RCBಗೆ ಎಂಟ್ರಿ ಕೊಟ್ಟ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ – 4 ತಂಡಗಳ ಪೈಪೋಟಿಯಲ್ಲಿ ಗೆದ್ದ ಬೆಂಗಳೂರು

RCBಗೆ ಎಂಟ್ರಿ ಕೊಟ್ಟ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ –  4 ತಂಡಗಳ ಪೈಪೋಟಿಯಲ್ಲಿ ಗೆದ್ದ ಬೆಂಗಳೂರು

ಐಪಿಎಲ್‌ನಲ್ಲಿ ಆರ್‌ಸಿಬಿ ಈಗಾಗಲೇ ಬಲಿಷ್ಟ ತಂಡವನ್ನು ಹೊಂದಿದ್ದು, ಕಳೆದ ಸಾಲ ಕಪ್ ಕೂಡ ಹೊಡೆದಿತ್ತು.  ಆದರೂ, ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಫ್ರಾಂಚೈಸಿ ಆಲ್‌ರೌಂಡರ್ ಹುಡುಕಾಟದಲ್ಲಿತ್ತು. ಅದರಂತೆಯೇ ಭಾರತದ ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಹಾಲಿ ಚಾಂಪಿಯನ್ ಆರ್‌ಸಿಬಿ ಬಳಗಕಗಕ್ಕೆ ಸೇರ್ಪಡೆ ಆಗಿದ್ದಾರೆ. ಹಾಲಿ ಚಾಂಪಿಯನ್​ ಆರ್​ಸಿಬಿ ತಂಡ ಐಪಿಎಲ್‌ 2026ರ ಮಿನಿ ಹರಾಜಿ ನಲ್ಲಿ ಎಡಗೈ ಸ್ಫೋಟಕ ಬ್ಯಾಟರ್‌ ವೆಂಕಟೇಶ್‌ ಅಯ್ಯರ್‌  ಅವರನ್ನು 7 ಕೋಟಿಗೆ ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ. 2 ಕೋಟಿ ಮೂಲ ಬೆಲೆ ಹೊಂದಿದ್ದ ಅವರನ್ನು ಖರೀದಿಸಲು ಕೆಕೆಆರ್‌, ಲಕ್ನೋ ಮತ್ತು ಗುಜರಾತ್‌ ಪೈಪೋಟಿ ನಡೆಸಿತ್ತಾದರೂ ಅಂತಿಮವಾಗಿ ಆರ್‌ಸಿಬಿ ಕೈ ಮೇಲಾಯಿತು.

ಕಳೆದ ಆವೃತ್ತಿಯಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಕೆಕೆಆರ್‌ ತಂಡ 23.75 ಕೋಟಿ ರು. ವೆಂಕಟೇಶ್‌ ಅಯ್ಯರ್‌ ಅವರನ್ನು ಖರೀದಿಸಿತ್ತು. ಆ ಮೂಲಕ ಐಪಿಎಲ್‌ ಟೂರ್ನಿಯ ಕೆಕೆಆರ್‌ನ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ ಟೂರ್ನಿಯಲ್ಲಿ ಅವರು ಸಂಪೂರ್ಣ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಆಡಿದ್ದ 11 ಪಂದ್ಯಗಳಿಂದ ಕೇವಲ 142 ರನ್‌ಗಳನ್ನು ಕಲೆ ಹಾಕಿದ್ದರು.ಇದೇ ಕಾರಣಕ್ಕೆ ಅವರನ್ನು ಕೋಲ್ಕತಾ ಫ್ರಾಂಚೈಸಿ ತಂಡದಲ್ಲಿ ಉಳಿಸಿಕೊಳ್ಳದೆ ಹರಾಜಿಗೆ ಬಿಟ್ಟುಕೊಟ್ಟಿತ್ತು. ಕಳೆದ ಬಾರಿಯೂ ವೆಂಕಟೇಶ್‌ ಅಯ್ಯರ್‌ ಖರೀದಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಅಂತಿಮ ಹಂತದ ತನಕ ಬಿಡ್‌ ಮಾಡಿತ್ತು. ಆದರೆ ತನ್ನ ಬಳಿ ದೊಡ್ಡ ಮೊತ್ತ ಇಲ್ಲದ ಕಾರಣ ಹಿಂದೆ ಸರಿದಿತ್ತು. ಈ ಬಾರಿ 16 ಕೋಟಿಯೊಂದಿಗೆ ಹರಾಜಿಗಿಳಿದ ಆರ್‌ಸಿಬಿ 7 ಕೋಟಿ ಖರ್ಚು ಮಾಡಿ ವೆಂಕಟೇಶ್‌ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು.

ಭಾರೀ ನಿರೀಕ್ಷೆಯಲ್ಲಿದ್ದ ಮುಂಬೈ ಬ್ಯಾಟರ್‌ಗಳಾದ ಸರ್ಫರಾಜ್‌ ಖಾನ್‌ ಮತ್ತು ಪೃಥ್ವಿ ಶಾ ಆರಂಭಿಕ ಸುತ್ತಿನಲ್ಲಿ ಅನ್‌ಸೋಲ್ಡ್‌ ಆದರು. ಆಸ್ಟ್ರೇಲಿಯಾದ ಆಲ್‌ರೌಂಡರ್‌ ಕ್ಯಾಮರೂನ್‌ ಗ್ರೀನ್‌ ನಿರೀಕ್ಷೆಯಂತೆ 25.20 ಕೋಟಿ ಮೊತ್ತಕ್ಕೆ ಕೆಕೆಆರ್‌ ತಂಡ ಸೇರಿದರು. ಡೇವಿಡ್‌ ಮಿಲ್ಲರ್‌ 2 ಕೋಟಿ ಮೂಲ ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್‌ ಪಾಲಾದರು.

Kishor KV