ಹೆಂಡತಿ ಕಣ್ಮುಂದೆ ಪ್ರಾಣಬಿಟ್ಟ ಗಂಡ – ಸಹಾಯಕ್ಕಾಗಿ ಅಂಗಲಾಚಿದರೂ ಮಾನವೀಯತೆ ಮರೆತ ಜನ
ಕಾಪಾಡಲಿಲ್ಲ ಜನ, ಕಣ್ಣು ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬ

ಹೆಂಡತಿ ಕಣ್ಮುಂದೆ ಪ್ರಾಣಬಿಟ್ಟ ಗಂಡ – ಸಹಾಯಕ್ಕಾಗಿ ಅಂಗಲಾಚಿದರೂ ಮಾನವೀಯತೆ ಮರೆತ ಜನಕಾಪಾಡಲಿಲ್ಲ ಜನ, ಕಣ್ಣು ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬ

ನಮ್ಮ ಜನ ಮಾನವೀಯತೆ ಬಗ್ಗೆ ಉದ್ದುದ್ದ ಮಾತಾಡುತ್ತಾರೆ. ಆದರೆ, ಕಣ್ಣೆದುರೇ ಜೀವ ಉಳಿಸಿ ಅಂತಾ ಒದ್ದಾಡುತ್ತಿದ್ದರೂ ಸಹಾಯ ಮಾಡಲು ಕೂಡಾ ಮನಸು ಮಾಡುವುದಿಲ್ಲ. ಇಂಥಾ ಒಂದು ದಾರುಣ ಘಟನೆ ನಡೆದಿದ್ದು ಬೆಂಗಳೂರಿನಲ್ಲಿ.

ಇದನ್ನೂ ಓದಿ:ದಲಿತ ಶಾಸಕರು, ಸಚಿವರು ಹಾಗೂ ಉದ್ಯಮಿಗಳ ಸಭೆ – ಸತೀಶ್ ಜಾರಕಿಹೊಳಿ ಕೊಟ್ಟ ಸಂದೇಶವೇನು?

34 ವರ್ಷದ ಗಂಡ. ಪಾಪದ ಹೆಂಡತಿಗೆ ಗಂಡನ ಉಳಿಸಿಕೊಳ್ಳಬೇಕೆಂಬ ಹಠ. ಎದೆಯಲ್ಲಿ ತುಂಬಾ ನೋವು ಕಂಡುಬಂದರೂ ಗಂಡನೇ ಬೈಕ್ ಓಡಿಸುತ್ತಾ ಜೊತೆಯಲ್ಲೇ ಹೆಂಡತಿಯನ್ನು ಕರೆದುಕೊಂಡು ಆಸ್ಪತ್ರೆಗೆ ಬರುತ್ತಾರೆ. ವಿಧಿ ನಿಯಮ ಹೇಗಿತ್ತು ನೋಡಿ. ಅಲ್ಲಿ ವೈದ್ಯರೇ ಇರೋದಿಲ್ಲ. ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ, ಅಲ್ಲಿಂದ ಇನ್ನೊಂದು ಆಸ್ಪತ್ರೆಗೆ.. ಆದರೆ, ಎದೆ ನೋವು ತೀವ್ರವಾಗುತ್ತದೆ. ಬೈಕ್ ನ ಕಂಟ್ರೋಲ್ ತಪ್ಪುತ್ತದೆ. ಗಂಡ ಹೆಂಡತಿ ರಸ್ತೆ ಮೇಲೆ ಬಿದ್ದು ನರಳಾಡುತ್ತಾರೆ. ದುರಂತವೇನು ಗೊತ್ತಾ?, ಒಬ್ಬರೂ ಕೂಡಾ ಸಹಾಯಕ್ಕೆ ಬರುವುದಿಲ್ಲ. ಗಂಡನನ್ನು ಕಾಪಾಡಿ ಎಂದು ಪತ್ನಿ ಅಂಗಲಾಚಿ ಬೇಡಿಕೊಳ್ಳುತ್ತಾರೆ. ಆದರೆ, ಸಹಾಯ ಸಿಗುವುದೇ ಇಲ್ಲ. ಗಂಡ ನರಳಿ ನರಳಿ ಜೀವ ಬಿಡುತ್ತಾರೆ. ಇಂಥಾದ್ದೊಂದು ಮನಕಲಕುವ ಘಟನೆ ನಡೆದಿದ್ದು ಬೆಂಗಳೂರಿನ ಕದಿರೇನಹಳ್ಳಿ ಕ್ರಾಸ್‌ನಲ್ಲಿ. ಆದರೆ, ಗಂಡನ ಸಾವಿನ ನೋವಲ್ಲೂ ಪತ್ನಿ ಪತಿಯ ಕಣ್ಣುಗಳನ್ನು ದಾನ ಮಾಡಿದ್ದಾರೆ. ತನಗೆ ಸಹಾಯ ಮಾಡದ ಸಮಾಜಕ್ಕೆ ಈ ಮೂಲಕ ಮಾನವೀಯತೆ ಪಾಠ ಮಾಡಿದ್ದಾರೆ.

