನು ಕೂಡ ವಿವರಿಸಿದರು. ಪ್ರಸ್ತುತ (2023ರ ನಂತರ) ಪ್ರಣಾಳಿಕೆಯಲ್ಲಿನ 593 ಭರವಸೆಗಳಲ್ಲಿ 293 ಭರವಸೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಉಳಿದ ಭರವಸೆಗಳನ್ನು ಮುಂದಿನ ಮೂರು ಬಜೆಟ್ಗಳಲ್ಲಿ ಜಾರಿಗೆ ತರಲು ತಂತ್ರ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳಿಗಾಗಿ 1,06,076 ಕೋಟಿ ವೆಚ್ಚ
ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರದ ಪ್ರಮುಖ ಸ್ಕೀಮ್ಗಳಲ್ಲಿ ಗ್ಯಾರಂಟಿ ಯೋಜನೆಗಳೂ ಸೇರಿವೆ. ಮೊದಲಿಗೆ ಈ ಭಾಗದ ಜನರಿಗೆ ಕಳೆದ ಎರಡೂವರೆ ವರ್ಷಗಳಲ್ಲಿ ನಾವು ಎಷ್ಟು ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಜನರ ಖಾತೆಗಳಿಗೆ ವರ್ಗಾವಣೆ ಮಾಡಿದ್ದೇವೆ ಎಂಬ ಮಾಹಿತಿಯನ್ನು ಸದನದ ಮೂಲಕ ಜನರ ಗಮನಕ್ಕೆ ತರಬೇಕಾಗಿರುವುದು ನಮ್ಮ ಜವಾಬ್ಧಾರಿ ಎಂದು ತಿಳಿಸಿದರು.
ಇದನ್ನೂ ಓದಿ: ಚಹಲ್ಗೆ ಡೆಂಗ್ಯೂ ಮತ್ತು ಚಿಕೂನ್ಗುನ್ಯಾ – ಹೇಗಿದೆ ಈಗ ಯುಜ್ವೇಂದ್ರ ಆರೋಗ್ಯ ಸ್ಥಿತಿ?
ನಂಜುಂಡಪ್ಪ ವರದಿ ಜಾರಿಯಾದ ನಂತರದಲ್ಲಿ ಡೈರಿ ಚಟುವಟಿಕೆಗಳು ಹೆಚ್ಚಾಗಿದ್ದು, ಕೆಎಂಎಫ್ ನಲ್ಲಿ ಪ್ರತಿ ದಿನ 1 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಬೀದರ್, ಗುಲ್ಬರ್ಗ ಕಲಬುರ್ಗಿ ಮತ್ತು ಯಾದಗಿರಿ ಹಾಲು ಒಕ್ಕೂಟದಲ್ಲಿ ಪ್ರತಿದಿನಕ್ಕೆ 67 ಸಾವಿರ ಲೀಟರ್ ಉತ್ಪಾದನೆ ಆಗುತ್ತಿದೆ. ಈ ಎರಡರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಹಳೆ ಮೈಸೂರಿನಲ್ಲಿ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ ಉತ್ತರ ಕರ್ನಾಟಕದಲ್ಲಿ 10 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ ಒಮ್ಮೆ ಮೂರು ರೂ ಮತ್ತೊಮ್ಮೆ 400 ಗಳ ಸಹಾಯಧನವನ್ನು ಹೆಚ್ಚಳ ಮಾಡಿದೆ. ಈ ಮೊತ್ತ ಸಂಪೂರ್ಣವಾಗಿ ರೈತರಿಗೆ ಹೋಗುತ್ತಿದೆ. ಬಿಜೆಪಿ ಸರ್ಕಾರ ಬಿಟ್ಟು ಹೋಗಿದ್ದ 600 ಕೋಟಿ ಗಳನ್ನು ನಮ್ಮ ಸರ್ಕಾರ ತೀರಿಸಿದೆ. ಮೇವಿನ ವೆಚ್ಚ ಹೆಚ್ಚಳವಾಗಿದೆ ಎಂಬ ಕಾರಣಕ್ಕೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 7 ರೂಗಳ ಪ್ರೋತ್ಸಾಹ ಧನವನ್ನು ಈ ಅವಧಿಯಲ್ಲಿಯೇ ಕೊಡುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ನಾವು ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭ ಮಾಡಿದ ದಿನಾಂಕದಿಂದ ಅಕ್ಟೋಬರ್- ನವೆಂಬರ್ ವರೆಗೆ ನಮ್ಮ ಸರ್ಕಾರ 1,06,076 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ. ಇದರಲ್ಲಿ 46,277 ಕೋಟಿ ರೂಪಾಯಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳ ಜನರಿಗಾಗಿ ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ ಮಾಡಲಾಗಿದೆ. ಒಟ್ಟು ವೆಚ್ಚದಲ್ಲಿ ಶೇ. 43.63 ರಷ್ಟು ಅನುದಾನಗಳು ಈ ಭಾಗದ ಜನರಿಗಾಗಿ ವೆಚ್ಚ ಮಾಡಲಾಗಿದೆ.
ಈ ಸದನದಲ್ಲಿ ಅನೇಕರಿಗೆ ಗ್ಯಾರಂಟಿ ಯೋಜನೆಗಳ ಕುರಿತು ನಕಾರಾತ್ಮಕ ಭಾವನೆಗಳಿವೆ. ಆದರೆ ಇಡೀ ದೇಶದ ಆರ್ಥಿಕತೆ ಕುಸಿಯುತ್ತಿರುವಾಗ ಕರ್ನಾಟಕ ರಾಜ್ಯದ ಆರ್ಥಿಕತೆ ಆರೋಗ್ಯಕರವಾಗಿರುವುದಕ್ಕೆ ಗ್ಯಾರಂಟಿ ಯೋಜನೆಗಳ ಕೊಡುಗೆ ಬಹಳ ದೊಡ್ಡದಿದೆ. ಮಾಜಿ ಸಚಿವರುಗಳಾಗಿದ್ದ ಶಶಿಕಲಾ ಜೊಲ್ಲೆಯವರು ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳ ಶಾಲೆ, ಕಾಲೇಜು, ಆಸ್ಪತ್ರೆ ಮುಂತಾದವುಗಳ ಕುರಿತಂತೆ ಹಲವು ಅಂಕಿ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಅವರು ಹೇಳಿರುವ ಅಂಕಿ ಅಂಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿದೆ ಎಂದು ತಿಳಿಸಿದರು.

ನೋಡಿರಿ

