ಎಲೆಚುಕ್ಕಿ, ಕೊಳೆ ರೋಗದಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟ! – ರೈತರ ಸಮಸ್ಯೆಗೆ ಸರ್ಕಾರ ಏನೆಲ್ಲಾ ಕ್ರಮಕೈಗೊಂಡಿದೆ?

ರಾಜ್ಯದಲ್ಲಿ ಅಡಿಕೆ ಮರಗಳಿಗೆ ಕೊಳೆ ರೋಗ ಕಾಡುತ್ತಿದೆ. ಈ ವರ್ಷ ಕರ್ನಾಟಕದ ಹಲವು ಭಾಗಗಳಲ್ಲಿ ಕೊಳೆರೋಗದಿಂದಾಗಿ ಅಡಿಕೆ ಬೆಳೆ ನಾಶವಾಗಿದೆ. ಇದ್ರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಕೇಂದ್ರದ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಈ ಬಗ್ಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸಲಾಗಿದೆ.
ಇದನ್ನೂ ಓದಿ: ಬಿಗ್ಬಾಸ್ ಮನೆಯಲ್ಲಿ ಇರೋಕೆ ಅರ್ಹತೆ ಇಲ್ಲ.. ಮರ್ಯಾದೆ ಕ್ರಾಸ್ ಮಾಡ್ತೀನಿ – ಧ್ರುವಂತ್ ಮೇಲೆ ಕೂಗಾಡಿದ ರಕ್ಷಿತಾ!
ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅಡಿಕೆ ಬೆಳೆಯನ್ನೇ ರೈತರು ಅವಲಂಭಿಸಿದ್ದಾರೆ. ಆದ್ರೆ ಕಳೆದ ಒಂದೆರಡು ವರ್ಷಗಳಿಂದ ಅಡಿಕೆ ಮರಗಳಿಗೆ ಕೊಳೆರೋಗ, ಎಲೆಚುಕ್ಕಿ ರೋಗ ಬಾಧಿಸುತ್ತಿದೆ. ಅಡಿಕೆ ಎಲೆಚುಕ್ಕಿ ರೋಗದಿಂದ ಕೃಷಿಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಹಾಗೂ ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ರಾಮ್ ನಾಥ್ ಠಾಕೂರ್ ಲಿಖಿತ ಉತ್ತರ ನೀಡಿದ್ದಾರೆ. ಅಡಿಕೆ ಗಿಡಗಳಿಗೆ ಸರಿಯಾದ ಮಾದರಿಯಲ್ಲಿ ಪೋಷಕಾಂಶಗಳು ನೀಡುವುದು ಮತ್ತು ಶಿಲೀಂಧ್ರನಾಶಕಗಳನ್ನು 4 ಬಾರಿ ಸಿಂಪಡಣೆ ಮಾಡುವುದರ ಮೂಲಕ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ರಾಷ್ಟ್ರೀಯ ವೈಜ್ಞಾನಿಕ ಸಮಿತಿ ತನ್ನ ಅಂತಿಮ ವರದಿಯನ್ನುಶಿಫಾರಸು ನೀಡಿದೆ. ಹಳದಿ ಎಲೆರೋಗ ನಿಯಂತ್ರಣಕ್ಕಾಗಿ, ರೋಗ ನಿರೋಧಕ ಅಡಿಕೆ ಮರಗಳನ್ನು ಗುರುತಿಸುವ ಮತ್ತು ಟಿಶ್ಯುಕಲ್ಟರ್ ಮೂಲಕ ಅದನ್ನು ವೃದ್ಧಿಸುವ ದೀರ್ಘಕಾಲೀನ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಎಲೆ ಚುಕ್ಕೆ ರೋಗವನ್ನು ನಿರ್ವಹಣೆಗೆ ಅಡಿಕೆ ಮತ್ತು ಸಾಂಬಾರ ಅಭಿವೃದ್ಧಿ ನಿರ್ದೇಶನಾಲಯವು ದೊಡ್ಡ ಪ್ರಮಾಣದ ಪ್ರಾತ್ಯಕ್ಷಿಕೆಗಳನ್ನು ಪ್ರಾರಂಭಿಸಿದೆ. 3 ವರ್ಷಗಳಲ್ಲಿ ಈ ಕಾರ್ಯಕ್ರಮಕ್ಕಾಗಿ ಒಟ್ಟು 6.31 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. 2023-24ನೇ ಸಾಲಿನಲ್ಲಿ ಅಡಿಕೆ ಎಲೆ ಚುಕ್ಕೆ ರೋಗದ ನಿರ್ವಹಣೆಗಾಗಿ ತೋಟಗಾರಿಕಾ ಇಲಾಖೆಯಿಂದ 8,661 ರೈತರಿಗೆ 250 ಲಕ್ಷ ರೂ.ಗಳ ಅನುದಾನ ನೀಡಲಾಗಿದೆ. ಅಲ್ಲದೇ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿಯಲ್ಲಿ, ಅಡಿಕೆ ಬೆಳೆ ಸೇರಿದಂತೆ ತೋಟಗಾರಿಕಾ ಬೆಳೆಗಳ ಸಮಗ್ರ ರೋಗ/ಕೀಟ ಮತ್ತು ಪೋಷಕಾಂಶ ನಿರ್ವಹಣೆಗೆ ಪ್ರತಿ ಹೆಕ್ಟೇರ್ಗೆ 1,500 ರೂ.ಗಳ ಸಹಾಯಧನವನ್ನು ನೀಡಲಾಗುತ್ತಿದೆ. 2025-26ರಲ್ಲಿ, ಆರ್ಡಬ್ಲ್ಯೂಬಿಸಿಐಎಸ್ ಅಡಿಯಲ್ಲಿ ಅಡಿಕೆ ವಿಮೆಗಾಗಿ ಒಟ್ಟು 6,52,440 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 1,18,345 ಶಿವಮೊಗ್ಗ ಜಿಲ್ಲೆಯಿಂದ ಬಂದಿವೆ ಮಾಹಿತಿ ನೀಡಿದ್ದಾರೆ.