ಅಂದಹಾಗೆ ಈ ರೀತಿ ದಾರುಣವಾಗಿ ಪ್ರಾಣಬಿಟ್ಟವರು ವೆಂಕಟರಮಣ ಎಂಬ ವ್ಯಕ್ತಿ. ಗಂಡನ ಕೊನೆ ಕ್ಷಣದ ಬಗ್ಗೆ ಪತ್ನಿ ಮಾಧ್ಯಮದವರ ಮುಂದೆ ವಿವರಿಸಿದ್ದಾರೆ. 13ನೇ ತಾರೀಖು ಬೆಳಗ್ಗೆ ಎದೆ ನೋವು ಕಾಣಿಸಿಕೊಳ್ತು, ನಾನು ನನ್ನ ಗಂಡ ಮಕ್ಕಳನ್ನ ಬಿಟ್ಟು ಆಸ್ಪತ್ರೆಗೆ ಹೋದ್ವಿ, ಅಲ್ಲಿ ಡ್ಯೂಟಿ ಡಾಕ್ಟರ್ ಇಲ್ಲ ಅಂದಿದ್ರು, ಆಮೇಲೆ ಪಕ್ಕದಲ್ಲೇ ಮತ್ತೊಂದು ಆಸ್ಪತ್ರೆಗೆ ಹೋದ್ವಿ, ನಂತರ ಇಸಿಜಿ ಮಾಡಿಸಿದ್ದು, ಬೇಗ ಜಯದೇವ ಆಸ್ಪತ್ರೆಗೆ ಹೋಗಲು ಹೇಳಿದ್ರು, ನಾವು ಬೈಕ್​​ನಲ್ಲಿ ಬಂದಿದ್ದೇವೆ ಅಂತಾ ಹೇಳಿದ್ರು. ಆಸ್ಪತ್ರೆಯವರು ಯಾವುದೆ ರೆಸ್ಪಾನ್ಸ್ ಮಾಡಿಲ್ಲ, ಆಂಬುಲೆನ್ಸ್ ಬಗ್ಗೆ ಕೂಡ ಏನು ಹೇಳಲಿಲ್ಲ, ನನ್ನ ಗಂಡ ಅಲ್ಲಿಂದ ಭಯದಲ್ಲೇ ಎದೆ ನೋವಲ್ಲೇ ಬೈಕ್ ಓಡಿಸಿಕೊಂಡು ಹೋದರು. ಕದಿರೇನಹಳ್ಳಿ ಕ್ರಾಸ್ ಹತ್ತಿರ ಎದೆ ನೋವು ಜಾಸ್ತಿ ಆಗಿ ಬೈಕ್​​ಗೆ ಕಂಟ್ರೋಲ್ ಸಿಗದೇ ಮುಂದೆ ಬೈಕ್​​ಗೆ ಡಿಕ್ಕಿ ಹೊಡೆದು ಬಿದ್ದರು. ನಾನು ಬಿದ್ದು, ಮುಖ ಎಲ್ಲಾ ರಕ್ತವಾಗಿತ್ತು, ಅವರು ನೋವಲ್ಲಿ ಒದ್ದಾಡ್ತಿದ್ರು, ಆಗ ನಾನು ಎದ್ದು ಸಹಾಯಕ್ಕೆ ಕಾಪಾಡಿ ಬನ್ನಿ ಅಂತ ಕೇಳಿಕೊಂಡೆ ಯಾರೂ ಬರಲಿಲ್ಲ, ಹತ್ತರಿಂದ 15 ನಿಮಿಷ ಒದ್ದಾಡಿದ್ರೂ ಯಾರೂ ಬರ್ಲಿಲ್ಲ, ಅಷ್ಟರಲ್ಲೇ ನಮ್ಮ ಪತಿ ಸಾವನ್ನಪ್ಪಿದ್ರು ಎಂದು ಪತ್ನಿ ರೂಪ ಕಣ್ಣೀರು ಹಾಕಿದ್ದಾರೆ. ಆವತ್ತು ಯಾರಾದರೂ ಒಬ್ಬರು ಸಹಾಯ ಮಾಡಿದ್ದರೆ ನಮ್ಮ ಗಂಡ ಬದುಕುತ್ತಿದ್ದರು. ಆಸ್ಪತ್ರೆಯಲ್ಲೂ ಸರಿಯಾಗಿ ನೋಡಿಲ್ಲ. ರಸ್ತೆಯಲ್ಲಿ ಬಿದ್ದ ಗಂಡನ ಸಹಾಯಕ್ಕೂ ಯಾರೂ ಬರಲಿಲ್ಲ, ನನಗೆ ಬಂದ ಸ್ಥಿತಿ ಯಾರಿಗೂ ಬರಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ ರೂಪ. ನಾನು ನನ್ನ ಪತಿಯ ಎರಡು ಕಣ್ಣುಗಳನ್ನ ದಾನ ಮಾಡಿದ್ದೇನೆ, ಅವರ ಕಣ್ಣುಗಳಾದ್ರು ಮತ್ತೊಬ್ಬರ ದೇಹದಲ್ಲಿ ಜೀವಂತವಾಗಿರುತ್ತೆ. ಆಕ್ಸಿಡೆಂಟ್ ಕೇಸ್ ಅಂತ ಆಸ್ಪತ್ರೆಯಲ್ಲಿ ಪ್ರೀಜರ್​ನಲ್ಲಿ ಇಟ್ಟಿದ್ದರು. ಇಲ್ಲದಿದ್ದರೆ, ದೇಹದ ಅಂಗಾಂಗಳನ್ನು ದಾನ ಮಾಡುತ್ತಿದ್ದೆವು ಎಂದು ರೂಪಾ ಹೇಳಿದ್ದಾರೆ.