ಅಡಿಕೆಯಲ್ಲಿ ಎಲೆ ಚುಕ್ಕೆ ರೋಗದ ನಿರ್ವಹಣೆಗಾಗಿ ಕೇಂದ್ರವು 2024-25ರಲ್ಲಿ ಕರ್ನಾಟಕ ರಾಜ್ಯ ತೋಟಗಾರಿಕಾ ಮಿಷನ್ಗೆ 3,700 ಲಕ್ಷ ರೂ.ಗಳನ್ನು ಮಂಜೂರು ಮಾಡಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ, ಕೇಂದ್ರವು 2025-26ರಲ್ಲಿ ಅಡಿಕೆಯಲ್ಲಿ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕಾಗಿ 860.65 ಲಕ್ಷ ರೂ.ಗಳನ್ನು ಹಂಚಿಕೆ ಮಾಡಿದೆ, ಅದರಲ್ಲಿ 189.25 ಲಕ್ಷ ರೂ.ಗಳನ್ನು ಶಿವಮೊಗ್ಗಕ್ಕೆ ಮೀಸಲಿಡಲಾಗಿದೆ. ಜಿಲ್ಲೆಯ 2,755 ರೈತರಿಗೆ ಇದುವರೆಗೆ 146.24 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಇದರ ಜೊತೆಗೆ ಅಡಿಕೆ ಬೆಳೆಯಲ್ಲಿನ ಇತರ ಅಧ್ಯಯನ ಹಾಗೂ ಪ್ರಯೋಗಗಳ ಬಗ್ಗೆ ಇಲಾಖೆ ಮಾಹಿತಿ ನೀಡಿದ್ದು, ಅಡಿಕೆ ಜೊತೆಗೆ ಮಿಶ್ರ ಕೃಷಿಯನ್ನೂ ಬೆಳೆಸುವ ಬಗ್ಗೆ ಈಗಾಗಲೇ ಸಲಹೆ ನೀಡಿದೆ. 2024-25 ರಿಂದ ಕರ್ನಾಟಕದ 10 ಎಲೆಚುಕ್ಕಿ ರೋಗ ಪೀಡಿತ ಅಡಿಕೆ ಬೆಳೆಯುವ ತಾಲೂಕುಗಳಲ್ಲಿ ಅಡಿಕೆಯಲ್ಲಿ ಎಲೆ ಚುಕ್ಕಿ ರೋಗದ ಸಮುದಾಯ ಆಧಾರಿತ ನಿರ್ವಹಣೆಯ ಕುರಿತು ಆಯ್ದ ರೈತರ ತೋಟಗಳಲ್ಲಿ ಕೆಲಸ ಮಾಡಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ 5 ಹೆಕ್ಟೇರ್ಗಳಂತೆ 50 ಹೆಕ್ಟೇರ್ ಪ್ರದೇಶವನ್ನು ಒಳಗೊಂಡು ಕೆಲಸ ಮಾಡಲಾಗುತ್ತಿದೆ. ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಶಿಫಾರಸು ಮಾಡಲಾದ ವೈಜ್ಞಾನಿಕ ನಿರ್ವಹಣಾ ಕ್ರಮಗಳನ್ನು ನಡೆಸಲಾಗುತ್ತಿದೆ. ಈ ಮೂಲಕ ಕೃಷಿಕರ ಗಮನ ಸೆಳೆಯುವ ಕೆಲಸ ಮಾಡಲಾಗುತ್ತಿದೆ.
ಕೊಳೆರೋಗ ನಿರ್ವಹಣೆಗೆ ಹೊಸದಾದ ಶಿಲೀಂದ್ರನಾಶಕವಾದ ಮಂಡಿಪ್ರೊಪಮೈಡ್ನ ಪರಿಣಾಮವನ್ನು ತಿಳಿಯಲು ಮಾದರಿ ತೋಟಗಳ ಕಡೆಗೆ ಗಮನಹರಿಸಲಾಗಿದೆ. ಅಡಿಕೆಯ ಕುಬ್ಬ ಹೈಬ್ರಿಡ್ ತಳಿಯ ಕಡೆಗೆ ಆದ್ಯತೆ ನೀಡಲಾಗುತ್ತಿದೆ. ಅಡಿಕೆಯಲ್ಲಿ ಹಳದಿ ಎಲೆರೋಗ ನಿರ್ವಹಣೆಯಲ್ಲಿ ಪ್ಲಾಸ್ಟಿಕ್ ಮಲ್ಟಿಂಗ್ ಪರಿಣಾಮವನ್ನು ಪ್ರದರ್ಶಿಸಲು ಮಾದರಿ ತೋಟಗಳನ್ನು ಸಿದ್ಧ ಮಾಡಲಾಗಿದೆ.
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆಗೆ, ಡಿಸೆಂಬರ್ ನಲ್ಲಿ ತೀವ್ರವಾಗಿ ಸೋಂಕಿತವಾದ ಅಡಿಕೆ ಮರದ ಸೋಗೆಗಳನ್ನು ಸಾಧ್ಯವಾದಲ್ಲೆಲ್ಲಾ ತೆಗೆದುಹಾಕುವುದು ಮತ್ತು ಸುಡುವುದು. ನಂತರ ಶಿಲೀಂಧ್ರನಾಶಕ ಸಿಂಪರಣೆ ಮಾಡಬೇಕಿದೆ. ಮಳೆಗಾಲದಲ್ಲಿ (ಜುಲೈ-ಆಗಸ್ಟ್) ಅಡಿಕೆಯ ಗೊನೆಯ ಮೇಲೆ ಸಿಂಪಡಿಸುವಾಗ ಬೋರ್ಡೆಕ್ಸ್ ಮಿಶ್ರಣವನ್ನು (1%) ಎಲೆಗಳ ಮೇಲೆ ಸಿಂಪಡಿಸಬಹುದು. ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ರೋಗ ಕಂಡುಬಂದರೆ, ಮೊದಲ ಸುತ್ತಿನ ಸಿಂಪಡಣೆಯನ್ನು ಪ್ರೊಪಿಕೊನಜೋಲ್ 25% ಇಸಿ (ಪ್ರತಿ ಲೀಟರ್ ನೀರಿಗೆ 1 ಮಿಲಿ) ಅಥವಾ ಟೆಬುಕೊನಜೋಲ್ (ಪ್ರತಿ ಲೀಟರ್ಗೆ 1 ಮಿಲಿ) ಸಿಂಪಡಿಸಬಹುದು, ನಂತರ ರೋಗದ ತೀವ್ರತೆಯನ್ನು ಅವಲಂಬಿಸಿ 25-30 ದಿನಗಳಲ್ಲಿ ಪ್ರೊಪಿನೆಬ್ 70% WP (ಪ್ರತಿ ಲೀಟರ್ ನೀರಿಗೆ 2 ಗ್ರಾಂ) ಎರಡನೇ ಸುತ್ತಿನ ಸಿಂಪಡಣೆಯನ್ನು ಮಾಡಬಹುದು. 200 ಲೀಟರ್ ದ್ರಾವಣದಲ್ಲಿ 100 ಮಿಲಿ ದ್ರಾವಣದೊಂದಿಗೆ ಸರ್ಫ್ಯಾಕ್ಟಂಟ್ಗಳು/ಸ್ಟಿಕ್ಕರ್ಗಳನ್ನು ಸೇರಿಸಬಹುದು. ಸಸ್ಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಬಾಧಿತ ಮರಗಳ ತ್ವರಿತ ಚೇತರಿಕೆಗೆ ಮಣ್ಣು ಪರೀಕ್ಷೆ ಆಧಾರಿತ ಸಮತೋಲಿತ ಪೋಷಕಾಂಶ ನಿರ್ವಹಣೆಯನ್ನು ಅನುಸರಿಸಬೇಕು ಎಂದು ಸಚಿವಾಲಯವು ಉತ್ತರದಲ್ಲಿ ತಿಳಿಸಿದೆ.

ನೋಡಿರಿ