ಈ ಘಟನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪೋಸ್ಟ್ ಹಾಕಿಕೊಂಡಿದ್ದಾರೆ. ನಮ್ಮ ಬೆಂಗಳೂರಿನ ಜನ ಮಾನವೀಯತೆಯ ವಿಚಾರದಲ್ಲಿ ಯಾಕೆ ಮುಂದೆ ಬರುವುದಿಲ್ಲ ಎಂದು ಅನೇಕರು ಪ್ರಶ್ನೆ ಕೇಳಿದ್ದಾರೆ. ಮತ್ತೆ ಕೆಲವರು ಕಣ್ಣಮುಂದೆ ವ್ಯಕ್ತಿ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದರು ಯಾರೂ ಸಹಾಯಕ್ಕೆ ಬಂದಿಲ್ಲ. ಆದರೆ, ಗಂಡ ಸತ್ತ ನೋವಲ್ಲೂ ಪತ್ನಿ ಕಣ್ಣುಗಳನ್ನು ದಾನ ಮಾಡಿ ಸಮಾಜ ಕಣ್ಣುತೆರೆದು ನೋಡಲಿ ಎಂಬ ಸಂದೇಶ ನೀಡಿದ್ದಾರೆ ಎಂಬ ಬಗ್ಗೆ ಬರೆದುಕೊಂಡಿದ್ದಾರೆ.

Sulekha